Sunday, 11th May 2025

Actor Darshan: ಫಲಿಸಿತು ಪೂಜಾ ಫಲ; ದರ್ಶನ್‌ಗೆ ಬೇಲ್ ಸಿಕ್ಕ ಹಿನ್ನೆಲೆ ಕಾಮಾಕ್ಯ ದೇವಾಲಯದ ಫೋಟೋ ಹಂಚಿಕೊಂಡ ಪತ್ನಿ ವಿಜಯಲಕ್ಷ್ಮೀ

ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ನಲ್ಲಿ ಮಧ್ಯಂತರ ಜಾಮೀನಿನ ಮೂಲಕ ಹೊರಗಿದ್ದ ನಟ ದರ್ಶನ್‌ (Actor Darshan) ಅವರಿಗೆ ಕೊನೆಗೂ ಜಾಮೀನು(Bail) ಸಿಕ್ಕಿದೆ. ಈ ಹಿಂದೆ ಮೆಡಿಕಲ್ ವರದಿ ಆಧಾರದ ಮೇಲೆ ಚಿಕಿತ್ಸೆ ನೀಡಲು ಹೈಕೋರ್ಟ್‌(High Court) ಮಧ್ಯಂತರ ಬೇಲ್ ಮಂಜೂರು ಮಾಡಿತ್ತು. 6 ವಾರಗಳ ಕಾಲ ಬೆನ್ನು ನೋವಿನ ಚಿಕಿತ್ಸೆ ಪಡೆಯಲು ಕೋರ್ಟ್‌ ಅನುಮತಿ ನೀಡಿತ್ತು.

ಇದೀಗ ಚಿತ್ರುದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಮತ್ತು ನಟಿ ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಗಳ ತೀರ್ಪನ್ನು ಹೈಕೋರ್ಟ್ ಶುಕ್ರವಾರ (ಡಿ. 13) ಪ್ರಕಟಿಸಿದೆ. ಆರೋಪಿಗಳಾಗಿರುವ ನಟ ದರ್ಶನ್, ಅವರ ಗೆಳತಿ ಪವಿತ್ರಾ ಗೌಡ, ಮ್ಯಾನೇಜರ್ ಆರ್.ನಾಗರಾಜು, ದರ್ಶನ್ ಕಾರು ಚಾಲಕ ಎಂ.ಲಕ್ಷ್ಮಣ್, ಆಪ್ತರಾದ ಅನುಕುಮಾರ್, ಜಗದೀಶ್ ಮತ್ತು ಪ್ರದೋಷ್ ರಾವ್ ಅವರ ಜಾಮೀನು ಅರ್ಜಿಗಳ ಅರ್ಜಿಗಳ ವಿಚಾರಣೆಯನ್ನು ಸೋಮವಾರ (ಡಿ. 9ರಂದು) ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಪೀಠ, ಶುಕ್ರವಾರ ಮಧ್ಯಾಹ್ನ 2.30ಕ್ಕೆ ತೀರ್ಪು ನೀಡಿದ್ದು, ನಟ ದರ್ಶನ್ ಹಾಗೂ ಪವಿತ್ರಾ ಗೌಡ (Pavithra Gowda) ಸೇರಿದಂತೆ 7 ಜನ ಆರೋಪಿಗಳಿಗೆ ಜಾಮೀನು ಸಿಕ್ಕಿದೆ.

ದರ್ಶನ್ ಅವರಿಗೆ ಜಾಮೀನು ಸಿಕ್ಕ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijaya Lakshmi Darshan) ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಕಾಮಾಕ್ಯ ದೇವಸ್ಥಾನದಲ್ಲಿ ಹೂವುನ್ನು ಕೈಯಲ್ಲಿ ಹಿಡಿದಿರುವ ಫೋಟೋ ಹಂಚಿಕೊಂಡಿದ್ದಾರೆ. ಆ ಮೂಲಕ ದೇವರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.

ಇದೇ ವೇಳೆ ತರುಣ್ – ಸೋನಲ್ ದಂಪತಿ ಕೂಡ ತಮ್ಮ ಆಪ್ತರಾದ ದರ್ಶನ್ ಗೆ ಜಾಮೀನು ಸಿಕ್ಕಿರುವುದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದ್ದು, ರಕ್ಷಿತಾ ಪ್ರೇಮ್ ಕೂಡ ಸೋಷಿಯಲ್ ಮೀಡಿಯಾದ ಡಿಬಾಸ್ ಬೇಲ್ ಮಂಜೂರು ಆಗಿರುವುದಕ್ಕೆ ಹ್ಯಾಪಿ ನ್ಯೂಸ್ ಎಂದು ತಮ್ಮ ಖುಷಿಯನ್ನು ಹೊರಹಾಕಿದ್ದಾರೆ.

ಇನ್ನು ಈ ಹಿಂದೆ ಕೂಡ ಪತಿಯನ್ನು ಬಿಡಿಸಿಕೊಂಡು ಬರಲೇಬೇಕೆಂದು ಪಣತೊಟ್ಟಿದ್ದ ವಿಜಯಲಕ್ಷ್ಮೀ ನಾನಾ ದೇವಾಲಯಗಳಿಗೆ ಭೇಟಿ ನೀಡಿದ್ದರು. ದೇಶದ 51 ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂನ ಗುವ್ಹಾಟಿಯಲ್ಲಿರುವ ಕಾಮಾಕ್ಯ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ದೇವಸ್ಥಾನಕ್ಕೆ ಭೇಟಿ ನೀಡಿದ್ದ ಫೋಟೊ ವಿಜಯಲಕ್ಷ್ಮೀ ತಮ್ಮ ಇನ್​ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಸಂಕಷ್ಟದಲ್ಲಿ ಸಿಲುಕಿರುವ ಪತಿಯ ರಕ್ಷಣೆಗಾಗಿ ದರ್ಶನ್​ ಪತ್ನಿ ಟೆಂಪಲ್​ ರನ್​ ಮಾಡ್ತಿರೋದು ಇದೆ ಮೊದಲೇನಲ್ಲ. ದರ್ಶನ್​ ಅರೆಸ್ಟ್​ ಆಗಿ ಜೈಲಿಗೆ ಹೋದ ದಿನದಿಂದಲೂ ವಿಜಯಲಕ್ಷ್ಮೀ ಟೆಂಪಲ್​ ರನ್​ ಮಾಡ್ತಾನೆ ಇದ್ದರು.

ದರ್ಶನ್‌ಗೆ ಆಪರೇಷನ್‌

ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ಚಿತ್ರನಟ ದರ್ಶನ್‌ಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಸದ್ಯ ಜಾಮೀನು ಸಿಕ್ಕಿರುವ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಮನೆಗೆ ಹೋಗಬಹುದು.

ಈ ಸುದ್ದಿಯನ್ನು ಓದಿ: Actor Darshan: ದರ್ಶನ್‌ ಸೇರಿ 7 ಆರೋಪಿಗಳಿಗೆ ಜಾಮೀನು; ರೇಣುಕಾಸ್ವಾಮಿ ತಂದೆ ಮೊದಲ ಪ್ರತಿಕ್ರಿಯೆ ಏನು?