Sunday, 11th May 2025

ಪಾವಗಡ: ಹತ್ತು ದಿನಕ್ಕೆ 89 ಕೋವಿಡ್ ಪ್ರಕರಣಗಳು ಪತ್ತೆ

ಪ್ರಕರಣಗಳು ಹೆಚ್ಚಾದರೆ ಅಧಿಕಾರಿಗಳು ನೇರ ಹೊಣೆ: ವೆಂಕಟರಮಣಪ್ಪ

ಪಾವಗಡ: ಸೋಮವಾರ ತಾಲ್ಲೂಕಿನ ಎಲ್ಲಾ ಪಿಡಿಒ ಹಾಗೂ ಪಂಚಾಯತಿ ಅಧ್ಯಕ್ಷರಿಗೆ ಹಾಗೂ ಸದಸ್ಯರ ಸಭೆ ನಡೆಸಿ ಮಾತನಾ ಡಿದ ಶಾಸಕ ವೆಂಕಟ ರಮಣಪ್ಪ ಈ ಬಾರಿ ಕೋವಿಡ್ ಪ್ರಕರಣಗಳು ಜೋರಾಗಿವೆ. ಈಗಾಗಲೇ ಹತ್ತು ದಿನಗಳಲ್ಲಿ 89 ಕೋವಿಡ್ ಪ್ರಕರಣಗಳು ಈ ಭಾಗದಲ್ಲಿ ದಾಖಲಾಗಿವೆ. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಗ್ರಾ.ಪಂ.ಸದಸ್ಯರು, ತಾಲ್ಲೂಕು ಪಂಚಾಯತಿ ಸದಸ್ಯರು ಹಾಗೂ ಜಿ.ಪಂ.ಸದಸ್ಯರು ಅವರವರ ವ್ಯಾಪ್ತಿಯಲ್ಲಿ ನಲವತ್ತೈದು ವರ್ಷದ ಮೇಲ್ಪಟ್ಟ ವಯಸ್ಸಿನವರಿಗೆ ಕೋವಿಡ್ ಲಸಿಕೆ ಹಾಕಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದಕ್ಕೆ ಅಧಿಕಾರಿ ವರ್ಗದವರು ಪ್ರತಿದಿನದ ಲಸಿಕೆ ಹಾಕಿಸಿರುವ ಮಾಹಿತಿ ಪ್ರತಿದಿನ ತಿಳಿಸಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆಗಳು ಕಂಡು ಬಂದರೆ ಅದಕ್ಕೆ ಆ ಭಾಗದ ಪಿಡಿಒಗಳೆ ಹೊಣೆಯಾಗಬೇಕಾಗುತ್ತದೆ ಎಂದರು. ಕಾಟಾಚಾರಕ್ಕೆ ಕೆಲಸ ಮಾಡುವವರ ಮಾಹಿತಿ ಪಡೆದು ಅವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ ಎಂದರು.

ಈ ವೇಳೆ ತಾ.ಪಂ.ಅಧ್ಯಕ್ಷೆ ಮಂಜುಳಾ. ಉಪಾಧ್ಯಕ್ಷ ನಾಗರಾಜ್, ತಹಸೀಲ್ದಾರ್ ನಾಗರಾಜ್, ಇಒ ಶಿವರಾಜಯ್ಯ ಹಾಗೂ ಎಲ್ಲ ಗ್ರಾ.ಪಂ.ಅಧ್ಯಕ್ಷರುಗಳು.ಹಾಗೂ ತಾಲೂಕಿನ ಎಲ್ಲ ಪಿಡಿಒಗಳು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *