Sunday, 11th May 2025

Virat Kohli: ಕೊಹ್ಲಿ ಸಹ ಮಾಲೀಕತ್ವದ ಪಬ್​​ಗೆ ಬಿಬಿಎಂಪಿ ನೋಟಿಸ್

ಬೆಂಗಳೂರು: ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ​ ವಿರಾಟ್ ಕೊಹ್ಲಿ(Virat Kohli) ಸಹ ಮಾಲೀಕತ್ವದ ಒನ್ 8 ಕಮ್ಯೂನ್(ONE8 COMMUNE)​ ಬಾರ್ ಆಂಡ್ ರೆಸ್ಟೋರೆಂಟ್​ಗೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ನೋಟಿಸ್‌ ನೀಡಿದೆ. ಒನ್ 8 ಕಮ್ಯೂನ್​ ಬಾರ್ ಆ್ಯಂಡ್​ ರೆಸ್ಟೋರೆಂಟ್‌ನಲ್ಲಿ(virat kohli restaurant) ಅಗ್ನಿ ಸುರಕ್ಷತೆ ಅಳವಡಿಸಿಲ್ಲ ಮತ್ತು ಅಗ್ನಿಶಾಮಕ ದಳದ ಪ್ರಮಾಣ ಪತ್ರ ಪಡೆಯದೇ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಕೊಹ್ಲಿ ಅವರ ಈ ರೆಸ್ಟೋರೆಂಟ್ ನಗರದ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬಳಿ ಇದೆ.

ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಎಂಬುವರು ಈ ಬಗ್ಗೆ ಪಾಲಿಕೆಗೆ ದೂರು ನೀಡಿದ್ದರು. ದೂರು ಆಧರಿಸಿ ಶಾಂತಿನಗರ ಪಾಲಿಕೆ ಅಧಿಕಾರಿಗಳು ಇದೀಗ ನೋಟಿಸ್‌ ನೀಡಿದ್ದಾರೆ. ಈ ಹಿಂದೆ ಕೂಡ ವಿರಾಟ್ ಕೊಹ್ಲಿಯವರಿಗೆ ನೊಟೀಸ್ ಜಾರಿ ಮಾಡಲಾಗಿತ್ತು. ಆಗ ಉತ್ತರಿಸದೇ ನಿರ್ಲಕ್ಷ್ಯ ತೋರಿದ್ದರು. ಇದೀಗ ಏಳು ದಿನದೊಳಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ವಿರಾಟ್‌ ಕೊಹ್ಲಿ ರೆಸ್ಟೋರೆಂಟ್‌ಗೆ ಮಾತ್ರವಲ್ಲದೆ ಬೆಂಗಳೂರು ನಗರದಲ್ಲಿ ಇರುವಂತಹ ಹಲವಾರು ರೆಸ್ಟೋರೆಂಟ್ ಬಾರ್ ಹಾಗೂ ಪಬ್​ಗಳಿಗೂ ನೋಟಿಸ್‌ ನೀಡಲಾಗಿದೆ. ಹಿಂದೆ ಬೆಂಗಳೂರಿನಲ್ಲಿ ಅಗ್ನಿ ಅವಘಡಗಳು ನಡೆದಾಗ ಹಲವಾರು ಜನ ಸಾವು ನೋವು ಅನುಭವಿಸಿದದ್ದರು. ಹೀಗಾಗಿ ಇಂತಹ ಅವಘಡಗಳು ಮರುಕಳಿಸಬಾರದು ಎಂದು ಬಿಬಿಎಂಪಿ ಹಾಗೂ ಅಗ್ನಿ ಶಾಮಕದಳ ಅಗ್ನಿ ಸುರಕ್ಷತೆ ಕಡ್ಡಾಯಗೊಳಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಹೇಳಿದ್ದಾರೆ.

ಲಂಡನ್‌ನಲ್ಲಿ ನೆಲೆಸಲು ಕೊಹ್ಲಿ ಯೋಜನೆ

ವಿರಾಟ್ ಕೊಹ್ಲಿ(Virat Kohli) ಅವರು ಭಾರತ ತೊರೆದು ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ಶಾಶ್ವತವಾಗಿ ನೆಲೆಸಲಿದ್ದಾರೆ ಎಂಬ ವದಂತಿಗಳು ಬಹಳ ದಿನಗಳಿಂದ ಕೇಳಿಬರುತ್ತಿವೆ. ಇದೀಗ ಈ ವದಂತಿ ಇನ್ನಷ್ಟು ವೇಗ ಪಡೆದುಕೊಂಡಿವೆ. ಕೊಹ್ಲಿಯ ಬಾಲ್ಯದ ಕೋಚ್‌(Virat Kohli Childhood Coach) ರಾಜ್‌ಕುಮಾರ್‌ ಶರ್ಮಾ ಅವರು ಸಂದರ್ಶನವೊಂದಲ್ಲಿ ಕೊಹ್ಲಿ ಭಾರತ ತೊರೆಯುವು ಖಚಿತ ಎಂದು ಹೇಳಿದ್ದಾರೆ.

ದೈನಿಕ್ ಜಾಗರಣ್ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಕೋಚ್ ರಾಜ್‌ಕುಮಾರ್ ಶರ್ಮಾ, ಕೊಹ್ಲಿ ತಮ್ಮ ಕುಟುಂಬದೊಂದಿಗೆ ಲಂಡನ್‌ಗೆ ತೆರಳಲು ಯೋಚಿಸುತ್ತಿದ್ದಾರೆ. ಶೀಘ್ರದಲ್ಲೇ ಭಾರತಕ್ಕೆ ಆಗಮಿಸಿದ ಬಳಿಕ ಅವರು ಕುಟುಂಬ ಸಮೇತರಾಗಿ ಲಂಡನ್‌ಗೆ ತೆರಳಲಿದ್ದಾರೆ ಎಂದು ಹೇಳಿದ್ದಾರೆ. ರಾಜ್‌ಕುಮಾರ್ ಅವರ ಈ ಹೇಳಿಕೆ ಕೊಹ್ಲಿ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ.