Thursday, 15th May 2025

Actor Darshan : ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ಗೆ ಇಂದು ಕೂಡ ಹತಾಶೆ; ಜಾಮೀನು ಅರ್ಜಿ ವಿಚಾರಣೆ ಡಿ.9ಕ್ಕೆ ಮುಂದೂಡಿಕೆ

ಬೆಂಗಳೂರು: ರೇಣುಕಾ ಸ್ವಾಮಿ(Renuka Swamy) ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್(Darshan), ಪವಿತ್ರಾ ಗೌಡ(Pavithra Gowda) ಮತ್ತು ಇನ್ನಿತರ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್​ನಲ್ಲಿ ಶುಕ್ರವಾರ ನಡೆದಿದೆ. ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು, ಡಿಸೆಂಬರ್ 9ರ 2:30ಕ್ಕೆ ಮುಂದೂಡಿದರು.

ತನಿಖಾಧಿಕಾರಿಗಳ ಪರ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ವಾದ ಮಂಡಿಸಿದರು. ಪವಿತ್ರಾ ಗೌಡ ಅವರ ವಕೀಲರು ಮಂಡಿಸಿದ ವಾದಗಳಿಗೆ ಚೆಕ್​ಮೇಟ್ ಇಟ್ಟ ಅವರು, ಪವಿತ್ರಾ ಗೌಡ ಅವರದ್ದು, ಅಪಹರಣದಲ್ಲಾಗಲಿ, ಕೊಲೆಯಲ್ಲಾಗಲಿ ಪಾತ್ರವಿಲ್ಲವೆಂದು ಪವಿತ್ರ ಪರ ವಕೀಲ ಸೆಬಾಸ್ಟಿಯನ್ ವಾದಿಸಿದ್ದರು. ಆದರೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದಾಗ ಅದು ಇಷ್ಟವಾಗದೇ ಇದ್ದರೆ ಆತನನ್ನು ಕೂಡಲೇ ಬ್ಲಾಕ್ ಮಾಡಬಹುದಿತ್ತು. ರೇಣುಕಾ ಸ್ವಾಮಿ ಏಪ್ರಿಲ್ ತಿಂಗಳಿನಿಂದಲೂ ಮೆಸೇಜ್ ಮಾಡುತ್ತಿದ್ದಾನೆ. ಆಗಿನಿಂದಲೂ ಯಾಕೆ ಬ್ಲಾಕ್ ಮಾಡಲಿಲ್ಲ. ಬದಲಿಗೆ “ಡ್ರಾಪ್‌ ಯುವರ್‌ ನಂಬರ್” (ನಿನ್ನ ನಂಬರ್ ಕಳುಹಿಸು) ಎಂದು ಪವಿತ್ರಾ ಮೆಸೇಜ್ ಮಾಡಿದ್ದಾರೆ. ಆ ನಂತರ ನಂಬರ್ ಅನ್ನು ಎ3 ಆರೋಪಿ ಪವನ್​ಗೆ ಕಳುಹಿಸಿ ಸಂಭಾಷಣೆ ನಡೆಸುವಂತೆ ಹೇಳಿದ್ದಾರೆ ಎಂದು ಹೇಳುವ ಮೂಲಕ, ರೇಣುಕಾ ಸ್ವಾಮಿ ಅಪಹರಣದಲ್ಲಿ ಪವಿತ್ರಾ ಕೈವಾಡ ಇದೆ ಎಂದು ಹೇಳಿದರು.

ಇನ್ನು ದರ್ಶನ್ ಅನಾರೋಗ್ಯದ ವಿಷಯವಾಗಿ ಅವರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ಎಸ್‌ಪಿಪಿ ಪ್ರಸನ್ನ ಕುಮಾರ್, ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಸುಳ್ಳು ಹೇಳಿದ್ದು, ನ್ಯಾಯಾಲಯದ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ವಾದ ಮಂಡಿಸಿದರು. ಅಂತಿಮವಾಗಿ ನ್ಯಾಯಮೂರ್ತಿಗಳು ಪ್ರಕರಣದ ಮುಂದಿನ ವಿಚಾರಣೆಯನ್ನು ಸೋಮವಾರ (ಡಿ.9) ಮಧ್ಯಾಹ್ನ 2:30ಕ್ಕೆ ಮುಂದೂಡಿದರು.

ಮಧ್ಯಂತರ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌ (Actor Darshan) ಅವರಿಗೆ ಹೈಕೋರ್ಟ್‌ ಮಂಜೂರು ಮಾಡಿದ್ದ ಮಧ್ಯಂತರ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಡಿ. 4ರಂದು ಮೇಲ್ಮನವಿ ಸಲ್ಲಿಸಲಾಗಿದೆ. ಸದ್ಯ ಬೆನ್ನು ನೋವಿನ ಶಸ್ತ್ರ ಚಿಕಿತ್ಸೆಗಾಗಿ ಜಾಮೀನಿನ ಮೇಲೆ ಹೊರಗಿರುವ ದರ್ಶನ್‌ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಪ್ರಾಸಿಕ್ಯೂಷನ್‌(Prosecution) ಪರವಾಗಿ ವಕೀಲರು ಸುಪ್ರೀಂ ಕೋರ್ಟ್‌ಗೆ(Supreme Court) ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದ್ದು, ದರ್ಶನ್‌ ಅವರಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಮಂಜೂರು ಮಾಡಿರುವ ಮಧ್ಯಂತರ ಜಾಮೀನು ರದ್ದು ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಡಿ. 6 ಅಥವಾ ಡಿ. 9ರಂದು ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಸೇರಿದಂತೆ 17 ಮಂದಿ ಬಂಧನವಾಗಿತ್ತು. ಪ್ರಕರಣದಲ್ಲಿ ದರ್ಶನ್‌ ಎ2 ಆರೋಪಿಯಾಗಿದ್ದು, ಒಂದಷ್ಟು ತಿಂಗಳು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಅಲ್ಲಿ ರಾಜಾತಿಥ್ಯ ಸಿಕ್ಕ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಅವರನ್ನು ಸ್ಥಳಾಂತರಿಸಲಾಯಿತು. ಈ ಮೊದಲಿನಿಂದಲೂ ವಿಪರೀತ ಬೆನ್ನು ನೋವಿನಿಂದ ಬಳಲುತ್ತಿದ್ದ ನಟ ದರ್ಶನ್‌ ಅನಾರೋಗ್ಯ ಕಾರಣ ನೀಡಿ ಅ. 30ರಂದು ಜೈಲಿನಿಂದ ಮಧ್ಯಂತರ ಜಾಮೀನು ಪಡೆದುಕೊಂಡು ಹೊರಬಂದಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದರ್ಶನ್‌ ಅವರಿಗೆ ಕರ್ನಾಟಕ ಹೈಕೋರ್ಟ್‌ ನೀಡಿರುವ ಮಧ್ಯಂತರ ಜಾಮೀನನ್ನು ರದ್ದು ಮಾಡಬೇಕು ಎಂದು ಸರ್ಕಾರದ ಪರ ವಕೀಲರಿಂದ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಒಂದು ವೇಳೆ ಸುಪ್ರೀಂ ಕೋರ್ಟ್‌ ದರ್ಶನ್‌ ಮಧ್ಯಂತರ ಜಾಮೀನಿಗೆ ಸಂಬಂಧಿಸಿದಂತೆ ಕೊಕ್ಕೆ ಹಾಕಿದರೆ ನಟ ಮತ್ತೆ ಜೈಲು ಪಾಲಾಗಬೇಕಾಗುತ್ತದೆ. ಸದಾ ಒಂದಿಲ್ಲೊಂದು ಸಂಕಷ್ಟಕ್ಕೆ ಗುರಿಯಾಗುತ್ತಿರುವ ದರ್ಶನ್‌ ಈ ಸುದ್ದಿಯಿಂದ ಮತ್ತಷ್ಟು ಆತಂಕಗೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ:Kodi Mutt Swamiji: ದರ್ಶನ್, ಸಿದ್ದರಾಮಯ್ಯ ಬಗ್ಗೆ ಕೋಡಿಮಠ ಶ್ರೀ ಸ್ಫೋಟಕ ಭವಿಷ್ಯ!