Wednesday, 14th May 2025

Belagavi Winter Session 2024: ಅನುಭವ ಮಂಟಪದ ತೈಲಚಿತ್ರದ ಅನಾವರಣ ನನ್ನ ಕೈಯಿಂದ ಆಗಿರುವುದು ಸೌಭಾಗ್ಯ ಎಂದ ಸಿದ್ದರಾಮಯ್ಯ

CM Siddaramaiah

ಬೆಳಗಾವಿ: 12ನೇ ಶತಮಾನದಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ, ಮನುಷ್ಯ ಶೋಷಣೆಯ ವ್ಯವಸ್ಥೆ ಹೋಗಲಾಡಿಸಿ, ಜಾತಿ ರಹಿತ ಸಮ ಸಮಾಜ ತರಬೇಕು ಎನ್ನುವ ಉದ್ದೇಶದಿಂದ ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನು ಮಾಡಿದರು. ಅನುಭವ ಮಂಟಪದ ತೈಲಚಿತ್ರದ ಅನಾವರಣ ನನ್ನ ಕೈಯಿಂದ ಆಗಿರುವುದು ನನ್ನ ಸೌಭಾಗ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಸುವರ್ಣಸೌಧದಲ್ಲಿ ಅನುಭವ ಮಂಟಪದ ತೈಲಚಿತ್ರ ಅಳವಡಿಸಿದ್ದರ ಸಂಬಂಧ ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ (Belagavi Winter Session 2024) ಅವರು ಮಾತನಾಡಿದರು.

ಈ ಸುದ್ದಿಯನ್ನೂ ಓದಿ | New RBI Governor: RBI ನೂತನ ಗವರ್ನರ್‌ ಆಗಿ ಸಂಜಯ್‌ ಮಲ್ಹೋತ್ರಾ ನೇಮಕ

ಮೇಲು-ಕೀಳು ಇರುವುದು, ಮನುಷ್ಯ ತಾರತಮ್ಯ ಇರುವುದು ಧರ್ಮ ಆಗಲು ಸಾಧ್ಯವಿಲ್ಲ. ದಯೆಯೇ ಧರ್ಮದ ಮೂಲ ಎಂದು ಅವಿದ್ಯಾವಂತರಿಗೂ ಅರ್ಥ ಆಗುವಂತೆ ಧರ್ಮವನ್ನು ಬೋಧಿಸಿದರು. ಮದುವೆ ಕೂಡ ಜಾತಿ ಆಧಾರದಲ್ಲಿ ಏರ್ಪಡಿಸಲಾಗುತ್ತಿತ್ತು.‌ ವ್ಯಕ್ತಿಯ ಯೋಗ್ಯತೆಯನ್ನು ಜಾತಿ, ವರ್ಣ ವ್ಯವಸ್ಥೆ ಆಧಾರದ ಮೇಲೆ ನಿರ್ಧಾರ ಆಗುತ್ತಿತ್ತು.‌ ಪ್ರತಿಭೆ ಕೂಡ ಯೋಗ್ಯತೆ ಆಧಾರದ ಮೇಲೆ ನಿರ್ಧಾರ ಆಗದೆ ಜಾತಿ ಆಧಾರದಲ್ಲಿ ನಿರ್ಧರಿಸಲಾಗುತ್ತಿತ್ತು.

ಆರ್. ಅಶೋಕ್, ಅಶ್ವಥ್ ನಾರಾಯಣ್, ಯತ್ನಾಳ್ ಅವರೇ ನೀವೂ ಶೂದ್ರರೇ

ಆರ್. ಅಶೋಕ್, ಅಶ್ವಥ್ ನಾರಾಯಣ್, ಯತ್ನಾಳ್ ಅವರೇ ನೀವೂ ಶೂದ್ರರೇ. ನಿಮ್ಮನ್ನೂ ಸೇರಿಸಿ ಜಿ. ಪರಮೇಶ್ವರ್, ಎಚ್.ಕೆ. ಪಾಟೀಲ್, ಕೆ.ಎಚ್. ಮುನಿಯಪ್ಪ, ಸಿದ್ದರಾಮಯ್ಯ ಸೇರಿ ಶೂದ್ರರ ಯೋಗ್ಯತೆಯನ್ನು ಜಾತಿ ಆಧಾರದ ಮೇಲೆ ಅಲ್ಲಗಳೆಯಲಾಗುತ್ತಿತ್ತು ಎಂದರು.

ಜಾತಿ ವ್ಯವಸ್ಥೆಯಿಂದ ಲಾಭ ಪಡೆಯುತ್ತಿರುವ ಪಟ್ಟ ಭದ್ರರು ಜಾತಿ ವ್ಯವಸ್ಥೆಯ ಅಸಮಾನತೆಯನ್ನು ಪೋಷಿಸುತ್ತಿದ್ದಾರೆ. ಹುಟ್ಟುವಾಗ ಎಲ್ಲರೂ ವಿಶ್ವ ಮಾನವರೇ ಎಂದು ಕುವೆಂಪು ಹೇಳಿದರೆ, ಕುಲ ಕುಲವೆಂದು ಬಡಿದಾಡದಿರಿ ಎಂದು ಕನಕದಾಸರು ಹೇಳಿದ್ದಾರೆ ಎನ್ನುತ್ತಾ ಇಬ್ಬರ ಉಲ್ಲೇಖಗಳನ್ನೂ ಸಿಎಂ ಅವರು ಪ್ರಸ್ತಾಪಿಸಿದರು.

ಇವತ್ತಿನ ವಿಧಾನಸಭೆ, ಇವತ್ತಿನ ಪಾರ್ಲಿಮೆಂಟೇ ಅವತ್ತಿನ ಅನುಭವ ಮಂಟಪ

ಇವತ್ತಿನ ವಿಧಾನಸಭೆ, ಇವತ್ತಿನ ಪಾರ್ಲಿಮೆಂಟೇ ಅವತ್ತಿನ ಅನುಭವ ಮಂಟಪ. ಅತ್ಯಂತ ಕೆಳ ಸಮುದಾಯದ ಅಲ್ಲಮ ಪ್ರಭು ಅವರು ಅದರ ಅಧ್ಯಕ್ಷರಾಗಿದ್ದರು. ಎಲ್ಲಾ ಜಾತಿಯ ಪ್ರತಿನಿಧಿಗಳು, ಮಹಿಳಾ ಪ್ರತಿನಿಧಿ ಶರಣ ಶರಣೆಯರೂ ಅನುಭವ ಮಂಟಪದ ಸದಸ್ಯರಾಗಿದ್ದರು. ಬುದ್ದನ ಕಾಲದಲ್ಲೂ ಈ ರೀತಿಯ ಸರ್ವ ಜಾತಿ, ಸರ್ವ ಧರ್ಮದ ಪ್ರತಿನಿಧಿಗಳನ್ನು ಒಳಗೊಂಡ ಮಂಟಪಗಳಿದ್ದವು ಎಂದು ಚರಿತ್ರೆಯಲ್ಲಿ ಓದಿದ್ದೇವೆ ಎಂದರು.

ಹೀಗಾಗಿ ಅಂಬೇಡ್ಕರ್ ಅವರ ಮಾತನ್ನು ನಾವು ಸ್ಮರಿಸಿಕೊಳ್ಳಬೇಕು ಎನ್ನುತ್ತಾ, “ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲಾರರು” ಎನ್ನುವ ಮಾತನ್ನು ಉಲ್ಲೇಖಿಸಿದರು. ಶೂದ್ರರು ಮತ್ತು ಮಹಿಳೆಯರಿಗೆ ಶಿಕ್ಷಣವನ್ನು ನಿಷೇಧಿಸಲಾಗಿತ್ತು. ಈ ನಿಷೇಧ ಬಸವಾದಿ ಶರಣರ ಕಾಲದಲ್ಲಿ ಇರಲಿಲ್ಲ ಎಂದರು.

ಈ ಸುದ್ದಿಯನ್ನೂ ಓದಿ | Karnataka Bank Recruitment 2024: ಕರ್ಣಾಟಕ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ

ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ನಮ್ಮ ಸಮಾಜ ಚಲನೆ ರಹಿತವಾಗಿದೆ ಎಂದು ಲೋಹಿಯಾ ಮಾತನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು. ಆರ್ಥಿಕ ಮತ್ತು ಸಾಮಾಜಿಕ ಚಲನೆ ಸಿಕ್ಕಾಗ ಮಾತ್ರ ಸಮಾಜದ ಚಲನೆ ಸಾಧ್ಯ ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜಾತಿ ವ್ಯವಸ್ಥೆ ಬಾವಿಯೊಳಗಿನ‌ ಕಸದಂತೆ. ನೀರು ಸೇದಲು ಕೊಡ ಬಾವಿಗಿಳಿಸಿ ಕದಕಿದಾಗ ಕಸ ಪಕ್ಕಕ್ಕೆ ಸರಿಯುತ್ತದೆ. ನೀರು ಸೇದಿದ ಬಳಿಕ ಮತ್ತೆ ಕಸ ಆವರಿಸಿಕೊಳ್ಳುತ್ತದೆ. ಇದೇ ಜಾತಿ ವ್ಯವಸ್ಥೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ಲೇಷಿಸಿದರು.