ಬೆಂಗಳೂರು: ನಗರದ ಸಂಗೀತ ಸಂಭ್ರಮ ಇನ್‌ಸ್ಟಿಟ್ಯೂಷನ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆಯ ವತಿಯಿಂದ ಜನವರಿ 2 ರಿಂದ 5 ರವರೆಗೆ ನಗರದ (Bengaluru News) ಮಲ್ಲೇಶ್ವರದ ಸೇವಾ ಸದನದಲ್ಲಿ 14ನೇ ವರ್ಷದ ನಿರಂತರಂ- ರಾಷ್ಟ್ರೀಯ ಸಂಗೀತ ಮತ್ತು ನೃತ್ಯ ಮಹೋತ್ಸವ ಹಮ್ಮಿಕೊಂಡಿದೆ. ಬೆಂಗಳೂರು ಸೇರಿದಂತೆ ದೇಶ- ವಿದೇಶದ ಸಂಗೀತ- ನೃತ್ಯ ವಿದ್ವಾಂಸರು, ಪರಿಣತರು, ವಿವಿಧ ರಂಗದ ಸಾಧಕರು, ಉದಯೋನ್ಮುಖ ಪ್ರತಿಭೆಗಳು ಭಾಗವಹಿಸುತ್ತಿರುವುದು ವಿಶೇಷ.
ಜ.2 ರಂದು ಸಂಜೆ 5ಕ್ಕೆ ನಿವೃತ್ತ ಸಹಾಯಕ ಪೊಲೀಸ್ ಕಮಿಷನರ್ ಬಿ.ಕೆ. ಶಿವರಾಂ ‘ನಿರಂತರಂ’ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಂಗೀತ- ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ, ನಿರಂತರಂ ಉತ್ಸವದ ರೂವಾರಿ ವಿದುಷಿ ಪುಸ್ತಕಂ ರಮಾ ಉಪಸ್ಥಿತರಿರಲಿದ್ದಾರೆ. ಸಂಗೀತ ಸಂಭ್ರಮ ತಂಡದ ಕಲಾವಿದರ ಭಕ್ತಿ ಸಂಗೀತ ಗಾಯನವು ಉತ್ಸವಕ್ಕೆ ಮುನ್ನುಡಿ ಬರೆಯಲಿದೆ. ನವ ಪ್ರತಿಭೆಗಳಾದ ಕಿರಣ್ ಜೋಶ್ಯರ್- ನಂದನ್ ಜೋಶ್ಯರ್ ದ್ವಂದ್ವ ಗಾಯನದ ನಂತರ ಖ್ಯಾತ ಕಲಾವಿದೆ ಅಂಜಲಿ ಶ್ರೀರಾಮ್ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಪ್ರಸ್ತುತಪಡಿಸಲಿದ್ದಾರೆ. ನಾಟ್ಯಾಲಯ ಸ್ಕೂಲ್ ಆಫ್ ಡಾನ್ಸ್ ಕಲಾವಿದರಿಂದ ‘ನೃತ್ಯ ಪ್ರವೇಶಂʼ ರೂಪಕವಿದೆ.
ಭರತನಾಟ್ಯ ಪ್ರಸ್ತುತಿ
ವಿದ್ವಾನ್ ಯೋಗೇಶ ಕುಮಾರ್- ಸ್ನೇಹಾ ನಾರಾಯಣ ಅವರ ದ್ವಂದ್ವ ಭರತ ನಾಟ್ಯ ನಂತರ ಲಲಿತಾ ಕಲಾ ನಿಕೇತನ ತಂಡದಿಂದ ಭರತನಾಟ್ಯ ಪ್ರೇಕ್ಷಕರನ್ನು ರಂಜಿಸಲಿದೆ.
ಈ ಸುದ್ದಿಯನ್ನೂ ಓದಿ | KSRTC news: ರಾಜ್ಯದ ಹೆಮ್ಮೆಯ ಕೆಎಸ್‌ಆರ್‌ಟಿಸಿಗೆ 9 ರಾಷ್ಟ್ರೀಯ ಪ್ರಶಸ್ತಿ!
ಜ. 3 ರಂದು ಶುಕ್ರವಾರ ಸಂಜೆ 5ಕ್ಕೆ ಕಾರ್ಯಕ್ರಮಕ್ಕೆ ಹಿರಿಯ ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ, ಅನನ್ಯ – ರಾಘವೇಂದ್ರ ಚಾಲನೆ ನೀಡಲಿದ್ದಾರೆ. ಸಂಗೀತ ಸಂಭ್ರಮ – ತಂಡದಿಂದ ಭಕ್ತಿ ಸಂಗೀತ, ನಂತರ ಪೂರ್ವಿ ಸಂಗೀತ ಅಕಾಡೆಮಿ ಕಲಾವಿದ ರಿಂದ ಗಾಯನವಿದೆ. ನಂತರ ವಿದುಷಿ ಲಾವಣ್ಯಾ ಕೃಷ್ಣಮೂರ್ತಿ ತಂಡದಿಂದ ಕಚೇರಿ ಸಂಪನ್ನಗೊಳ್ಳಲಿದೆ. ಭರತನಾಟ್ಯ ಸರಣಿಯಲ್ಲಿ ಅಮೆರಿಕದ ಡಲ್ಲಾಸ್‌ನ ಶಶಾಂಕ ಈಶ್ವರ್, ಆಸ್ಟಿನ್‌ನ ಅಕ್ಷೈನಿ ಕಮ್ಮ ಹಾಗೂ ಚಿಕಾಗೋನ ಅದಿತಿ ರಾಂ ನರ್ತನ ಪ್ರೌಢಿಮೆ ಅನಾವರಣಗೊಳ್ಳಲಿದೆ.
ಜ. 4ರಂದು ಶನಿವಾರ ದಿನಪೂರ್ಣ ಸಂಗೀತ- ನೃತ್ಯ ಸಮಾರಾಧನೆ ನೆರವೇರಲಿದೆ. ಬೆಳಗ್ಗೆ 10ಕ್ಕೆ ನಾಟ್ಯಾಲಯ ಸ್ಕೂಲ್ ಆಫ್ ಡಾನ್ಸ್ (ಆಸ್ಟಿನ್) ಗುರು ವಿನಿತಾ ದೀಪ ಬೆಳಗಿಸಲಿದ್ದಾರೆ. ನರ್ತನ ಸರಣಿಯಲ್ಲಿ ಸ್ವರಾ ಕೃಷ್ಣರಾವ್- ಅಕ್ಷಾ ಶ್ರೀವತ್ಸಂ- ರಾವಳಿ, ಸ್ನೇಹಾ ಭಾಗವತ್ ಭರತನಾಟ್ಯ ಮುದ ನೀಡಲಿದೆ. ಕೌಸಲ್ಯಾ ನಿವಾಸ್ ತಂಡದಿಂದ ರಾಮಪ್ರಿಯ ತುಳಸಿದಾಸ – ವಿಶೇಷ ನೃತ್ಯರೂಪ ಜರುಗಲಿದೆ. ವಿಶ್ವ ಸಂಗೀತ ವಾಗ್ಗೇಯಕಾರರಿಗೆ ಮತ್ತು ಸಂಯೋಜಕರಿಗೆ ನಮನ ಸಲ್ಲಿಸುವ ದಿಸೆಯಲ್ಲಿ ಸಿದ್ಧಪಡಿಸಿರುವ ‘ ಎಂದರೋ ಮಹಾನುಭಾವುಲುʼ ಪ್ರೇಕ್ಷಕರ ಮನದಂಗಳದಲ್ಲಿ ಹೊಸ ಪಲ್ಲವಗಳನ್ನೇ ಸೃಷ್ಟಿ ಮಾಡಲಿದೆ.
ಜ. 5 ರಂದು ಭಾನುವಾರ ಸಂಜೆ 5.30ಕ್ಕೆ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀ ನಾರಾಯಣ ರಾಮಾನುಜ ಜೀಯುರ್ ಸಾನಿಧ್ಯದಲ್ಲಿ ಉತ್ಸವದ ಪ್ರಮುಖ ಘಟ್ಟ ಕಳೆಗಟ್ಟಲಿದೆ. ಇತ್ತೀಚೆಗೆ ನಿಧನರಾದ ವಿದುಷಿ ಆರ್. ಚಂದ್ರಿಕಾ ಅವರಿಗೆ ವಿಶೇಷ ನಮನ ಸಲ್ಲಿಸಲು ಸಂಗೀತ ಸಂಭ್ರಮ ತಂಡ ‘ ನಾದ ಚಂದ್ರಿಕಾʼ ರೂಪಕ ಸಿದ್ಧಪಡಿಸಿದೆ. ವಿದುಷಿ ಡಾ. ನಾಗಮಣಿ ಶ್ರೀನಾಥ್ ನಿರ್ದೇಶನದ ಈ ಕಾರ್ಯಕ್ರಮದಲ್ಲಿ ಕಲಾಪೋಷಕ ಡಿ.ಎಸ್. ಉಮೇಶ್ ಉಪಸ್ಥಿತರಿರಲಿದ್ದಾರೆ.
ಈ ಸುದ್ದಿಯನ್ನೂ ಓದಿ | Stock Market: ಸೆನ್ಸೆಕ್ಸ್ 700 ಅಂಕ ಏರಿಕೆ, ನಿಫ್ಟಿ 23,950ಕ್ಕೆ ಹೈ ಜಂಪ್- ಹಣಕಾಸು, ಆಟೊಮೊಬೈಲ್, ಐಟಿ ಷೇರುಗಳಿಗೆ ಲಾಭ
14 ಕಲಾವಿದರಿಗೆ ಸನ್ಮಾನ
ಹಿರಿಯ ವಿದುಷಿ ಪುಸ್ತಕಂ ರಮಾ ನೇತೃತ್ವದಲ್ಲಿ ಜ. 5 ರಂದು ಸಂಜೆ 7ಕ್ಕೆ ನಾಡಿನ ಪ್ರಖ್ಯಾತ 14 ವಿದ್ವಾಂಸರು- ಕಲಾರಾಧಕರನ್ನು ಗೌರವಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.