Thursday, 15th May 2025

Actor Darshan: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಡಿ.3ಕ್ಕೆ ಮುಂದೂಡಿಕೆ

Actor Darshan

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ನಟ ದರ್ಶನ್‌ (Actor Darshan) ಸಲ್ಲಿಸಿದ್ದ ಅರ್ಜಿ ವಿಚಾರಣೆನ್ನು ಡಿಸೆಂಬರ್ 3ಕ್ಕೆ ಹೈಕೋರ್ಟ್‌ ಮುಂದೂಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌, ಪವಿತ್ರಾಗೌಡ, ಆರ್‌.ನಾಗರಾಜು, ಎಂ.ಲಕ್ಷ್ಮಣ್, ಅನು ಕುಮಾರ್‌, ಜಗದೀಶ್‌ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠವು, ವಿಚಾರಣೆ ನಡೆಸಿ ಮುಂದೂಡಿತು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಯಾವುದೇ ಸ್ಪಷ್ಟ ಸಾಕ್ಷ್ಯ ಇಲ್ಲ ಹೈಕೋರ್ಟ್‌ ಮುಂದೆ ಶುಕ್ರವಾರ ಹಿರಿಯ ವಕೀಲ ಸಂದೇಶ್‌ ಚೌಟ ಪಟ್ಟಿ ವಾದ ಮಾಡಿದರು. ಆರೋಪಿ ನಾಗರಾಜ್‌ ಪರ ವಾದ ಮಂಡಿಸಿದ ವಕೀಲರು, ರೇಣುಕಾಸ್ವಾಮಿ ಕೊಲೆ ಸಂಬಂಧ ಎಫ್‌ಐಆರ್‌ ದಾಖಲಿಸುವುದು ತಡವಾಗಿದ್ದು, ಕೊಲೆಯಾಗಿದೆ ಎನ್ನಲಾದ ಪಟ್ಟಣಗೆರೆಯ ಶೆಡ್‌ನಲ್ಲಿ ಮಹಜರ್‌ ಪ್ರಕ್ರಿಯೆ ನಡೆಸುವುದು ವಿಳಂಬವಾಗಿದೆ. ಅಲ್ಲದೇ ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುವುದು ಕೂಡ ತಡವಾಗಿದೆ ಎಂದು ತಿಳಿಸಿದರು.

ಇನ್ನು ಪ್ರಮುಖ ಸಾಕ್ಷಿಗಳ ಸಿಆರ್‌ಪಿಸಿ ಸೆಕ್ಷನ್‌ 164 ಹೇಳಿಕೆ ದಾಖಲಿಸಿರುವುದು ತಡವಾಗಿದೆ. ರಿಮ್ಯಾಂಡ್‌ ಅರ್ಜಿಯಲ್ಲಿ ಪ್ರತ್ಯಕ್ಷ ಮತ್ತು ಭಾಗಶಃ ಪ್ರತ್ಯಕ್ಷ ಸಾಕ್ಷಿಗಳನ್ನು ಉಲ್ಲೇಖಿಸಿಲ್ಲ. ವಶಕ್ಕೆ ಪಡೆದಿರುವ ವಸ್ತುಗಳಿಗೆ ವಿರುದ್ಧವಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ. ಕೊಲೆಯ ಉದ್ದೇಶ ಮತ್ತು ಪಿತೂರಿಗೆ ಯಾವುದೇ ಸಾಕ್ಷಿ ಇಲ್ಲ. ಹೀಗಾಗಿ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬೇಕು ಎಂದು ವಾದಿಸಿದರು.

ಈ ಸುದ್ದಿಯನ್ನೂ ಓದಿ | Zee Entertainers: ಜೀ ಎಂಟರ್‌ಟೈನರ್ಸ್​ನಲ್ಲಿ ಈ ವಾರ ಸೀತಾರಾಮ ಟೀಮ್ vs ಅಮೃತಧಾರೆ ಟೀಮ್: ಗೆದ್ದಿದ್ದು ಯಾರು?

ಇನ್‌ಸ್ಪೆಕ್ಟರ್‌ ವಿನಯ್‌ಗೆ ಎಲ್ಲಾ ತಿಳಿದಿತ್ತು!
ಅಲ್ಲದೆ ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ ಪ್ರಕರಣದ ಇಡೀ ಮಾಹಿತಿಯು 132ನೇ ಸಾಕ್ಷಿಯಾಗಿರುವ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿನಯ್‌ ಅವರಿಗೆ ತಿಳಿದಿತ್ತು. ಆದರೆ, ಅವರು ಮಾಹಿತಿ ನೀಡಿ ಎಫ್‌ಐಆರ್‌ ದಾಖಲಿಸಿಲ್ಲ. ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ನರೇಂದರ್‌ ಸಿಂಗ್‌ ನೀಡಿದ ದೂರಿನ ಮೇಲೆ ಕಾಮಾಕ್ಷಿ ಪಾಳ್ಯ ಠಾಣೆಯಲ್ಲಿ ತಡವಾಗಿ ಎಫ್‌ಐಆರ್‌ ದಾಖಲಿಸಲಾಗಿದೆ. ರಿಮ್ಯಾಂಡ್‌ ಅರ್ಜಿ ಮತ್ತು ಆರ್ಡರ್‌ ಶೀಟ್‌ಗಳಲ್ಲಿ ಆರೋಪಿಗಳನ್ನು ಏಕೆ ಬಂಧಿಸಲಾಗುತ್ತಿದೆ ಎಂಬುದಕ್ಕೆ ಸೂಕ್ತ ಕಾರಣಗಳನ್ನು ನೀಡಿಲ್ಲ ಎಂದು ವಿಸ್ತೃತವಾಗಿ ವಾದ ಮಂಡಿಸಿದರು. ಒಂದು ಗಂಟೆ ಕಾಲ ವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಡಿಸೆಂಬರ್‌ 3ಕ್ಕೆ ಮುಂದೂಡಿದೆ.

ದರ್ಶನ್‌ಗೆ ಇನ್ನೂ ನಡೆಯದ ಶಸ್ತಚಿಕಿತ್ಸೆ
ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ದರ್ಶನ್​ ಅವರು ಅನಾರೋಗ್ಯದ ಹಿನ್ನೆಲೆಯಲಿ 6 ವಾರ ಮಧ್ಯಂತರ ಜಾಮೀನು ಪಡೆದು ಸದ್ಯ ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಬೆನ್ನು ನೋವಿನ ಹಿನ್ನೆಲೆ ಅವರಿ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯಕೀಯ ವರದಿಯಲ್ಲಿ ಕೋರ್ಟ್‌ಗೆ ತಿಳಿಸಲಾಗಿತ್ತು. ಆದರೆ, ಮಧ್ಯಂತರ ಜಾಮೀನು ಪಡೆದು, ಒಂದು ತಿಂಗಳು ಕಳೆಯುತ್ತಾ ಬಂದರೂ ಕೂಡ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿಲ್ಲ. ಎಂಆರ್‌ಐ ಸ್ಕ್ಯಾನಿಂಗ್‌ ಸೇರಿ ವಿವಿಧ ಪರೀಕ್ಷೆ ಮಾಡಲಾಗಿದ್ದು, ಬಿ.ಪಿ. ವ್ಯತ್ಯಾಸವಾಗುತ್ತಿರುವ ಕಾರಣ ಅವರಿಗೆ ಶಸ್ತ್ರ ಚಿಕಿತ್ಸೆ ಇನ್ನೂ ಶಸ್ತ್ರ ಚಿಕಿತ್ಸೆ ಮಾಡಿಲ್ಲ ಎಂದು ತಿಳಿದುಬಂದಿದೆ.