Sunday, 18th May 2025

SMAT 2025: ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌, ಹ್ಯಾಟ್ರಿಕ್‌ ವಿಕೆಟ್‌ ಕಿತ್ತ ಭುವನೇಶ್ವರ್‌ ಕುಮಾರ್‌!

SMAT 2025: Bhuvneshwar Kumkar picks hat-trick in SMAT after Rs 10.75 crore deal with RCB

ನವದೆಹಲಿ: ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ನಿಮಿತ್ತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿರುವ ಭಾರತದ ಹಿರಿಯ ವೇಗಿ ಭುವನೇಶ್ವರ್‌ ಕುಮಾರ್‌ ಅವರು ಪ್ರಸ್ತುತ ನಡೆಯುತ್ತಿರುವ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ (SMAT 2025) ಟಿ20 ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ. ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಜಾರ್ಖಂಡ್‌ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್‌ ಕುಮಾರ್‌ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಮಾಡಿದ್ದಾರೆ.

ಉತ್ತರ ಪ್ರದೇಶ ತಂಡ ನೀಡಿದ್ದ 161 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಜಾರ್ಖಂಡ್‌ ತಂಡವನ್ನು ಕಟ್ಟಿ ಹಾಕುವಲ್ಲಿ ಭುವನೇಶ್ವರ್‌ ಕುಮಾರ್‌ ಅವರು ಮಹತ್ತರ ಪಾತ್ರವನ್ನು ವಹಿಸಿದರು. ಅವರು ಈ ಪಂದ್ಯದಲ್ಲಿ ನಾಲ್ಕು ಓವರ್‌ಗಳನ್ನು ಬೌಲ್‌ ಮಾಡಿದ ಭುವನೇಶ್ವರ್‌ ಕುಮಾರ್‌ ಅವರು ಒಂದು ಮೇಡಿನ್‌ ಹಾಗೂ ಕೇವಲ 6 ರನ್‌ ಕೊಟ್ಟು ಮೂರು ವಿಕೆಟ್‌ಗಳನ್ನು ಪಡೆದರು. ತಮ್ಮ ಹ್ಯಾಟ್ರಿಕ್‌ ವಿಕೆಟ್‌ ಮೂಲಕ ಉತ್ತರ ಪ್ರದೇಶ ತಂಡದ 10 ರನ್‌ಗಳ ಗೆಲುವಿಗೆ ನೆರವು ನೀಡಿದರು ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಅಂದ ಹಾಗೆ 17ನೇ ಓವರ್‌ನಲ್ಲಿ ತಮ್ಮ ಕೊನೆಯ ಓವರ್‌ ಬೌಲ್‌ ಮಾಡಲು ಕಣಕ್ಕೆ ಇಳಿದ ಭುವನೇಶ್ವರ್‌ ಕುಮಾರ್‌, ರಾಬಿನ್‌ ಮಿಂಝ್‌, ಬಾಲ ಕೃಷ್ಣ ಹಾಗೂ ವಿವೇಕಾನಂದ ತಿವಾರಿ ಅವರನ್ನು ಔಟ್‌ ಮಾಡಿದರು. ಆ ಮೂಲಕ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಮಾಡಿದರು ಹಾಗೂ ಮೇಡಿನ್‌ ಓವರ್‌ ಅನ್ನು ಪೂರ್ಣಗೊಳಿಸಿದರು. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಮಾಡಿದ ನಾಲ್ಕನೇ ಬೌಲರ್‌ ಎನಿಸಿಕೊಂಡರು. ಇದಕ್ಕೂ ಮುನ್ನ ಆಕಾಶ್‌ ಮಧ್ವಾಲ್‌, ಶ್ರೇಯಸ್‌ ಗೋಪಾಲ್‌ ಮತ್ತು ಫೆಲಿಕ್ಸ್‌ ಅಲೆಮಾವೊ ಅವರು ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಮಾಡಿದ್ದರು.

300 ಟಿ20 ವಿಕೆಟ್‌ ಸಾಧನೆ ಮಾಡಿದ್ದ ಭುವನೇಶ್ವರ್‌

ಈ ಟೂರ್ನಿಯ ಆರಂಭದಲ್ಲಿ ಭುವನೇಶ್ವರ್‌ ಕುಮಾರ್‌ ಅವರು ಟಿ20 ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ವೇಗದ ಬೌಲರ್‌ ಎನಿಸಿಕೊಂಡಿದ್ದರು. ಆ ಮೂಲಕ ಟೀಮ್‌ ಇಂಡಿಯಾ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರನ್ನು ಹಿಂದಿಕ್ಕಿದ್ದರು. ಭುವನೇಶ್ವರ್‌ ಕುಮಾರ್‌ ಅವರ ಖಾತೆಯಲ್ಲಿ 181 ಐಪಿಎಲ್‌ ವಿಕೆಟ್‌ಗಳು ಹಾಗೂ 90 ಇಂಟರ್‌ನ್ಯಾಷನಲ್‌ ವಿಕೆಟ್‌ಗಳನ್ನು ಹೊಂದಿದ್ದಾರೆ. ಅತಿ ಹೆಚ್ಚು ಟಿ20 ವಿಕೆಟ್‌ ಪಡೆದಿರುವ ಭಾರತೀಯ ವೇಗಿಗಳ ಪಟ್ಟಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ಬಳಿಕ ಭುವನೇಶ್ವರ್‌ ಕುಮಾರ್‌ ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಭಾರತೀಯ ಬೌಲರ್‌ಗಳ ಸಾಲಿನಲ್ಲಿ ಯುಜ್ವೇಂದ್ರ ಚಹಲ್‌ (364), ಪಿಯೂಷ್‌ ಚಾವ್ಲಾ (319) ಹಾಗೂ ರವಿಚಂದ್ರನ್‌ ಅಶ್ವಿನ್‌ (310) ಅಗ್ರ ಮೂರು ಸ್ಥಾನಗಳಲ್ಲಿದ್ದಾರೆ.

ಆರ್‌ಸಿಬಿ ಸೇರಿದ್ದ ಭುವನೇಶ್ವರ್‌ ಕುಮಾರ್‌

ನವೆಂಬರ್‌ 24 ಮತ್ತು 25 ರಲ್ಲಿ ನಡೆದಿದ್ದ 2025ರ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿನಲ್ಲಿ ಭುವನೇಶ್ವರ್‌ ಕುಮಾರ್‌ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 10.75 ಕೋಟಿ ರೂ. ಗಳಿಗೆ ಖರೀದಿಸಿತ್ತು. ಆ ಮೂಲಕ ತಮ್ಮ ವೇಗದ ಬೌಲಿಂಗ್‌ ವಿಭಾಗವನ್ನು ಬಲಿಷ್ಠಗೊಳಿಸಿಕೊಂಡಿದೆ. ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಭುವನೇಶ್ವರ್‌ ಕುಮಾರ್‌ ಅವರು ಆರ್‌ಸಿಬಿ ಅಭಿಮಾನಿಗಳಿಗೆ ವಿಶ್ವಾಸ ಮೂಡಿಸಿದ್ದಾರೆ.

ಈ ಸುದ್ದಿಯನ್ನು ಓದಿ: IPL Auction 2025: ಆರ್‌ಸಿಬಿ ಸೇರಿದ ಭುವನೇಶ್ವರ್‌, ಕೃಣಾಲ್‌