ಬೆಂಗಳೂರು: ಉತ್ಥಾನ ಮಾಸಪತ್ರಿಕೆಯು ಹೊರತಂದಿರುವ ʼಆರೆಸ್ಸೆಸ್@100: ಹಿನ್ನೆಲೆ, ತಾತ್ವಿಕತೆ ಮತ್ತು ಸಾಧನೆʼ ಎಂಬ ಸಂಕ್ರಾಂತಿ-ಗಣರಾಜ್ಯೋತ್ಸವ ವಿಶೇಷಾಂಕ 2025 ಅನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ್ ಸಿ.ಆರ್. ಬಿಡುಗಡೆ ಮಾಡಿದರು.
ಬೆಂಗಳೂರಿನ (Bengaluru News) ಆರೆಸ್ಸೆಸ್‌ನ ಕೇಂದ್ರ ಕಛೇರಿ ʼಕೇಶವ ಕೃಪʼದಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹಾಗೂ ರಾಷ್ಟ್ರೋತ್ಥಾನ ಸಾಹಿತ್ಯ-ಉತ್ಥಾನದ ಪ್ರಧಾನ ಸಂಪಾದಕ ನಾಡೋಜ ಎಸ್.ಆರ್. ರಾಮಸ್ವಾಮಿ, ಆರ್‌ಎಸ್‌ಎಸ್‌ನ ದಕ್ಷಿಣ ಮಧ್ಯ ಕ್ಷೇತ್ರದ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ಕ್ಷೇತ್ರೀಯ ಪ್ರಚಾರಕ ಸುಧೀರ್ ಹಾಗೂ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ರಾಷ್ಟ್ರ ಸೇವಾಕಾರ್ಯದ ನೂರು ವರ್ಷಗಳನ್ನು ಪೂರೈಸುತ್ತಿರುವ ಈ ಮಹತ್ವದ ಸಂದರ್ಭದಲ್ಲಿ ‘ಉತ್ಥಾನ’ ಮಾಸಪತ್ರಿಕೆಯು ಸಂಘ ಕ್ರಮಿಸಿದ ದಾರಿ ಮತ್ತು ಕಟ್ಟಿದ ಇತಿಹಾಸ ಕುರಿತು ಈ ವಿಶೇಷಾಂಕವನ್ನು ಹೊರತಂದಿದೆ.
ಈ ಸುದ್ದಿಯನ್ನೂ ಓದಿ | Sankranti Shopping 2025: ವಾರಕ್ಕೂ ಮುನ್ನವೇ ಆರಂಭವಾದ ಸಂಕ್ರಾಂತಿ ಶಾಪಿಂಗ್!
ಈ ಸಂಚಿಕೆಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಜೀ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಪ್ರಧಾನಮಂತ್ರಿಗಳ ವಸ್ತುಸಂಗ್ರಹಾಲಯದ ಉಪಾಧ್ಯಕ್ಷ ಡಾ.ಎ. ಸೂರ್ಯಪ್ರಕಾಶ್, ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಾಂತಿಶ್ರೀ ಧುಲಿಪುಡಿ ಪಂಡಿತ್, ಡಾ. ರಾಮ್ ಮಾಧವ್, ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಭಿನ್ನನೆಲೆಯ ಹಲವು ವಿದ್ವಾಂಸರು, ಚಿಂತಕರ ಚರ್ಚೆ, ವಿಶ್ಲೇಷಣೆಗಳನ್ನೊಳಗೊಂಡ 27 ಲೇಖನಗಳಿವೆ ಎಂದು ʼಉತ್ಥಾನʼ ಸಂಪಾದಕ ಅನಿಲ್ ಕುಮಾರ್ ಮೊಳಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.