ಮಂಗಳೂರು: ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತ್ನಿಯ ಮೇಲೆ ಸಿಟ್ಟಿಗೆದ್ದ ಪತಿರಾಯನೊಬ್ಬ ಪತ್ನಿಯ ಮೇಲೆ ಹಲ್ಲೆ (Assault Case) ನಡೆಸಿ, ಆಕೆಗೆ ತ್ರಿವಳಿ ತಲಾಕ್ (Triple Talaq) ಹೇಳಿ ದಾಂಪತ್ಯ ಮುರಿದುಕೊಂಡಿದ್ದಾನೆ. ಪತ್ನಿ ದೂರು ನೀಡಿದ್ದು, ಇದೀಗ ಮಂಗಳೂರು (Mangaluru Crime News) ಮಹಿಳಾ ಠಾಣೆಯ ಪೊಲೀಸರು ಆರೋಪಿ ಪತಿಯನ್ನು ಆರೆಸ್ಟ್ ಮಾಡಿದ್ದಾರೆ.
ಮಂಗಳೂರಿನ ಉಳ್ಳಾಲದ ಮಹಮ್ಮದ್ ದಿಲ್ಫಾಜ್ ತ್ರಿವಳಿ ತಲಾಖ್ ನೀಡಿದ ಆರೋಪಿ ಎಂದು ತಿಳಿದುಬಂದಿದೆ. ಕಳೆದ 2019ರಲ್ಲಿ ಮಹಮ್ಮದ್ ದಿಲ್ಫಾಜ್ ಮಾಸ್ತಿಕಟ್ಟೆ ನಿವಾಸಿ ಹೀನಾ ಫಾತಿಮಾ ಎನ್ನುವವರೊಂದಿಗೆ ಮದುವೆಯಾಗಿದ್ದ. ಕೆಲವು ವರ್ಷಗಳ ಕಾಲ ದಾಂಪತ್ಯ ನೆಟ್ಟಗಿತ್ತು. ಯಾವಾಗ ಪತಿ ಅನ್ಯ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ವಿಷಯ ತಿಳಿಯಿತೋ, ಆಗ ಪತಿಯನ್ನು ಹೀನಾ ಪ್ರಶ್ನಿಸಿದ್ದಾಳೆ. ಪತ್ನಿ ವಿಚಾರಿಸಿದಾಗ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಪರಿಣಾಮ ಹೀನಾ ಫಾತಿಮಾ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಬಳಿಕ ಕುಟುಂಬದ ಹಿರಿಯರು ಪಂಚಾಯಿತಿ ನಡೆಸಿ ಮೊಹಮ್ಮದ್ ದಿಲ್ಫಾಜ್‌ಗೆ ಬುದ್ಧಿ ಮಾತು ಹೇಳಿದ್ದರು. ಆದರೂ ತನ್ನ ಚಾಳಿಯನ್ನು ಮುಂದುವರೆಸಿದ್ದಾನೆ. ನವೆಂಬರ್ 8ರಂದು ಈ ಬಗ್ಗೆ ಹೀನಾ ಫಾತಿಮಾ ತಂದೆ ಸಬೀಲ್ ಅಹಮ್ಮದ್ ಅವರು ಮೊಹಮ್ಮದ್ ದಿಲ್ಫಾಜ್‌ನಲ್ಲಿ ವಿಚಾರಿಸಿದ್ದಕ್ಕೆ ಆತ ಪತ್ನಿ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಪತ್ನಿಯ ತಂದೆಯನ್ನು ಮನೆಗೆ ಕರೆದು ಅವರ ಎದುರಿನಲ್ಲಿಯೇ ಪತ್ನಿ ಹೀನಾ ಫಾತಿಮಾಗೆ ಮೂರು ಬಾರಿ ತಲಾಕ್ ಹೇಳಿದ್ದಾನೆ. ಇನ್ನು ಮುಂದೆ ನೀನು ನನ್ನ ಪತ್ನಿಯಲ್ಲ ಎಂದು ಹೇಳಿ ಮನೆಯಿಂದ ಹೊರ ಹಾಕಿದ್ದಾನೆ ಎಂದು ದೂರು ನೀಡಲಾಗಿದೆ.
ಅಲ್ಲದೆ, ಅಜ್ಜಿ ತನ್ನ ಹೆಸರಿನಲ್ಲಿ ಹೂಡಿಕೆ ಮಾಡಿರುವ 50 ಸಾವಿರ ರೂ. ಮೆಚೂರ್ಡ್ ಆದರೆ ದೊರಕುವ 8 ಲಕ್ಷ ರೂ. ಹಣವನ್ನು ಪತಿ ಹಾಗೂ ಪತಿಯ ತಂದೆಗೆ ನೀಡಬೇಕೆಂದು ಕಿರುಕುಳ ನೀಡಿರುತ್ತಾರೆ ಎಂದು ಹೀನಾ ಫಾತಿಮಾ ತನ್ನ ಪತಿ ಮೊಹಮ್ಮದ್ ದಿಲ್ಫಾಜ್ ಹಾಗೂ ಆತನ ತಂದೆ ಉಮರಬ್ಬ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಮೊಹಮ್ಮದ್ ದಿಲ್ಫಾಜ್‌ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Hosur Crime: ಕೋರ್ಟ್ ಆವರಣದಲ್ಲಿ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ-ಅಣ್ಣಾಮಲೈ ಕಿಡಿ!