Tuesday, 13th May 2025

ಪಂತ್‌ ಸ್ಪೋಟಕ ಆಟ: ಭಾರತಕ್ಕೆ ’ಫಾಲೋ ಆನ್‌’ ಕಂಟಕ ?

ಚೆನ್ನೈ: ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯ ಹೀರೋ ರಿಷಭ್ ಪಂತ್ (91ರನ್) ಸ್ಫೋಟಕ ಬ್ಯಾಟಿಂಗ್ ಹಾಗೂ ಚೇತೇಶ್ವರ್ ಪೂಜಾರ (73ರನ್) ಅರ್ಧಶತಕದಾಟದ ನಡುವೆಯೂ ಆತಿಥೇಯ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಫಾಲೋಆನ್ ಭೀತಿಗೆ ಸಿಲುಕಿದೆ.

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ಗೆ 257 ರನ್‌ಗಳಿಸಿದ್ದು, ಫಾಲೋಆನ್ ಭೀತಿ ತಪ್ಪಿಸಿಕೊಳ್ಳಲು ಇನ್ನು 121 ರನ್‌ ಗಳಿಸಬೇಕಿದೆ. ಇದಕ್ಕೂ ಮೊದಲು 5 ವಿಕೆಟ್ ಗೆ 555 ರನ್ ಗಳಿಂದ ದಿನದಾಟ ಮುಂದುವರಿಸಿದ ಇಂಗ್ಲೆಂಡ್ ತಂಡ 578 ರನ್ ಗಳಿಗೆ ಸರ್ವಪತನ ಕಂಡಿತು.

ಇನಿಂಗ್ಸ್ ಆರಂಭಿಸಿದ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ರೋಹಿತ್ ಶರ್ಮ (6) ಜೋಫ್ರಾ ಆರ್ಚರ್ ಎಸೆತವನ್ನು ರಕ್ಷಣಾತ್ಮವಾಗಿ ಆಡಲು ಯತ್ನಿಸಿದಾಗ ಎಡ್ಜ್ ಆದ ಚೆಂಡು ನೇರವಾಗಿ ವಿಕೆಟ್ ಕೀಪರ್ ಕೈಸೇರಿತು. ಆಕರ್ಷಕ ಬೌಂಡರಿ ಸಿಡಿಸಿ ಕ್ರಿಸ್‌ನಲ್ಲಿ ನೆಲೆಯೂರಲು ಯತ್ನಿಸುತ್ತಿದ್ದ ಶುಭಮಾನ್ ಗಿಲ್ ಆರ್ಚರ್ ಎಸೆತದಲ್ಲಿ ಮಿಡ್‌ಆನ್‌ನಲ್ಲಿದ್ದ ಜೇಮ್ಸ್ ಆಂಡರ್‌ಸನ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಪೂಜಾರಾ ಜತೆಯಾದ ನಾಯಕ ವಿರಾಟ್ ಕೊಹ್ಲಿಗೆ (11) ಡಾಮ್ ಬೆಸ್ ಆಘಾತ ನೀಡಿ ದರು. ಎರಡು ಓವರ್‌ಗಳ ಅಂತರದಲ್ಲಿ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆಗೆ (1) ಪೆವಿಲಿಯನ್ ದಾರಿ ತೋರಿದ ಬೆಸ್, ಭಾರತಕ್ಕೆ ಚೇತರಿಕೆ ಕಾಣಲು ಅವಕಾಶ ನೀಡಿದೆ ಶಾಕ್ ನೀಡಿದರು.

ಹೀನಾಯ ಸ್ಥಿತಿಯಲ್ಲಿದ್ದ ತಂಡಕ್ಕೆ ರಿಷಭ್ ಪಂತ್ ಚೇತರಿಕೆ ನೀಡಿದರು. ಅಗ್ರಕ್ರಮಾಂಕದ ವೈಫಲ್ಯ ಹಾಗೂ ಇಂಗ್ಲೆಂಡ್ ಬೌಲರ್ ‌ಗಳ ಕರಾರುವಾಕ್ ದಾಳಿ ನಡುವೆಯೂ ಪಂತ್ ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದರು. ಮತ್ತೊಂದು ತುದಿಯಲ್ಲಿ ಪೂಜಾರ ಕೂಡ ಪಂತ್‌ಗೆ ಸಾಥ್ ನೀಡಿದರು. ಚಹಾ ವಿರಾಮದ ಬಳಿಕ ಡಾಮ್ ಬೆಸ್ ಮತ್ತೊಮ್ಮೆ ಭಾರತಕ್ಕೆ ವಿಲನ್ ಆದರು. ಈ ಜೋಡಿ 5ನೇ ವಿಕೆಟ್‌ಗೆ 119 ರನ್ ಜತೆಯಾಟವಾಡಿ ಇನಿಂಗ್ಸ್ ಸುಧಾರಣೆ ನೀಡಿತು. ಸ್ಥಳೀಯ ಪ್ರತಿಭೆಗಳಾದ ವಾಷಿಂಗ್ಟನ್ ಸುಂದರ್ (33) ಹಾಗೂ ಆರ್.ಅಶ್ವಿನ್ (8) ಕ್ರೀಸ್‌ನಲ್ಲಿದ್ದಾರೆ.

 

Leave a Reply

Your email address will not be published. Required fields are marked *