Sunday, 11th May 2025

ಭಾರತ 252 ರನ್ನಿಗೆ ಸರ್ವಪತನ: ಶ್ರೇಯಸ್‌ಗೆ ತಪ್ಪಿದ ಶತಕ

ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 252 ರನ್ನಿಗೆ ಸರ್ವಪತನ ಕಂಡಿದೆ.
ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆತಿಥೇಯ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಿಬ್ಬರು 30 ರನ್‌ ಆಗುವಷ್ಟರಲ್ಲಿ ವಾಪಸ್ಸಾದರು. ಮಾಜಿ ನಾಯಕ ವಿರಾಟ್‌ ಈ ಬಾರಿಯೂ ಶತಕದ ಮುಖ ನೋಡಲಾಗಲಿಲ್ಲ. ಕಳೆದ ಪಂದ್ಯದಲ್ಲಿ ಸಿಡಿದಿದ್ದ ಕೀಪರ್‌ ಪಂತ್‌ 39ಕ್ಕೆ ಸಾಕೆನಿಸಿಕೊಂಡರು. ಒಂದೆಡೆ ವಿಕೆಟ್ ಉರುಳಿದರೂ, ಶ್ರೇಯಸ್‌ ಅಯ್ಯರ್‌, ಲಂಕೆ ಬೌಲರುಗಳ ಬೆವರಿಳಿಸಿದರು. ಅಂತಿಮವಾಗಿ ಶತಕಕ್ಕೆ ಎಂಟು ರನ್ ಬಾಕಿ ಇದ್ದಾಗ, ಹತ್ತನೇ ವಿಕೆಟ್‌ ರೂಪದಲ್ಲಿ ಔಟಾದರು.
ಶ್ರೀಲಂಕಾ ಪರ ಲಸಿತ್‌ ಹಾಗೂ ಪ್ರವೀಣ ಜಯವಿಕ್ರಮೆ ತಲಾ ಮೂರು ವಿಕೆಟ್‌ ಕಿತ್ತರು.

2 ಟೆಸ್ಟ್‌ಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಎರಡು ತಂಡಗಳ ನಡುವೆ ಡೇ-ನೈಟ್ ಅಂದರೆ ಪಿಂಕ್ ಬಾಲ್ ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಭಾರತ ತಂಡದ ನಾಲ್ಕನೇ ಪಿಂಕ್ ಬಾಲ್ ಟೆಸ್ಟ್ ಇದಾಗಿದೆ. ಈ ಪಂದ್ಯದ ಮೂಲಕ ರೋಹಿತ್ ಶರ್ಮಾ ಬೆಂಗಳೂರಿನಲ್ಲಿ ಮೊದಲ ಪಿಂಕ್ ಬಾಲ್ ಟೆಸ್ಟ್ ಆಡುತ್ತಿದ್ದಾರೆ.