Saturday, 10th May 2025

Bengaluru News: ತುಮಕೂರಿನ ಮೇಲ್ಭಾಗದ ತಾಲೂಕುಗಳ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ: ಕೆ. ಜೈ ಪ್ರಕಾಶ್ ಸ್ಪಷ್ಟನೆ

Bengaluru News

ಬೆಂಗಳೂರು: ಶ್ರೀರಂಗ ಕುಡಿಯುವ ನೀರು (ಕುಣಿಗಲ್ ಎಕ್ಸ್‌ಪ್ರೆಸ್ ಲಿಂಕ್ ಕಾಲುವೆ) ಗುರುತ್ವ ಪೈಪ್‌ಲೈನ್ ಯೋಜನೆ ಮೂಲಕ ಕುಣಿಗಲ್ ಭಾಗಕ್ಕೆ ಹೇಮಾವತಿ ನೀರನ್ನು ಹರಿಸುವುದರಿಂದ ತುಮಕೂರು ಭಾಗಕ್ಕೆ ನಿಗದಿಯಾಗಿರುವ ನೀರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಯಾರ ಪಾಲಿನ ನೀರನ್ನೂ ಈ ಯೋಜನೆಯಿಂದ ಕಡಿತಗೊಳಿಸುವುದಿಲ್ಲ ಎಂದು ಉಪ ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರ ಕೆ. ಜೈ ಪ್ರಕಾಶ್ ಹೇಳಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಶನಿವಾರ ನಗರದ (Bengaluru News) ಕಾವೇರಿ ನೀರಾವರಿ ನಿಗಮ ನಿಯಮಿತ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಣಿಗಲ್ ಭಾಗಕ್ಕೆ ಅವಶ್ಯಕ ನೀರನ್ನು ಹರಿಸುವ ಗುರುತ್ವ ಪೈಪ್ ಲೈನ್ ಕಾಮಗಾರಿಯಿಂದಾಗಿ ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ ಮತ್ತು ತುಮಕೂರು ಸೇರಿ ಮೇಲಿನ ಭಾಗದ ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.

ಈ ಸುದ್ದಿಯನ್ನೂ ಓದಿ | DK Shivakumar: ಕೋವಿಡ್ ಅಕ್ರಮ; ಹಣ ತಿಂದವರನ್ನು ಬಿಡುವುದಿಲ್ಲ ಎಂದ ಡಿಕೆಶಿ

ಕಾಲುವೆಯ ಕಿ.ಮೀ. 70.00 ರಿಂದ ಕೊನೆಯ ಭಾಗದ ಕಿ.ಮೀ. 228.00 ರವರೆಗೆ ಅಂದರೆ ಮೇಲ್ಬಾಗ, ಮಧ್ಯ ಭಾಗ, ಕೆಳಭಾಗದ ಎಲ್ಲರಿಗೂ ನ್ಯಾಯಸಮ್ಮತ ನೀರಿನ ಹಂಚಿಕೆಯೇ ಈ ಯೋಜನೆಯ ಉದ್ದೇಶ ಎಂದು ಹೇಳಿದರು.

ಕುಣಿಗಲ್ ಭಾಗಕ್ಕೆ ಶೇ. 89.27 ರಷ್ಟು ನೀರಿನ ಕೊರತೆ

ತುಮಕೂರು ಶಾಖಾ ನಾಲೆಯ ಮೂಲಕ ಕಳೆದ 10 ವರ್ಷಗಳಿಂದ ಕುಣಿಗಲ್ ಭಾಗಕ್ಕೆ ನಿಗದಿಪಡಿಸಿದ 3.676 ಟಿಎಂಸಿ ನೀರಿನಲ್ಲಿ ಇದುವರೆಗೂ ಕೇವಲ ಶೇ. 10.73 ರಷ್ಟು ನೀರು ಮಾತ್ರ ಹರಿದಿದ್ದು, ಆ ಭಾಗಕ್ಕೆ ಶೇ. 89.27 ರಷ್ಟು ನೀರಿನ ಕೊರತೆ ಉಂಟಾಗಿದೆ. ನಿಗದಿಯಾದ ನೀರು ಕಾಲುವೆ ಕೊನೆ ಭಾಗಕ್ಕೆ ತಲುಪುತ್ತಿಲ್ಲ ಎಂದರು.

ಈ ಲಿಂಕ್ ಎಕ್ಸ್‌ಪ್ರೆಸ್ ಕಾಲುವೆ ನಿರ್ಮಾಣದಿಂದ ತುಮಕೂರು ಹೇಮಾವತಿ ಶಾಖಾ ನಾಲೆಯ ಮೇಲ್ಬಾಗದವರ ಹಂಚಿಕೆ ನೀರಿನ ಪ್ರಮಾಣವನ್ನು ಕಡಿತಗೊಳಿಸುವುದಿಲ್ಲ. ಕಾಲುವೆ ಕೊನೆಭಾಗಕ್ಕೆ ನೀರು ನೀಡುವ ಖಾತರಿಗಾಗಿ ಆ ಭಾಗದ ಜನರ ಪಾಲಿನ ನೀರನ್ನು ಅವರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.

ಕುಣಿಗಲ್ ಭಾಗ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತಿದ್ದರೂ ಕಳೆದ 10 ವರ್ಷಗಳಿಂದ ಕಾಲುವೆಯ ಕೊನೆ ಭಾಗ ಸಮರ್ಪಕ ನೀರನ್ನು ಪಡೆಯುತ್ತಿಲ್ಲ. ಕುಡಿಯುವ ನೀರಿಗಾಗಿ ಕಾಲುವೆಯ ಮೇಲ್ಭಾಗದಲ್ಲಿರುವ ಶಿರಾ ಹಾಗೂ ಚಿಕ್ಕನಾಯಕನಹಳ್ಳಿ ಯಾವುದೇ ಅಡೆತಡೆಯಿಲ್ಲದೆ ನೀರನ್ನು ಪಡೆಯುತ್ತಿವೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Lakshmi Hebbalkar: ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಜೀವನಾಧಾರ; ಲಕ್ಷ್ಮೀ ಹೆಬ್ಬಾಳಕರ್

ಪ್ರಸ್ತುತ ಇರುವ ಕಾಲುವೆ ಮೂಲಕ ನೀರು ಸುತ್ತುಬಳಸಿಕೊಂಡು ಕುಣಿಗಲ್ ಭಾಗಕ್ಕೆ ಹೋಗುತ್ತಿದೆ. ಬಾಗೂರು- ನವಿಲೇ ಸುರಂಗ ಕಾಲುವೆ ಅಂತ್ಯಗೊಂಡ ನಂತರ ಕಾಲುವೆಯ 70. 00 ಕಿಮೀ ಬಳಿ ಪೈಪ್ ಲೈನ್ ಅಳವಡಿಸಲಾಗುವುದು. ಇದನ್ನು ಕಾಲುವೆಯ ಇನ್ನೊಂದು ತುದಿ ಅಂದರೆ 166.90 ಕಿಮೀ ಬಳಿ ಮತ್ತೆ ಜೋಡಿಸಲಾಗುವುದು. ಈ ಪೈಪ್ ಲೈನ್ ಉದ್ದ 34.54 ಕಿಮೀ ಇರಲಿದ್ದು, ಇದರ ಮುಖಾಂತರ 388 ಕ್ಯೂಸೆಕ್ಸ್ ನೀರು ಹರಿಸಬಹುದು ಎಂದು ಹೇಳಿದರು.

₹207.38 ಕೋಟಿ ಆಥಿಕ ಪ್ರಗತಿ

“ಶ್ರೀರಂಗ ಕುಡಿಯುವ ನೀರಿನ ಯೋಜನೆ ಸಂಬಂಧ ಫೆ.03 2024 ರಂದು ಟೆಂಡರ್ ಆಹ್ವಾನಿಸಿ, ಪ್ರಕ್ರಿಯೆ ಮುಗಿಸಲಾಗಿದೆ. ಈ ಯೋಜನೆಯ ಗುತ್ತಿಗೆ ಮೊತ್ತ ₹918.43 ಕೋಟಿ ರೂಪಾಯಿ. ಯೋಜನೆಯು ಈಗಾಗಲೇ ಶೇ. 22.57 ರಷ್ಟು ಆರ್ಥಿಕ ಪ್ರಗತಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಕಾಲುವೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿ ತುಮಕೂರು ಭಾಗದ ಜನಪ್ರತಿನಿಧಿಗಳು, ಸ್ಥಳೀಯ ನಾಯಕರು, ರೈತರು, ಸಂಘ- ಸಂಸ್ಥೆಗಳು ಪ್ರತಿಭಟನೆ ನಡೆಸಿದ್ದರು. ಕೆಡಿಪಿ ಸಭೆಯಲ್ಲಿಯೂ ಕೆಲವು ಶಾಸಕರು ಅಸಮಾಧಾನ ವ್ಯಕ್ತವಾದ ಕಾರಣಕ್ಕೆ, ಈ ಯೋಜನೆ ಕುರಿತಾಗಿ ತಾಂತ್ರಿಕ ಸಮಿತಿ ರಚಿಸಿ, ವರದಿ ನೀಡುವಂತೆ ಉಪ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವ ಡಿ. ಕೆ. ಶಿವಕುಮಾರ್ ಅವರು ಸೂಚನೆ ನೀಡಿದ್ದರು. ನಿವೃತ್ತ ಮುಖ್ಯ ಎಂಜಿನಿಯರ್‌ಗಳು ಹಾಗೂ ಒಬ್ಬ ಅಧೀಕ್ಷಕ ಎಂಜಿನಿಯರ್ ಸೇರಿ ನಾಲ್ವರು ಸದಸ್ಯರನ್ನು ಒಳಗೊಂಡ ಸಮಿತಿಯು ಅಧ್ಯಯನ ನಡೆಸಿ ವರದಿ ನೀಡಿದೆ ಎಂದು ಹೇಳಿದರು.

ವರದಿಯ ಪ್ರಮುಖ ಅಂಶಗಳು

“ತುಮಕೂರು ಶಾಖಾ ನಾಲೆಯ ಸರಪಳಿಯ 70 ಕಿಮೀ ಬಳಿ ಗುರುತ್ವ ಪೈಪ್ ಲೈನ್ ಮೂಲಕ ಶ್ರೀರಂಗ ಕೆರೆ ತುಂಬುವ ಯೋಜನೆಗೆ ನೀರು ಸರಬರಾಜು ಮಾಡುವ ಯೋಜನೆಯನ್ನು Supervisory Control and Data Acquisition (SCADA) ವ್ಯವಸ್ಥೆ ಅಳವಡಿಸಿಕೊಂಡು, ನೀರನ್ನು ಹರಿಸಬಹುದು.”

“ಈ ವ್ಯವಸ್ಥೆ ಮೂಲಕ 3.676 ಟಿಎಂಸಿ ನೀರು ಹರಿದು ಹೋಗುವಂತೆ ವಿನ್ಯಾಸಗೊಳಿಸಬಹುದು. ಜೊತೆಗೆ ಕರ್ನಾಟಕ ನೀರಾವರಿ ಕಾಯ್ದೆ 1965 ಗೆ 16.08.2024 ರಲ್ಲಿ ಮಾಡಿದ ತಿದ್ದುಪಡಿಯಂತೆ ಅನಧಿಕೃತ ನೀರಿನ ಬಳಕೆಯನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವುದು.”

“ತುಮಕೂರು ಶಾಖಾ ನಾಲೆಯಲ್ಲಿ ನೀರು ನಿರ್ವಹಣೆಗೆ ON and OFF ವ್ಯವಸ್ಥೆ ಅಳವಡಿಸಿಕೊಂಡು ಕಾರ್ಯ ನಿರ್ವಹಣೆ ಮಾಡಬೇಕು” ಎಂದು ಸಮಿತಿ ಮಾಡಿದ ಶಿಫಾರಸ್ಸುಗಳ ಸಾರಾಂಶದ ಮಾಹಿತಿ ನೀಡಿದರು.

ಈ ಸುದ್ದಿಯನ್ನೂ ಓದಿ | Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್‌ ವ್ಯತ್ಯಯ

ತಾಂತ್ರಿಕ ವರದಿ ಅಂಗೀಕಾರ

ಈ ತಾಂತ್ರಿಕ ವರದಿಯನ್ನು ಈಗಾಗಲೇ ಸರ್ಕಾರ ಕೂಲಂಕುಷವಾಗಿ ಪರಿಶೀಲಿಸಿ, ಅಂಗೀಕರಿಸಿದೆ. ಈ ಯೋಜನೆಯ ಅನುಷ್ಠಾನದ ವೇಳೆ ಸಮಿತಿಯ ಶಿಫಾರಸ್ಸುಗಳಂತೆ ಕಾಮಗಾರಿಯನ್ನು ನಿರ್ವಹಿಸಿ, ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸಬೇಕು ಎಂದು ಅಕ್ಟೋಬರ್‌ 19 2024 ರ ಸರ್ಕಾರದ ಪತ್ರದಲ್ಲಿ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ತಾಂತ್ರಿಕ ಸಲಹೆಗಾರ ಕೆ. ಜೈ ಪ್ರಕಾಶ್ ಹೇಳಿದರು.