Sunday, 18th May 2025

U19 Asia Cup: ವೈಭವ್‌ ಸೂರ್ಯವಂಶಿ ಅರ್ಧಶತಕ, ಶ್ರೀಲಂಕಾ ವಿರುದ್ಧ ಗೆದ್ದು ಫೈನಲ್‌ಗೇರಿದ ಭಾರತ!

Vaibhav Suryavanshi smashes 5 sixes, hits 36-ball 76 to help India reach U19 Asia Cup final

ನವದೆಹಲಿ: ಕೋಟ್ಯಧಿಪತಿ ವೈಭವ್ ಸೂರ್ಯವಂಶಿ ಅಂಡರ್‌ 19 ಏಷ್ಯಾಕಪ್‌ ಟೂರ್ನಿಯಲ್ಲಿ (U19 Asia Cup) ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತೊಮ್ಮೆ ಎಲ್ಲರ ಮನ ಗೆದ್ದಿದ್ದಾರೆ. ಈ ಎಡಗೈ ಬ್ಯಾಟ್ಸ್‌ಮನ್ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಬೌಲರ್‌ಗಳಿಗೆ ಬೆವರಿಳಿಸಿದ್ದಾರೆ. ಈ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ 67 ರನ್‌ಗಳನ್ನು ಸಿಡಿಸಿದರು. ಅದರಲ್ಲಿಯೂ ಸೂರ್ಯವಂಶಿ ಅವರ 186ರ ಸ್ಟ್ರೈಕ್ ರೇಟ್ ಎಲ್ಲರ ಗಮನವನ್ನು ಸೆಳೆಯಿತು. ಸೂರ್ಯವಂಶಿ ಮತ್ತೊಮ್ಮೆ ತಮ್ಮ ಶಕ್ತಿಶಾಲಿ ಹೊಡೆತಗಳ ಮೂಲಕ ಎದುರಾಳಿ ಬೌಲರ್‌ಗಳನ್ನು ಬೆಂಡೆತ್ತಿದರು. ಎಡಗೈ ಬ್ಯಾಟ್ಸ್‌ಮನ್‌ ಬರೋಬ್ಬರಿ ಐದು ಸಿಕ್ಸರ್‌ ಬಾರಿಸಿದ್ದು ವಿಶೇಷ.

ಶುಕ್ರವಾರ ಶ್ರೀಲಂಕಾ ನೀಡಿದ್ದ 174 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡಕ್ಕೆ ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಭರ್ಜರಿ ಆರಂಭ ತಂದುಕೊಟ್ಟರು. ವೈಭವ್ ಸೂರ್ಯವಂಶಿ ಎರಡನೇ ಎಸೆತದಲ್ಲಿಯೇ ಸಿಕ್ಸರ್ ಬಾರಿಸಿದರು. ಅವರು ಎರಡನೇ ಓವರ್‌ನಲ್ಲಿ ಟೀಮ್ ಇಂಡಿಯಾದ ಸ್ಕೋರ್ ಅನ್ನು 40ಕ್ಕೆ ದಾಟಿಸಿದರು. ಸ್ಫೋಟಕ ಶೈಲಿಯಲ್ಲಿ ಬ್ಯಾಟ್‌ ಮಾಡಿದ ಸೂರ್ಯವಂಶಿ, ಕೇವಲ 24 ಎಸೆತಗಳಲ್ಲಿ 5 ಸಿಕ್ಸರ್‌ಗಳ ನೆರವಿನಿಂದ ಅರ್ಧಶತಕ ಪೂರೈಸಿದರು. ವೈಭವ್ ಆಯುಷ್ ಜೊತೆಗೂಡಿ 51 ಎಸೆತಗಳಲ್ಲಿ 91 ರನ್‌ಗಳ ಜೊತೆಯಾಟ ನಡೆಸಿ ಶ್ರೀಲಂಕಾವನ್ನು ಮಣಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದರು.

ಭಾರತಕ್ಕೆ 7 ವಿಕೆಟ್‌ಗಳ ಜಯ

ವೈಭವ್ ಸೂರ್ಯವಂಶಿ ಅವರು ಈ ಪಂದ್ಯದಲ್ಲಿ ಶತಕ ಸಿಡಿಸುತ್ತಾರೆಂದು ನಿರೀಕ್ಷಿಸಲಾಗಿತ್ತು ಆದರೆ, ಅವರು ಪ್ರವೀಣ್ ಮನೀಶಾ ಎಸೆತದಲ್ಲಿ ಕ್ಲೀನ್‌ ಬೌಲ್ಡ್ ಆದರು. ಆ ಮೂಲಕ ಸೂರ್ಯವಂಶಿ ಮೂರಂಕಿ ವೈಯಕ್ತಿಕ ಮೊತ್ತವನ್ನು ತಲುಪಲು ಸಾಧ್ಯವಾಗಲಿಲ್ಲ. ಆದರೆ ಅವರ ಅದ್ಭುತ ಇನಿಂಗ್ಸ್‌ ಆಧಾರದ ಮೇಲೆ ಟೀಮ್ ಇಂಡಿಯಾ ಕೇವಲ 21.4 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ತಮ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕ ವೈಭವ್ ಸೂರ್ಯವಂಶಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಕೇವಲ ಎರಡು ಪಂದ್ಯಗಳಲ್ಲಿ 11 ಸಿಕ್ಸರ್ ಬಾರಿಸಿದ ಸೂರ್ಯವಂಶಿ
ಆರಂಭಿಕ ಎರಡು ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಅವರು ಜಪಾನ್ ಮತ್ತು ಪಾಕಿಸ್ತಾನ ಎದುರು ನಿರಾಶೆ ಮೂಡಿಸಿದ್ದರು. ಇದಾದ ಬಳಿಕ ಅವರು ಯುಎಇ ವಿರುದ್ಧ 46 ಎಸೆತಗಳಲ್ಲಿ ಅಜೇಯ 76 ರನ್ ಮತ್ತು ಇದೀಗ ಅವರು ಸೆಮಿಫೈನಲ್ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದ್ದಾರೆ. ಸೂರ್ಯವಂಶಿ ಎರಡು ಪಂದ್ಯಗಳಲ್ಲಿ 11 ಸಿಕ್ಸರ್ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ರಾಜಸ್ಥಾನ್‌ ರಾಯಲ್ಸ್‌ ಸೇರಿದ ವೈಭವ್‌ ಸೂರ್ಯವಂಶಿ

ಇತ್ತೀಚೆಗೆ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಮೆಗಾ ಹರಾಜಿನಲ್ಲಿ ವೈಭವ್‌ ಸೂರ್ಯವಂಶಿ ಅವರನ್ನು ರಾಜಸ್ಥಾನ್‌ ರಾಯಲ್ಸ್‌ ಫ್ರಾಂಚೈಸಿಯು 1.10 ಕೋಟಿ ರೂ. ಗಳಿಗೆ ಖರೀದಿಸಿತ್ತು. ಕೇವಲ 13 ನೇ ವಯಸ್ಸಿನಲ್ಲಿಯೇ ವೈಭವ್‌ ಸೂರ್ಯವಂಶಿ ಕೋಟ್ಯಧಿಪತಿಯಾಗಿರುವುದು ಎಲ್ಲರ ಗಮನ ಸೆಳೆದಿರುವ ಸಂಗತಿಯಾಗಿದೆ.

ಈ ಸುದ್ದಿಯನ್ನು ಓದಿ: IPL 2025 Auction: ಕೇವಲ 13 ವರ್ಷದ ಹುಡುಗ ಕೋಟ್ಯಧಿಪತಿ! ಆರ್‌ಆರ್‌ ಸೇರಿದ ವೈಭವ್‌ ಸೂರ್ಯವಂಶಿ ಯಾರು?