Monday, 12th May 2025

Vinesh Phogat: ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಗೆ ಸಾಥ್‌ ನೀಡಲಿದ್ದಾರೆ ವಿನೇಶ್ ಫೋಗಟ್!

Vinesh Phogat

ನವದೆಹಲಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP Law) ನೀಡುವ ಕುರಿತು ಕಾನೂನು ಜಾರಿಗೊಳಿಸಬೇಕು ಎಂದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಂಭು ಗಡಿಯಲ್ಲಿ(Shambhu border) ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು(ಶನಿವಾರ) 200 ದಿನಗಳನ್ನು ಪೂರೈಸಲಿದೆ. ಈ ನಿಟ್ಟಿನಲ್ಲಿ ರೈತರು ದೊಡ್ಡ ಮಟ್ಟದ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ. ಈ ಸಮಾರಂಭದಲ್ಲಿ ಮಾಜಿ ಕುಸ್ತಿ ಆಟಗಾರ್ತಿ ವಿನೇಶ್‌ ಫೋಗಟ್‌(Vinesh Phogat) ಕೂಡ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇತ್ತೀಚೆಗೆ ಮುಕ್ತಾಯ ಕಂಡಿದ್ದ ಪ್ಯಾರಿಸ್‌ ಒಲಿಂಪಿಕ್ಸ್‌ ಮಹಿಳಾ ಕುಸ್ತಿಯಲ್ಲಿ ವಿನೇಶ್‌ ನಿಗದಿತ ತೂಕಕ್ಕಿಂತ ಕೇವಲ 100 ಗ್ರಾಂ ಹೆಚ್ಚು ಇದ್ದ ಕಾರಣ ಫೈನಲ್‌ನಿಂದ ಅನರ್ಹಗೊಂಡು ಪದಕ ವಂಚಿತರಾಗಿದ್ದರು.

ಈ ಹಿಂದೆ ವಿನೇಶ್‌ ಫೋಗಟ್‌, ಬಜರಂಗ್‌ ಪೂನಿಯ, ಸಾಕ್ಷಿ ಮಲಿಕ್‌ ಸೇರಿ ಹಲವು ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ  ಲೈಗಿಂಕ ಕಿರುಕುಳದ ಆರೋಪ ಮಾಡಿ ನಡೆಸಿದ್ದ ಪ್ರತಿಭಟನೆ ವೇಳೆ ರೈತ ಸಂಘಟನೆಗಳು ಕೂಡ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿತ್ತು. ಇದೀಗ ವಿನೇಶ್‌ ಅವರು ಶಂಭು ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಲು ಮುಂದಾದಂತಿದೆ. ತಮ್ಮ ಉತ್ಪನ್ನಗಳಿಗೆ ಕಾನೂನುಬದ್ಧವಾಗಿ ಖಾತ್ರಿ ನೀಡಬೇಕೆಂದು ಒತ್ತಾಯಿಸಿ ರೈತರು ಫೆಬ್ರವರಿ 13 ರಿಂದ  ಪ್ರತಿಭಟನೆ ನಡೆಸುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಶಂಭು ಗಡಿಯಲ್ಲಿ ಹೆದ್ದಾರಿಯನ್ನು ಭಾಗಶಃ ಪುನರಾರಂಭಿಸಲು ಒಂದು ವಾರದೊಳಗೆ ಪಟಿಯಾಲ ಮತ್ತು ಅಂಬಾಲಾ ಜಿಲ್ಲೆಗಳ ಎಸ್‌ಪಿಗಳೊಂದಿಗೆ ಸಭೆ ನಡೆಸುವಂತೆ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಪೊಲೀಸ್ ಮುಖ್ಯಸ್ಥರಿಗೆ ಸುಪ್ರೀಂ ಕೋರ್ಟ್ ಸೋಮವಾರ(ಆಗಸ್ಟ್ 12) ನಿರ್ದೇಶನ ನೀಡಿತ್ತು. ಫೆಬ್ರವರಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸಂಘಟನೆಗಳ ರೈತರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೆಹಲಿಗೆ ಮೆರವಣಿಗೆ ನಡೆಸುವುದಾಗಿ ಘೋಷಿಸಿದ ನಂತರ ಹರಿಯಾಣ ಸರಕಾರವು ಅಂಬಾಲಾ-ಹೊಸದಿಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿತ್ತು.

ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಜಾರಿಗೆ ತರಬೇಕು ಎಂಬುದಾಗಿ ರೈತರು ಪಟ್ಟು ಹಿಡಿದಿದ್ದಾರೆ. ಇದರ ಮಧ್ಯೆಯೇ, ದ್ವಿದಳ ಧಾನ್ಯಗಳು, ಜೋಳ, ಹತ್ತಿ ಸೇರಿ ಹಲವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಕುರಿತು ಹೊಸ ಸಮಿತಿ ರಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು. ಹಾಗೆಯೇ, ರೈತರಿಂದ ಕೃಷಿ ಉತ್ಪನ್ನಗಳ ಖರೀದಿಗೆ ಯಾವುದೇ ಮಿತಿ ಇರುವುದಿಲ್ಲ ಹಾಗೂ ಖರೀದಿಗಾಗಿ ವೆಬ್‌ ಪೋರ್ಟಲ್‌ ಅಭಿವೃದ್ಧಿಪಡಿಸಲಾಗುತ್ತದೆ ಎಂಬುದು ಸೇರಿ ಕೇಂದ್ರ ಸರ್ಕಾರವು ರೈತರಿಗೆ ಹಲವು ಆಫರ್‌ ನೀಡಿತ್ತು.

ಮುಂದಿನ ಐದು ವರ್ಷಗಳಿಗೆ ಕನಿಷ್ಠ ಬೆಂಬಲ ಬೆಲೆಯ ಖಾತ್ರಿಯೂ ಕೇಂದ್ರದ ಆಫರ್‌ಗಳಲ್ಲಿ ಸೇರಿತ್ತು. ಆದರೆ, ಕೇಂದ್ರ ಸರ್ಕಾರದ ಆಫರ್‌ ತಿರಸ್ಕರಿಸಿದ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *