Saturday, 10th May 2025

Abhay Patil: ನಾಡ ವಿರೋಧಿ ಘೋಷಣೆ; ಶಾಸಕ ಅಭಯ ಪಾಟೀಲ್ ವಿರುದ್ಧ ಕೇಸ್‌ ದಾಖಲಿಸಲು ಕರವೇ ನಿರ್ಧಾರ

Abhay Patil

ಬೆಳಗಾವಿ: ರಾಜ್ಯ ಸರಕಾರದ ಅನುದಾನ ಉಪಯೋಗಿಸಿಕೊಂಡು ಕನ್ನಡ ನೆಲದಲ್ಲಿ ನಿರ್ಮಿಸಿದ ಧರ್ಮವೀರ ಸಂಬಾಜಿ ಮಹಾರಾಜರ ಮೂರ್ತಿ ಉದ್ಘಾಟನೆ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದಿಂದ ಅತಿಥಿಯನ್ನು ಕರೆಯಿಸಿ
ನಾಡ ವಿರೋಧಿ ಘೋಷಣೆ ಕೂಗಿಸಲು ಸಹಕರಿಸಿದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ (Abhay Patil) ಪ್ರಕರಣ ದಾಖಲಿಸಲು ಕರವೇ ನಿರ್ಧರಿಸಿದೆ ಎಂದು ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ತಿಳಿಸಿದರು.

ಬೆಳಗಾವಿಯ ಅನಗೋಳದಲ್ಲಿ ಮಹಾನಗರ ಪಾಲಿಕೆಯ ಅನುದಾನದಲ್ಲಿ ನಿರ್ಮಿಸಿರುವ ಧರ್ಮವೀರ ಸಂಭಾಜಿ ಮಹಾರಾಜರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಬಂದಿದ್ದ ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರ ಶಿವೇಂದ್ರರಾಜೇ ಭೋಂಸ್ಲೆ ನಾಡ ವಿರೋಧಿ ಘೋಷಣೆ ಕೂಗಿದ್ದಾರೆ. ಈ ಕಾರ್ಯಕ್ರಮ ಆಯೋಜಿಸಿದ ಶಾಸಕ ಅಭಯ ಪಾಟೀಲ ಕನ್ನಡದ ನೆಲಕ್ಕೆ ಅಪಮಾನ ಮಾಡಿದ್ದಾರೆ. ಜಿಲ್ಲಾಡಳಿತದಿಂದ ಅಧಿಕೃತವಾಗಿ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಿ ಪುಂಡಾಟ ಮೆರೆದಿದ್ದಾರೆ ಎಂದು ದೀಪಕ ಗುಡಗನಟ್ಟಿ ಆಕ್ರೋಶ ಹೊರಹಾಕಿದರು.

ಧರ್ಮವೀರ ಸಂಬಾಜಿ ಮಹಾರಾಜರ ಮೂರ್ತಿ ಉದ್ಘಾಟನೆಯ ಪರವಾಗಿ ಬಿಜೆಪಿ ಮುಖಂಡರಾದ ಸಿ.ಟಿ ರವಿ ಹಾಗೂ ಅರವಿಂದ ಬೆಲ್ಲದ ಹೇಳಿಕೆ ಕೊಟ್ಟಿದ್ದರು. ಈಗ ಅದೇ ಕಾರ್ಯಕ್ರಮದಲ್ಲಿ ನಾಡ ವಿರೋಧಿ ಘೋಷಣೆ ಕೂಗಿದ್ದು, ಈ ಕುರಿತು ಉಭಯ ನಾಯಕರು ತಮ್ಮ ನಿಲುವು ಸ್ಪಷ್ಟಪಡಿಸಲಿ. ಇಲ್ಲವಾದಲ್ಲಿ ನಾಡದ್ರೋಹಿ ಕೃತ್ಯಕ್ಕೆ ಅವಕಾಶ ಕಲ್ಪಿಸಿದ ಶಾಸಕ ಅಭಯ ಪಾಟೀಲ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಿ ಎಂದು ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | BS Yediyurappa: ಪೋಕ್ಸೊ ಕೇಸ್‌ ರದ್ದು ಕೋರಿ ಬಿಎಸ್‌ವೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜ.10ಕ್ಕೆ ಮುಂದೂಡಿಕೆ

ಬೆಳಗಾವಿ ಮಹಾನಗರ ಪಾಲಿಕೆ ಕೇವಲ ಧರ್ಮವೀರ ಸಂಭಾಜಿ ಮಹಾರಾಜರ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣಕ್ಕೆ ಅನುದಾನ ನೀಡುತ್ತಿದೆ. ನಮ್ಮ ನಾಡಿನ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಹಾಗೂ ವಿಶ್ವಗುರು ಬಸವೇಶ್ವರ ವೃತ್ತ ಅಭಿವೃದ್ಧಿ ಕಡೆಗಣಿಸಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸರ್ಕಾರ ತಕ್ಷಣ ವಜಾ ಮಾಡಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *