Monday, 12th May 2025

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಚಾಂಪಿಯನ್ ಆಗಿ ಮೆರೆದ ತಮಿಳುನಾಡು

ಅಹಮದಾಬಾದ್‌: 2020-21ನೇ ಆವೃತ್ತಿಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್‌ನಲ್ಲಿ ಚಾಂಪಿಯನ್ ಆಗಿ ತಮಿಳುನಾಡು ಹೊರಹೊಮ್ಮಿದೆ.

ಫೈನಲ್ ಪಂದ್ಯದಲ್ಲಿ ತಮಿಳುನಾಡು ಬರೋಡಾ ವಿರುದ್ಧ ಜಯ ಸಾಧಿಸಿ ಚಾಂಪಿಯನ್ ಆಗಿ ಮೆರೆದಿದೆ. ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ಹಾಗೂ ತಮಿಳು ನಾಡು ತಂಡಗಳು ಅಜೇಯವಾಗಿಯೇ ಫೈನಲ್ ಹಂತಕ್ಕೇರಿದ್ದವು.

ಮೊದಲಿಗೆ ಬ್ಯಾಟಿಂಗ್ ಮಾಡಿದ ಬರೋಡಾ ಆರಂಭದಿಂದಲೇ ಎಡವಿತ್ತು. ತಮಿಳುನಾಡು ಬೌಲರ್‌ಗಳ ದಾಳಿಯನ್ನು ಎದುರಿಸುವಲ್ಲಿ ವಿಫಲವಾದ ಬರೊಡಾ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿಕೊಳ್ಳಲಾರಂಭಿಸಿದ್ದರು. 36 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು.

ವಿಷ್ಣು ಸೋಲಂಕಿಯ ಸಮಯೋಚಿತ ಆಟ ತಂಡಕ್ಕೆ ಬಲುದೊಡ್ಡ ಆಸರೆಯಾಯಿತು. ವಿಷ್ಣು ಸೋಲಂಕಿ ತಂಡದ ರನ್ ಗತಿಯನ್ನು ಮೇಲಕ್ಕೇರಿಸುವ ಪ್ರಯತ್ನ ನಡೆಸಿದರು. ಸೋಲಂಕಿ ಅಮೂಲ್ಯ 49 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡದ ಮೊತ್ತ 120 ತಲುಪಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ತಮಿಳು ನಾಡು ಗೆಲ್ಲಲು 121 ರನ್‌ಗಳ ಸಾಮಾನ್ಯ ಗುರಿಯನ್ನು ಪಡೆಯಿತು. ಈ ಗುರಿಯನ್ನು ತಮಿಳುನಾಡು ತಂಡ ಯಾವುದೇ ಆತಂಕವಿಲ್ಲದೆ ನಿರಾಯಾಸವಾಗಿ ತಲುಪಿದೆ.

Leave a Reply

Your email address will not be published. Required fields are marked *