Thursday, 15th May 2025

ಮಾಜಿ ಕ್ರಿಕೆಟಿಗ ಎಸ್.ಶ್ರೀಶಾಂತ್ ವಿರುದ್ಧ ವಂಚನೆ ಪ್ರಕರಣ ದಾಖಲು

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಇವರ ವಿರುದ್ಧ ಕೇರಳದ ಸರೀಶ್ ಗೋಪಾಲನ್ ಎಂಬ ಯುವಕ ವಂಚನೆ ಆರೋಪ ಮಾಡಿದ್ದಾರೆ. ಹೀಗಾಗಿ, ಶ್ರೀಶಾಂತ್​ ಮತ್ತು ಇತರ ಇಬ್ಬರ ವಿರುದ್ಧ ಪೊಲೀಸ್​ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಶ್ರೀಶಾಂತ್ ಹೊರತಾಗಿ ರಾಜೀವ್ ಕಮಾರ್(50) ಮತ್ತು ವೆಂಕಟೇಶ್‌ ಕಿಣಿ(43) ಎಂಬವರ ಹೆಸರು ಎಫ್‌ಐಆರ್‌ನಲ್ಲಿದೆ. ಸರೀಶ್ ಗೋಪಾಲನ್ ಎಂಬವರು ಈ ಮೂವರ ವಿರುದ್ಧ ಪೊಲೀಸರಿಗೆ ವಂಚನೆ ಆರೋಪ ಮಾಡಿ ದೂರು ನೀಡಿದ್ದರು. ಸರೀಶ್ ಗೋಪಾಲ್ ಚೂಂಡ ಕನ್ನಪುರಮ್ ನಿವಾಸಿಯಾಗಿದ್ದು, ಈ ಮೂವರಿಂದ ತನಗೆ 18.7 ಲಕ್ಷ ರೂಪಾಯಿ ವಂಚನೆಯಾಗಿದೆ ಎಂದು ತಿಳಿಸಿದ್ದಾರೆ. ಕರ್ನಾಟಕದ ಕೊಲ್ಲೂರಿನಲ್ಲಿ ಕ್ರೀಡಾ ಅಕಾಡೆಮಿ ನಿರ್ಮಿಸಲು ಈ ಹಣವನ್ನು ಪಡೆದುಕೊಳ್ಳಲಾಗಿತ್ತು ಎಂದು ದೂರುದಾರರು ತಿಳಿಸಿದ್ದಾರೆ.

ಶ್ರೀಶಾಂತ್ ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, “ಅಂತಹ ಯಾವುದೇ ಹಣಕಾಸಿನ ವಹಿವಾಟು ಅಥವಾ ಇತರ ಚಟುವಟಿಕೆ ಗಳಲ್ಲಿ ನಾನು ಭಾಗಿಯಾಗಿಲ್ಲ” ಎಂದು ಹೇಳಿದ್ದಾರೆ.

ಐಪಿಎಲ್-2013ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸದಸ್ಯರಾಗಿದ್ದಾಗ ಶ್ರೀಶಾಂತ್‌ ಅವರನ್ನು ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಬಂಧಿಸಲಾಗಿತ್ತು. ರಾಜಸ್ಥಾನದ ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಕೂಡ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು. ಬಿಸಿಸಿಐ ಶ್ರೀಶಾಂತ್‌ಗೆ ಆಜೀವ ನಿಷೇಧ ಹೇರಿತ್ತು. ಸುದೀರ್ಘ ವಿಚಾರಣೆಯ ನಂತರ ದೆಹಲಿ ಹೈಕೋರ್ಟ್ ಇವರನ್ನು ಖುಲಾಸೆ ಗೊಳಿಸಿತ್ತು. ಇದಾದ ಬಳಿಕ ಬಿಸಿಸಿಐ ಕೂಡ ಶ್ರೀಶಾಂತ್ ಅವರ ನಿಷೇಧವನ್ನು 7 ವರ್ಷಕ್ಕಿಳಿಸಿತ್ತು.

Leave a Reply

Your email address will not be published. Required fields are marked *