Sunday, 18th May 2025

SMAT 2025: 48 ಎಸೆತಗಳಲ್ಲಿ 97 ರನ್‌ ಸಿಡಿಸಿದ ಸಿಎಸ್‌ಕೆ ನಾಯಕ ಋತುರಾಜ್‌ ಗಾಯಕ್ವಾಡ್‌!

SMAT 2025: CSK captain Ruturaj Gaikwad hits a blazing 48 ball 97 in SMAT for Maharashtra

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ (SMAT 2025) ಟೂರ್ನಿಯ ನಾಲ್ಕು ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಋತುರಾಜ್‌ ಗಾಯಕ್ವಾಡ್‌ ಬ್ಯಾಟಿಂಗ್‌ ಲಯಕ್ಕೆ ಮರಳಿದ್ದಾರೆ. ಗುರುವಾರ ಸರ್ವೀಸಸ್‌ ವಿರುದ್ದದ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ನಾಯಕ ಸ್ಪೋಟಕ ಬ್ಯಾಟ್‌ ಮಾಡಿದರು. ಇವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಮಹಾರಾಷ್ಟ್ರ ತಂಡ 41 ರನ್‌ಗಳಿಂದ ಸರ್ವೀಸಸ್‌ ತಂಡವನ್ನು ಮಣಿಸಿತು.

ಸರ್ವಿಸಸ್ ವಿರುದ್ಧದ ಸ್ಪೋಟಕ ಇನಿಂಗ್ಸ್‌ನಲ್ಲಿ ಮಹಾರಾಷ್ಟ್ರ ನಾಯಕ ಋತುರಾಜ್ ಗಾಯಕ್ವಾಡ್ 48 ಎಸೆತಗಳಲ್ಲಿ 202.08 ಸ್ಟ್ರೈಕ್ ರೇಟ್‌ನಲ್ಲಿ 97 ರನ್‌ಗಳನ್ನು ಸಿಡಿಸಿದರು. ಆದರೆ, ಅವರು ಕೇವಲ 3 ರನ್‌ಗಳಿಂದ ತಮ್ಮ ಟಿ20 ಶತಕದಿಂದ ವಂಚಿತರಾದರು. ಋತುರಾಜ್ ಅವರ ಇನಿಂಗ್ಸ್‌ನಲ್ಲಿ 8 ಸಿಕ್ಸರ್ ಮತ್ತು 6 ಬೌಂಡರಿಗಳು ಸೇರಿವೆ.

28 ಎಸೆತಗಳಲ್ಲಿ ಅರ್ಧಶತಕ

ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ 97 ರನ್‌ಗಳ ಬಿರುಸಿನ ಇನಿಂಗ್ಸ್‌ನಲ್ಲಿ ಋತುರಾಜ್ ಗಾಯಕ್ವಾಡ್ ಕೇವಲ 28 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಮಹಾರಾಷ್ಟ್ರ ಪರ ಓಪನಿಂಗ್ ಮಾಡಲು ಬಂದ ಗಾಯಕ್ವಾಡ್‌, ನಾಲ್ಕು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳ ನೆರವಿನಿಂದ ಅರ್ಧಶತಕವನ್ನು ತಲುಪಿದ್ದರು.

ಋತುರಾಜ್ ಗಾಯಕ್ವಾಡ್ ಅವರ 97 ರನ್‌ಗಳ ಇನಿಂಗ್ಸ್‌ನ ವಿಶೇಷವಾಗಿದೆ. ಏಕೆಂದರೆ ಇದು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಋತುರಾಜ್‌ ಗಾಯಕ್ವಾಡ್‌ ಅವರ ಪಾಲಿಗೆ ಇದು ಮೊದಲ ಅರ್ಧಶತಕವಾಗಿದೆ. ಇದಕ್ಕೂ ಮುನ್ನ ಅವರು ಆಡಿದ 4 ಇನಿಂಗ್ಸ್‌ಗಳಲ್ಲಿ ಋತುರಾಜ್ ಗಾಯಕ್ವಾಡ್‌ 1, 19, 4 ಮತ್ತು 2 ರನ್ ಗಳಿಸಿದ್ದರು.

ಮಹಾರಾಷ್ಟ್ರ ತಂಡಕ್ಕೆ 41 ರನ್‌ ಜಯ

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಮಹಾರಾಷ್ಟ್ರ ತಂಡ, ಋತುರಾಜ್‌ ಗಾಯಕ್ವಾಡ್‌ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 231 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ ಸರ್ವೀಸಸ್‌ ತಂಡ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್‌ಗಳ ನಷ್ಟಕ್ಕೆ 190 ರನ್‌ಗಳಿಗೆ ಸೀಮಿತವಾಯಿತು.

ಈ ಸುದ್ದಿಯನ್ನು ಓದಿ: SMAT 2025: 28 ಎಸೆತಗಳಲ್ಲಿ ಶತಕ ಸಿಡಿಸಿ ಊರ್ವಿಲ್‌ ಪಟೇಲ್‌ ದಾಖಲೆ ಸರಿಗಟ್ಟಿದ ಅಭೀಷೇಕ್‌ ಶರ್ಮಾ!