Tuesday, 13th May 2025

ಉಜ್ಜಯಿನಿ ಪೀಠ ಸರ್ವಜನಾಂಗದ ಒಳಿತಿಗಾಗಿ ಶ್ರಮಿಸುತ್ತಿದೆ: ಸಚಿವ ಆನಂದ್ ಸಿಂಗ್

ಕೊಟ್ಟೂರು: ಉಜ್ಜಯಿನಿ ಸದ್ದರ್ಮ ಪೀಠ ಪಂಚಪೀಠಗಳಲ್ಲಿ ಒಂದಾಗಿದ್ದು ಸದಾ ಸರ್ವಜನಾಂಗದ ಒಳಿತಿಗಾಗಿ ಶ್ರಮಿಸುತ್ತಿದೆ. ಈ ಕಾರಣಕ್ಕಾಗಿ ಜಗದ್ಗುರುಗಳೊಂದಿಗೆ ಸದಾ ನಾನು ಬೆಂಬಲವಾಗಿ ಇರುವೆ ಎಂದು ಅರಣ್ಯ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.

ದೀಪಾವಳಿ ಪಾಡ್ಯದಂದು ಉಜ್ಜಯಿನಿ ಸದ್ದರ್ಮ ಪೀಠಕ್ಕೆ ಸೋಮವಾರ ಆಗಮಿಸಿದ್ದ ಅವರು, ಜಗದ್ಗುರು ಸಿದ್ದಲಿಂಗರಾಜದೇಶಿ ಕೇಂದ್ರ ಶಿವಾಚಾರ್ಯರಿಂದ ಸನ್ಮಾನ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ. ಅವರು ಉಜ್ಜಯಿನಿ ಸದ್ದರ್ಮ ಪೀಠದ ಜಗದ್ಗುರುಗಳ ಬಗ್ಗೆ ಎದ್ದಿರುವ ವಿವಾದ,ಗೊಂದಲಗಳ ಬಗ್ಗೆ ನಮಗೆ ಯಾವ ಮಾಹಿತಿಯೂ ಇಲ್ಲ. ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರ ದರ್ಶನಾರ್ಶಿರ್ವಾದ ಮತ್ತು ಆರಾಧ್ಯ ದೈವ ಮರುಳಸಿದ್ದೇಶ್ವರ ಸ್ವಾಮಿಯ ದರ್ಶನಕ್ಕೆ ಆಗಾಗ ಬರುವಂತೆ ಈಗಲೂ ಬರುತ್ತಿರುವೆ ಈಗಲೂ ಬಂದಿರುವೆ. ಶ್ರೀಜಗದ್ಗುರುಗಳ ಆರ್ಶಿರ್ವಾದ ಸದಾ ನನಗೆ ಒಳಿತನ್ನೆ ಮಾಡಿದೆ ಎಂದ ಅವರು, ವಿಜಯನಗರ ಜಿಲ್ಲಾ ರಚನೆ ಪ್ರಸ್ತಾಪದ ಪ್ರಚಾರವನ್ನು ಉಜ್ಜಯಿನಿ ಪೀಠದಿಂದಲೇ ಜಗದ್ಗುರುಗಳ ಆರ್ಶಿರ್ವಾದ ಪಡೆದು ಆರಂಭಿಸಿದ್ದೆವು, ಇದೀಗ ವಿಜಯನಗರ ಜಿಲ್ಲಾ ರಚನೆ ಅಧಿಕೃತ ಘೋಷಣೆ ಯಾವುದೇ ಹಂತದಲ್ಲಿ ಸರ್ಕಾರ ಮಾಡಲಿದೆ ಎಂದರು.

ವಿಜಯನಗರ ಜಿಲ್ಲಾ ರಚನೆ ಪ್ರಸ್ತಾಪ ಸರ್ಕಾರದ ಮಟ್ಟದಲ್ಲಿ ಇಲ್ಲ ಎಂದು ಶಾಸಕ ಕರುಣಾಕರ ರೆಡ್ಡಿ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ಕರುಣಾಕರ ರೆಡ್ಡಿ ಹಿರಿಯ ಶಾಸಕರಲ್ಲಿ ಒಬ್ಬರು ಅವರು ಯಾವ ಆಧಾರದ ಮೇಲೆ ಹಾಗೆ ಹೇಳಿದ್ದರೋ ಗೊತ್ತಿಲ್ಲ, ವಿಜಯ ನಗರ ಜಿಲ್ಲಾ ರಚನೆ ಆಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಪಿ. ಚನ್ನಬಸವನಗೌಡ ಇದ್ದರು.

Leave a Reply

Your email address will not be published. Required fields are marked *