Sunday, 11th May 2025

Areca nut: ಕಂಫರ್ಟ್‌ ಜೋನ್‌ನಲ್ಲಿ ಬಯಲು ಸೀಮೆ ಅಡಿಕೆ ಬೆಳೆಗಾರರು! ಅವರಿಗೆ ಹೋರಾಟ ಬೇಡವೆ?

Areca nut
ಅಭಿಮತ: ಅರವಿಂದ ಸಿಗದಾಳ್, ಮೇಲುಕೊಪ್ಪ
Aravinda Sigdal Melukoppa

ಅಡಿಕೆ ಸಮಸ್ಯೆಗಳಿಗೆ ಆಗುತ್ತಿರುವ ಹೋರಾಟಕ್ಕೆ ಶಕ್ತಿ ಸಾಕಾಗುತ್ತಿಲ್ಲ. ಬಯಲು ಸೀಮೆ ಅಡಿಕೆ (Areca nut) ಬೆಳೆಗಾರರು ಅಡಿಕೆ ಸಮಸ್ಯೆಗಳಿಗೆ ಹೋರಾಟದಲ್ಲಿ ಕೈ ಜೋಡಿಸುತ್ತಿಲ್ಲ ಎಂಬ ಚರ್ಚೆ ಮಲೆನಾಡು-ಕರಾವಳಿಯಲ್ಲಿ ನೆಡೆಯುತ್ತಿದೆ.

ಅಡಿಕೆ ಸಮಸ್ಯೆಗಳ ಹೋರಾಟಕ್ಕೆ ಬಯಲು ಸೀಮೆಯವರು ಸದ್ಯಕ್ಕೆ ಹೆಜ್ಜೆ ಇಡುವುದಿಲ್ಲ. ಇಡುವ ಅಗತ್ಯವೂ ಅವರಿಗಿಲ್ಲ. ವಿಶ್ವದ 65% ಅಡಿಕೆ ಬೆಳೆಯುತ್ತಿರುವ ದೇಶ ಭಾರತ. 35% ಅಡಿಕೆ ಬೆಳೆಯುವ ದೇಶದ ಅಷ್ಟೂ ಅಡಿಕೆ ಭಾರತಕ್ಕೆ ಬಂದರೂ, ನಮ್ಮ ಈಗಿನ ಅಡಿಕೆ ಬೆಳೆ ದ್ವಿಗುಣಗೊಂಡರೂ… ಅದರ ಪರಿಣಾಮದಿಂದ ಧಾರಣೆ ಎಷ್ಟೇ ಕುಸಿದರೂ ಅದು ಟೊಮೆಟೋ, ಈರುಳ್ಳಿ, ಆಲೂಗಡ್ಡೆ ಧಾರಣೆಯಂತೆ ಕೆಜಿಗೆ ನಾಲ್ಕಾಣೆಗೆ ಇಳಿಯುತ್ತಲ್ಲ ಹಾಗೆ ಇಳಿಯುವುದಿಲ್ಲ. ನಾಲ್ಕಾಣೆಗೆ ಟೊಮೇಟೋ ಕುಸಿದಾಗಲೇ ಎದುರಿಸಿದ ಗಟ್ಟಿ ಜೀವಗಳು ನಮ್ಮ ಬಯಲು ಸೀಮೆಯವರು.

ಇದುವರೆಗೆ ಅವರು ಬೆಳೆಯುತ್ತಿದ್ದ ಇತರ ಬೆಳೆಗಿಂತ ಈಗಿನ ಅಡಿಕೆಯಲ್ಲಿ ಗುಣಾಕಾರ ಲೆಕ್ಕದಲ್ಲಿ ಲಾಭ ಸಿಕ್ತಾ ಇದೆ. ಪ್ರತೀವರ್ಷ ಉತ್ತು, ಬಿತ್ತುಗಳ ಕೆಲಸ ಇಲ್ಲ. ಅಡಿಕೆ ಬೆಳೆಯಲು ಖರ್ಚು ಇತರ ಬೆಳೆಗಿಂತ ಬಹಳ ಕಡಿಮೆ. ಅಡಿಕೆ ಆಮದು, ಅಡಿಕೆ ಹಾನಿಕಾರಕ ಸಮಸ್ಯೆಗಳು ಅವರಿಗೆ ಇನ್ನೂ ಸಮಸ್ಯೆಯಾಗಿ ಕಂಡಿಲ್ಲ. ಅಡಿಕೆ ರೋಗಗಳ ಫಂಗಸ್‌ಗಳಿಗೆ ಬಯಲು ಸೀಮೆ ವಾತಾವರಣವೇ ಇಷ್ಟ ಆಗಲ್ಲ! ಹಾಗಾಗಿ ಬಯಲು ಸೀಮೆಗೆ ಮಲೆನಾಡಿನಲ್ಲಿದ್ದಂತೆ, ಅಡಿಕೆ ಸಂಶೋಧನಾ ಕೇಂದ್ರ ಎಂಬ ನಿಷ್ಕ್ರಿಯ ಮದುವೆ ಕಲ್ಯಾಣ ಮಂಟಪಗಳೂ ಬೇಡ!

ಈ ಸುದ್ದಿಯನ್ನೂ ಓದಿ | Money Tips: ಮೊದಲ ಬಾರಿ ಆರೋಗ್ಯ ವಿಮೆ ಮಾಡಿಸುತ್ತಿದ್ದೀರಾ? ಈ ಅಂಶಗಳನ್ನು ಮರೆಯದಿರಿ

ಇನ್ನು, ಹಾನಿಕಾರಕ ಹೊಗೇಸಪ್ಪು ಹಾನಿಕಾರಕ ಅಂತ ಆದ ಮೇಲೆ ಅದರ ಲಾಭ ಜಾಸ್ತಿ! ಅಡಿಕೆ ಹಾನಿಕಾರಕ ಅಂತಾದರೆ ಇನ್ನೂ ಲಾಭ ಹೆಚ್ಚಾಗಬಹುದು ಅನ್ನುವ ಲೆಕ್ಕಾಚಾರವೂ ಹೊಗೆಸಪ್ಪು ಬೆಳೆದ ಬಯಲು ಸೀಮೆಯವರಿಗೆ ಇರಬಹುದು! ನಾವು ಮಲೆನಾಡಿನವರು ಹೊಗೇಸಪ್ಪಿಗೆ ಹರಿವಾಣದಲ್ಲಿ ಅಡಿಕೆಯಷ್ಟೇ ಮಾನ್ಯತೆ ಕೊಟ್ಟಿದ್ದು ತಿನ್ನುವ ಉದ್ದೇಶದಿಂದ ಮಾತ್ರ!

ಅಡಿಕೆ ಸಮಸ್ಯೆಗಳ ಬಗ್ಗೆ ಹೋರಾಡಲು ಸಧ್ಯಕ್ಕೆ ಬಯಲು ಸೀಮೆಯ ಅಡಿಕೆ ಬೆಳೆಗಾರರಿಗೆ ಅಡಿಕೆ ವಿಚಾರದಲ್ಲಿ ಸಮಸ್ಯೆಗಳೇ ಇಲ್ಲ.

areca nut

ಇನ್ನು ಯಾವುದಾದರು ಅಡಿಕೆ ಸಮಸ್ಯೆ ಇಟ್ಟುಕೊಂಡು ಹೋರಾಟಕ್ಕೆ ಮುಂದಾದರೆ “ನಿಮಗೆ ಚಾನಲ್ ನೀರಾವರಿ ವ್ಯವಸ್ಥೆ ಕೊಟ್ಟಿರುವುದು ಅಡಿಕೆ ಬೆಳೆಯಲು ಅಲ್ಲ” ಅಂತ ಧ್ವನಿ ಬಂದರೆ? ಈ ಕಾರಣಕ್ಕೂ ಅಡಿಕೆ ವಿಚಾರದಲ್ಲಿ ಬಯಲು ಸೀಮೆ ಅಡಿಕೆ ಬೆಳೆಗಾರರು ತಟಸ್ಥರಾಗಿರಬಹುದು.

ಸದ್ಯಕ್ಕಂತೂ ಬಯಲು ಸೀಮೆ ಅಡಿಕೆ ಬೆಳೆಗಾರರು ಕಂಫರ್ಟ್‌ಬಲ್ ಜೋನ್‌ನಲ್ಲಿ ಇದ್ದಾರೆ. ಅಡಿಕೆ ಮರಗಳು ಬಯಲು ಸೀಮೆಯವರಿಗೆ ಅತ್ಯಂತ ಹೆಚ್ಚು ಆದಾಯ ವೃದ್ಧಿಸುವ ಧನಲಕ್ಷ್ಮಿ ಬ್ಯಾಂಕಿನ ಫಿಕ್ಸಡ್ ಡೆಪಾಸಿಟ್. ಮಲೆನಾಡು-ಕರಾವಳಿಯವರು ಬಯಲು ಸೀಮೆಯ ಅಡಿಕೆ ಬೆಳೆಗಾರರನ್ನು ಅಭಿನಂದಿಸೋಣ.

ಅದ್ಯಾರೋ ಜೋತಿಷಿಗಳು ಮಲೆನಾಡು ಬಯಲು ಸೀಮೆ ಆಗುತ್ತೆ ಅಂದಿದಾರಂತೆ. ಇನ್ನೊಂದು 50-100 ವರ್ಷಕ್ಕೆ ಮಲೆನಾಡು ಬಯಲು ಸೀಮೆ ಆಗಬಹುದು! ಆಗ ಎಲೆ ಚುಕ್ಕಿ, ಹಳದಿ, ಕೊಳೆ ರೋಗಗಳು ಮಲೆನಾಡಿನಲ್ಲಿ ಇಲ್ಲ ಅಂತ ಆಗಬಹುದು! ಆಗ ನಾವೂ ಕಂಫರ್ಟಬಲ್ ಜೋನ್‌ಗೆ ಬರಬಹುದು! ನಮಗೂ ಅಡಿಕೆ ಮರಗಳು ಧನಲಕ್ಷ್ಮಿ ಬ್ಯಾಂಕಿನ ಫಿಕ್ಸಡ್ ಡೆಪಾಸಿಟ್ ಆಗಬಹುದು. ಸದ್ಯಕ್ಕೆ ಮಲೆನಾಡಿನ ಸಣ್ಣ ಅಡಿಕೆ ಬೆಳೆಗಾರರ ಅಡಿಕೆ ಮರಗಳು ಬಡ್ಡಿ ಸಾಲದಲ್ಲಿವೆ! ಬಯಲು ಸೀಮೆಯವರು ಟೊಮೆಟೋಗೆ ನಾಲ್ಕಾಣೆ ಆದಾಗ ಸಹಿಸಿಕೊಂಡು ಎದುರಿಸಿದಂತೆ, ನಾವೂ ಅಡಿಕೆಯ ಮರ, ಆರೋಗ್ಯ, ಮಾನ, ಮೌಲ್ಯ ಕುಸಿದಾಗ (ಕುಸಿಯುವುದು ಗ್ಯಾರಂಟಿ) ಸಹಿಸಿಕೊಂಡು ಎದುರಿಸಬೇಕು! ಈಗ ಬೇರೆ ದಾರಿ ಇಲ್ಲ.

ನಾವು ಬಯಲು ಸೀಮೆಯ ಅಡಿಕೆ ರೈತರು ಹೋರಾಟಕ್ಕೆ ಮುಂದಾಗಲ್ಲ ಅಂತೀವಿ, ಆದರೆ ನಾವು ಮಲೆನಾಡು ಕರಾವಳಿಯ ರೈತರೂ ಹೋರಾಟ ಮನೋಭಾವದವರಾಗಿಲ್ಲ. ಹೋರಾಟ ಮಾಡಿದರೂ, ನಮ್ಮ ಧ್ವನಿ ಬೆಂಗಳೂರು – ಬೆಳಗಾವಿಯ ರಾಜಕೀಯ ಹೆದ್ದಾರಿಗೆ ಕೇಳುವಷ್ಟು ಗಟ್ಟಿಯಾಗಿಲ್ಲ.

ಈ ಸುದ್ದಿಯನ್ನೂ ಓದಿ | Job Guide: ರಾಷ್ಟ್ರೀಯ ಕೆಮಿಕಲ್‌ & ಫರ್ಟಿಲೈಸರ್ಸ್‌ ಲಿಮಿಟೆಡ್‌ನಲ್ಲಿದೆ 378 ಹುದ್ದೆ; ಇಂದೇ ಅಪ್ಲೈ ಮಾಡಿ

ನಾವು ಆಯ್ಕೆ ಮಾಡಿದ ಮಲೆನಾಡು-ಕರಾವಳಿಯ ಶಾಸಕರು, ಸಂಸದರು, ಮಂತ್ರಿಗಳು ಬಯಲು ಸೀಮೆಯ ಕಬ್ಬು ಬೆಳೆಗಾರರ ಜನ ಪ್ರತಿನಿಧಿಗಳಷ್ಟು ಬೌದ್ಧಿಕ, ತೋಳ್ಬಲದ, ಗಟ್ಟಿ ಗಂಟಲಿನ, ಕ್ರಿಯಾತ್ಮಕ, ಇಚ್ಛಾಶಕ್ತಿಯ ಜನ ಪ್ರತಿನಿಧಿಗಳಲ್ಲ. ಅದಲ್ಲ ಅಂತಾಗಿದ್ರೆ ವಿದೇಶಿ ಅಕ್ರಮ ಅಡಿಕೆ ಈಗಲೂ ಒಳ ನುಸುಳುವುದೇಕೆ? ಹಾನಿಕಾರಕ ಅಡಿಕೆ ಎಂದು ಪ್ರಚಾರ ಪಡೆದು ಎರಡು ದಶಕಗಳಾದರೂ ಒಂದು ಸ್ಪಷ್ಟ ಘೋಷಣೆ, ತೀರ್ಪು ಇನ್ನೂ ಸಿಗದೆ, ತೂಗು ಕತ್ತಿಯಾಗಿ ನೇತಾಡುವುದೇಕೆ? ಅಡಿಕೆ ಸಂಶೋಧನಾ ಕೇಂದ್ರಗಳು ಮುಚ್ಚಲು ಸಿದ್ಧವಾಗಿರುವ ಸರಕಾರಿ ಶಾಲೆಗಳಂತಾಗಿರುವುದೇಕೆ? ಅಡಿಕೆ ಹಳದಿ ರೋಗಕ್ಕೆ 70 ವರ್ಷವಾದರೂ ಒಂದು ‘ಇಂಜೆಕ್ಷನ್’ ಕೊಡಲಾಗದಿರುವುದೇಕೆ? ಎಲೆ ಚುಕ್ಕಿ ರೋಗ ಬಂದು-ತಜ್ಞರ ಸಮಿತಿಗಳಾಗಿ-ನೂರಾರು ಕೋಟಿ (223.75 ಕೋಟಿ 2023 ರಲ್ಲಿ ಪರಿಹಾರವಾಗಿ ಘೋಷಣೆ ಆಗಿದೆ) ಪರಿಹಾರ ಕೊಡಬೇಕು ಅಂತ ನಿರ್ಣಯ ಆಗಿದ್ದರೂ ಮಲೆನಾಡಿನ ಅಡಿಕೆ ತೋಟಗಳ ಗಡಿಯ ಒಳಗೆ ಕಪ್ಪು ಹೆರೆಯುವುದಕ್ಕೆ ಸಾಕಾಗುವಷ್ಟಾದರೂ ಪರಿಹಾರವಾಗಿ ಬಾರದಿರುವುದೇಕೆ?

ಬಯಲು ಸೀಮೆಯ ಕಬ್ಬಿನ ಕೋಲು ಅರ್ಧ ಅಡಿ ಕಮ್ಮಿಯಾದರೆ ಸರಕಾರ ಅಲುಗಾಡುವಂತೆ ಅಲ್ಲಿಯ ಜನ, ಜನ ಪ್ರತಿನಿಧಿಗಳು ಅದೇ ಕಬ್ಬಿನ ‘ಕೋಲು’ ಹಿಡಿದು ಹೊರಡುತ್ತಾರೆ. ಆದರೆ, ನಮ್ಮಲ್ಲಿನ ‘ಚಪ್ಪಾಳೆ ಜನ ಪ್ರತಿನಿಧಿಗಳು’ ಬಸ್ಟ್ಯಾಂಡ್-ಸರ್ಕಲ್‌ಗಳಲ್ಲಿ ಭಾಷಣಕ್ಕೆ ಮಾತ್ರ ಸೀಮಿತರಾಗುತ್ತಿದ್ದಾರೆ? ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ ಅಷ್ಟೆ.