ಬೆಂಗಳೂರು: ಸಹಜ ಯೋಗ ಸಂಸ್ಥೆಯ ವತಿಯಿಂದ ಡಿ.15 ರಂದು ಭಾನುವಾರ ಬೆಂಗಳೂರು (Bengaluru News) ನಗರದ ಭಾರತ್ ಸ್ಕೌಟ್ಸ್ ಸಭಾಂಗಣದಲ್ಲಿ ಉಚಿತ ಧ್ಯಾನದ ಕ್ರಮ ಕಲಿಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಧ್ಯಾನಕ್ರಮದಲ್ಲಿ ನಂಬಿಕೆ ಮತ್ತು ಆಸಕ್ತಿ ಇರುವವರಿಗೆಲ್ಲ ಮಾಹಿತಿಯ ಜತೆಗೆ ಕಲಿಕೆಯನ್ನು ಉಚಿತವಾಗಿ ತಿಳಿಸಿಕೊಡಲು ಸಂಸ್ಥೆ ಕಾರ್ಯಕ್ರಮ ರೂಪಿಸಿದೆ. ಸಹಜ ಯೋಗ – ಇಂದಿನ ಮಹಾ ಯೋಗ ಎಂಬ ಹೆಸರಿನಲ್ಲಿ ಕುಂಡಲಿನೀ ಜಾಗೃತಿ ಮೂಲಕ ಆತ್ಮ ಸಾಕ್ಷಾತ್ಕಾರ ಪಡೆಯುವ ಮಾರ್ಗವನ್ನ ತಿಳಿಸಿ ಕೊಡಲಾಗುತ್ತದೆ ಎಂದು ತಿಳಿಸಿದೆ.
ಒತ್ತಡ ರಹಿತ ಹಾಗೂ ನೆಮ್ಮದಿಯ ಬದುಕಿಗೆ ಧ್ಯಾನವೇ ಮಹಾಮದ್ದು ಎಂಬುದನ್ನ ವಿಶ್ವವೇ ಒಪ್ಪಿ ಅನುಸರಿಸುತ್ತಿದೆ. ಆಧುನಿಕ ಬದುಕಿನ ಜಂಜಡಗಳಿಂದ ಮುಕ್ತಿ ಹೊಂದುವುದಕ್ಕೆ ಧ್ಯಾನ ಎಂಬುದು ಮಹಾ ಮಾರ್ಗವಾಗಿದೆ. ಆ ನಿಟ್ಟಿನಲ್ಲಿ ಮಾತಾಜಿ ನಿರ್ಮಲಾ ದೇವಿ ಅವರು 1970ರಲ್ಲಿ ಕಂಡುಕೊಂಡ ಧ್ಯಾನಕ್ರಮವು ಎಲ್ಲ ಚಿಂತೆಗಳಿಂದ ದೂರ ಮಾಡಬಲ್ಲ ಸರಳ ವಿಧಾನ ಎನ್ನುತ್ತದೆ ಸಹಜ ಯೋಗ ಸಂಸ್ಥೆ. ಸಹಜ ಧಾರಾ ಎಂಬ ಪರಿಕಲ್ಪನೆಯಲ್ಲಿ ಸಂಗೀತದ ಜತೆಗೆ ಆತ್ಮ ಸಾಕ್ಷಾತ್ಕರ ಪಡೆದುಕೊಳ್ಳುವ ಕ್ರಮ ತಿಳಿಸಿಕೊಡುವುದು ಕಾರ್ಯಕ್ರಮದ ಉದ್ದೇಶ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Traveled Destination: 2024ರಲ್ಲಿ ಭಾರತೀಯರು ಗೂಗಲ್ನಲ್ಲಿ ಹೆಚ್ಚು ಹುಡುಕಿದ ಪ್ರವಾಸಿ ತಾಣಗಳಿವು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುಲಕೇಶಿನಗರ ಸಬ್ಡಿವಿಜನ್ ಎಸಿಪಿ ಸಿ.ಆರ್. ಗೀತಾ, ನಿರ್ದೇಶಕಿ ಮತ್ತು ನಟಿ ರೂಪಾ ಅಯ್ಯರ್, ಸಂಗೀತ ನಿರ್ದೇಶಕಿ ಮತ್ತು ಗಾಯಕಿ ಮಾನಸ ಹೊಳ್ಳ ಹಾಗೂ ನಟಿ ರಾಧಿಕಾ ನಾರಾಯಣ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಸಂಗೀತ ಕ್ಷೇತ್ರದ ದಿಗ್ಗಜ ಸಂಗೀತ ನಿರ್ದೇಶಕ ಧನಂಜಯ ಧಮಾಲ್, ಸಿತಾರ ವಾದಕ ಡಾ.ಜಯಂತ ಕುಮಾರ್ ದಾಸ್, ನೃತ್ಯಪಟು ಪ್ರೀತಿ ಸಂಡೂರ ಹಾಗೂ ಕೊಳಲು ವಾದಕ ಶಕ್ತಿಧಾರ್, ರಾಜೇಂದ್ರಸಿಂಗ್ ಪವಾರ್, ಹಾರ್ಮೋನಿಯಂ, ವಿಕಾಸ್ ಜೈಸ್ವಾಲ್ ಗಿಟಾರ್ ಪಾಲ್ಗೊಳ್ಳಲಿದ್ದಾರೆ. ಸಂಗೀತದ ಜತೆ, ಜತೆಗೆ ಧ್ಯಾನವನ್ನು ಹೇಳಿಕೊಡುವ ವಿಶಿಷ್ಟ ಕಾರ್ಯಕ್ರಮ ಇದಾಗಿದ್ದು, ಇದರಲ್ಲಿ ಪಾಲ್ಗೊಳ್ಳುವುದು ಸಂಪೂರ್ಣ ಉಚಿತವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.