Saturday, 17th May 2025

SMAT 2025: ಅಜಿಂಕ್ಯ ರಹಾನೆ ಫಿಫ್ಟಿ, ವಿದರ್ಭ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದ ಮುಂಬೈ!

SMAT 2025: AJinkya Rahane Fifty, Mumbai Indians beat Vidarbha for 6 Wickets and Enter Semifinal

ಬೆಂಗಳೂರು: ಸ್ಟಾರ್‌ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಸ್ಪೋಟಕ ಅರ್ಧಶತಕದ ಬಲದಿಂದ ಮುಂಬೈ ತಂಡ, 2025ರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ (SMAT 2025) ಟಿ20 ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ವಿದರ್ಭ ಎದುರು 6 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಮಾಡಿದೆ.

ಬೆಂಗಳೂರಿನ ಹೊರ ವಲಯ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ವಿದರ್ಭ ನೀಡಿದ್ದ 222 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮುಂಬೈ ತಂಡ, ಅಜಿಂಕ್ಯ ರಹಾನೆ (84 ರನ್‌) ಅರ್ಧಶತಕದ ಬಲದಿಂದ 19.2 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 224 ರನ್‌ಗಳನ್ನು ಗಳಿಸಿ ಗೆಲುವಿನ ದಡ ಸೇರಿತು.

ಅಜಿಂಕ್ಯ ರಹಾನೆ ಅರ್ಧಶತಕ

ಪೃಥ್ವಿ ಶಾ ಜೊತೆ ಇನಿಂಗ್ಸ್‌ ಆರಂಭಿಸಿದ ಅಜಿಂಕ್ಯ ರಹಾನೆ ಆರಂಭದಿಂದಲೂ ಸ್ಪೋಟಕ ಬ್ಯಾಟಿಂಗ್‌ಗೆ ಕೈ ಹಾಕಿದರು. ವಿದರ್ಭ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಅವರು, ಕೇವಲ 45 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 84 ರನ್‌ಗಳನ್ನು ಸಿಡಿಸಿದರು. ಮುಂಬೈ ತಂಡವನ್ನು ಗೆಲುವಿನಲ್ಲಿ ಸನಿಹಕ್ಕೆ ತಂದುಕೊಟ್ಟು ವಿಕೆಟ್‌ ಒಪ್ಪಿಸಿದ್ದರು. ಇದಕ್ಕೂ ಮುನ್ನ ಪೃಥ್ವಿ ಶಾ ಅವರು 26 ಎಸೆತಗಳಲ್ಲಿ 49 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು.

ಅಜಿಂಕ್ಯ ರಹಾನೆ ವಿಕೆಟ್‌ ಒಪ್ಪಿಸಿದ ಬಳಿಕ ಡೆತ್‌ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ಶಿವಂ ದುಬೆ 22 ಎಸೆತಗಳಲ್ಲಿ 37 ರನ್‌ ಗಳಿಸಿದರೆ, ಸೂರ್ಯಾಂಶ್‌ ಶೆಡ್ಜ್‌ ಕೇವಲ 12 ಎಸೆತಗಳಲ್ಲಿ 36 ರನ್‌ಗಳನ್ನು ಸಿಡಿಸಿ ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದರು.

221 ರನ್‌ಗಳನ್ನು ಕಲೆ ಹಾಕಿದ್ದ ವಿದರ್ಭ

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ್ದ ವಿದರ್ಭ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 221 ರನ್‌ಗಳನ್ನು ಕಲೆ ಹಾಕಿತ್ತು. ವಿದರ್ಭ ಪರ ಅತ್ಯುತ್ತಮ ಬ್ಯಾಟ್‌ ಮಾಡಿದ್ದ ಅಥರ್ವ್‌ ಥೈಡ 41 ಎಸೆತಗಳಲ್ಲಿ 66 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದ ಕರುಣ್‌ ನಾಯರ್‌ 26 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದರೂ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾಗಿದ್ದರು.

ಆದರೆ, ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದ ವಾಂಖೆಡೆ ಕೇವಲ 33 ಎಸೆತಗಳಲ್ಲಿ 51 ರನ್‌ಗಳನ್ನು ಸಿಡಿಸಿದ್ದರು. ಇವರ ಜೊತೆಗೆ ಸ್ಪೋಟಕ ಬ್ಯಾಟ್‌ ಮಾಡಿದ್ದ ಶುಭಮ್‌ ದುಬೆ 19 ಎಸೆತಗಳಲ್ಲಿ 43 ರನ್‌ಗಳನ್ನು ಸಿಡಿಸಿದ್ದರು.

ಪಂದ್ಯ ಶ್ರೇಷ್ಠ ಪ್ರಶಸ್ತಿ: ಅಜಿಂಕ್ಯ ರಹಾನೆ

ಈ ಸುದ್ದಿಯನ್ನು ಓದಿ: SMAT 2025: ʻ17 ಎಸೆತಗಳಲ್ಲಿ 32 ರನ್‌ʼ-ಬ್ಯಾಟಿಂಗ್‌ನಲ್ಲೂ ಮಿಂಚಿದ ಮೊಹಮ್ಮದ್‌ ಶಮಿ!