Sunday, 18th May 2025

Travid Head: ʻಕ್ರೀಡಾ ಸ್ಪೂರ್ತಿ ಎಲ್ಲಿ? ʼ-ಸಿರಾಜ್‌ ಜತೆಗಿನ ಕಿರಿಕ್‌ ಬಗ್ಗೆ ಪ್ರತಿಕ್ರಿಯಿಸಿದ ಟ್ರಾವಿಸ್‌ ಹೆಡ್‌!

Travis Head breaks silence on Mohammed Siraj's outburst during Adelaide Test

ಅಡಿಲೇಡ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಹಾಗೂ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದ ಎರಡನೇ ದಿನ ತನಗೂ ಹಾಗೂ ಪ್ರವಾಸಿ ವೇಗಿ ಮೊಹಮ್ಮದ್‌ ಸಿರಾಜ್‌ ಅವರ ನಡುವೆ ಉಂಟಾದ ಮಾತಿನ ಚಕಮಕಿ ಬಗ್ಗೆ ಆಸೀಸ್‌ ಬ್ಯಾಟ್ಸ್‌ಮನ್‌ ಟ್ರಾವಿಸ್‌ ಹೆಡ್‌ (Travid Head) ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಭಾರತ ತಂಡದ ಆಟಗಾರರ ನಡೆಯ ಬಗ್ಗೆ ಎಡಗೈ ಬ್ಯಾಟ್ಸ್‌ಮನ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದ ಎರಡನೇ ದಿನವಾದ ಶನಿವಾರ ಪ್ರಥಮ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬ್ಯಾಟ್‌ ಮಾಡಿದ ಟ್ರಾವಿಸ್‌ ಹೆಡ್‌, 141 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್‌ ಹಾಗೂ 17 ಬೌಂಡರಿಗಳೊಂದಿಗೆ 140 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಆಸ್ಟ್ರೇಲಿಯಾ ತಂಡ 337 ರನ್‌ಗಳನ್ನು ಕಲೆ ಹಾಕುವಲ್ಲಿ ಅವರು ಪ್ರಮುಖ ಪಾತ್ರವಹಿಸಿದರು. ಆದರೆ, ಟ್ರಾವಿಸ್‌ ಹೆಡ್‌ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್‌ಗೆ ಮರಳುವಾಗ ಭಾರತ ತಂಡದ ವೇಗಿ ಮೊಹಮ್ಮದ್‌ ಸಿರಾಜ್‌ ಅವರೊಂದಿಗೆ ಮಾತಿನ ಚಕಮಕಿಯನ್ನು ನಡೆಸಿದರು.

82ನೇ ಓವರ್‌ನಲ್ಲಿ ಮೊಹಮ್ಮದ್‌ ಸಿರಾಜ್‌ಗೆ ಟ್ರಾವಿಸ್‌ ಹೆಡ್‌ ಬೌಂಡರಿ ಹಾಗೂ ಸಿಕ್ಸರ್‌ ಸಿಡಿಸಿದರು. ಇದಾದ ಬಳಿಕ ಸಿರಾಜ್‌ ಎಸೆದ ಯಾರ್ಕರ್‌ ಎಸೆತದಲ್ಲಿ ಹೆಡ್‌ ಕ್ಲೀನ್‌ ಬೌಲ್ಡ್‌ ಆದರು. ಈ ವೇಳೆ ಟ್ರಾವಿಸ್‌ ಹೆಡ್‌ ವಿರುದ್ದ ಆಕ್ರಮಣಕಾರಿ ಮಾತುಗಳನ್ನು ಸಿರಾಜ್‌ ಆಡಿದರು. ಈ ವೇಳೆ ಈ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಎರಡನೇ ದಿನದಾಟದ ಬಳಿಕ ಈ ಬಗ್ಗೆ ಟ್ರಾವಿಸ್‌ ಹೆಡ್‌ ಪ್ರಕ್ರಿಯಿಸಿದ್ದಾರೆ.

ಸಿರಾಜ್‌ ಬೌಲಿಂಗ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೆ: ಹೆಡ್‌

“ಚೆನ್ನಾಗಿ ಬೌಲ್‌ ಮಾಡಿದ್ದೀರಿ ಎಂದು ಹೊಗಳಿದ್ದೆ, ಆದರೆ, ಅವರು ಅದನ್ನು ತಪ್ಪಾಗಿ ಅರ್ಥೈಯಿಸಿಕೊಂಡಿದ್ದಾರೆ. ಅವರು ನನಗೆ ಹೊರಗೆ ಹೋಗುವಂತೆ ಸೂಚಿಸಿದಾಗ, ನಾನು ಕೂಡ ತಿರುಗೇಟು ನೀಡಿದೆ. ಈ ಘಟನೆ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ನನಗೆ ನಿರಾಶೆಯಾಗಿದೆ. ಅವರು ಈ ರೀತಿ ವರ್ತಿಸಲು ಬಯಸಿದರೆ, ಅವರು ತಮ್ಮನ್ನು ಹೇಗೆ ಪ್ರತಿನಿಧಿಸುತ್ತಾರೆ?,” ಎಂದು ಟ್ರಾವಿಸ್‌ ಹೆಡ್‌ ಪ್ರಶ್ನೆ ಮಾಡಿದ್ದಾರೆ.

ಶತಕವನ್ನು ತಮ್ಮ ಪುತ್ರನಿಗೆ ಸಮರ್ಪಿಸಿದ ಹೆಡ್‌

ಭಾರತ ತಂಡದಲ್ಲಿನ ಕ್ರೀಡಾ ಸ್ಪೂರ್ತಿ ಕೊರತೆ ಎದ್ದು ಕಾಣುತ್ತಿದೆ. ಆದರೆ, ಇದು ಕ್ರೀಡೆಯ ಒಂದು ಭಾಗ ಎಂದು ಹೇಳಿದ ಟ್ರಾವಿಸ್‌ ಹೆಡ್‌, ತಮ್ಮ ಶತಕವನ್ನು ಹೊಸದಾಗಿ ಜನಿಸಿದ ತಮ್ಮ ಮಗ ಹ್ಯಾರಿಸನ್‌ಗೆ ಸಮರ್ಪಿಸಿದ್ದಾರೆ.

“ಕಳೆದ ಎರಡು ವಾರಗಳ ಹಿಂದೆ ಜನಿಸಿದ ಗಂಡು ಮಗು ನಮ್ಮ ಜೊತೆ ಇದೆ. ಮೊದಲನೇ ಮಗು ಮಿಲ್ಲರ್‌ ಜನಿಸಿದಾಗಲೂ ನಾನು ಇದೇ ರೀತಿ ಮಾಡಿದ್ದೆ. ಇತ್ತೀಚೆಗೆ ಜನಿಸಿರುವ ಹ್ಯಾರಿಸನ್‌ಗೂ ಇದೇ ರೀತಿಯ ಕೊಡುಗೆಯನ್ನು ನೀಡಿಲ್ಲವಾದರೆ, ನನ್ನ ಪತ್ನಿಯಿಂದ ನಾನು ಬೆತ್ತದಿಂದ ಏಟು ತಿನ್ನಬೇಕಾಗುತ್ತದೆ. ಹಾಗಾಗಿ ಈಗ ಸಿಕ್ಕಿದ್ದ ಅವಕಾಶವನ್ನು ಸಂಪೂರ್ಣವಾಗಿ ಬಳಿಸಿಕೊಂಡಿದ್ದೇನೆ. ಒಂದು ಹಂತದಲ್ಲಿ ಭಾರತ ತಂಡದ ಬೌಲರ್‌ಗಳು ಉತ್ತಮವಾಗಿ ಬೌಲ್‌ ಮಾಡಿದ್ದರು ಹಾಗೂ ಬ್ಯಾಟ್‌ ಮಾಡಲು ಕಷ್ಟವಾಗಿತ್ತು. ಆದರೆ, ನನಗೆ ಸ್ವಲ್ಪ ಅದೃಷ್ಟವಿತ್ತು ಹಾಗೂ ನಮ್ಮ ಹುಡುಗರು ಇದೀಗ ಉತ್ತಮ ಸ್ಥಾನದಲ್ಲಿದ್ದಾರೆ,” ಎಂದು ಟ್ರಾವಿಸ್‌ ಹೆಡ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ಮೊಹಮ್ಮದ್‌ ಸಿರಾಜ್‌-ಟ್ರಾವಿಸ್‌ ಹೆಡ್‌ ನಡುವೆ ಮಾತಿನ ಚಕಮಕಿ! ವಿಡಿಯೊ