ನವದೆಹಲಿ: ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಪ್ರಸ್ತುತ ನಡೆಯುತ್ತಿರುವ 2025ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ (SMAT 2025) ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಅನ್ನು ಮುಂದುವರಿಸಿದ್ದಾರೆ. ಕೇವಲ 28 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಗುಜರಾತ್ ತಂಡದ ಊರ್ವಿಲ್ ಪಟೇಲ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಗುರುವಾರ ರಾಜ್‌ಕೋಟ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೇಘಾಲಯ ಬೌಲರ್‌ಗಳನ್ನು ಪಂಜಾಬ್ ತಂಡದ ಓಪನರ್ ಅಭಿಷೇಕ್ ಶರ್ಮಾ ಬಲವಾಗಿ ದಂಡಿಸಿದರು. ಮೇಘಾಲಯ ನೀಡಿದ್ದ 143 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಂಜಾಬ್ ಪರ ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ಮೊದಲನೇ ಎಸೆತದಿಂದಲೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದರು.
ಊರ್ವಿಲ್ ಪಟೇಲ್ ದಾಖಲೆ ಸರಿಗಟ್ಟಿದ ಅಭಿಷೇಕ್ ಶರ್ಮಾ
ಇವರು ಎದುರಿಸಿದ ಕೇವಲ 29 ಎಸೆತಗಳಿಂದಲೇ ಅಭೀಷೇಕ್ ಶರ್ಮಾ 11 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 106 ರನ್‌ಗಳನ್ನು ಸಿಡಿಸಿದರು. ಅಲ್ಲದೆ ಇವರು 365.52 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು ಎಲ್ಲರ ಗಮನವನ್ನು ಸೆಳೆಯಿತು. ಅಲ್ಲದೆ ಅವರು ಕೇವಲ 28 ಎಸೆತಗಳಲ್ಲಿಯೇ ಶತಕವನ್ನು ಸಿಡಿಸಿದರು. ಆ ಮೂಲಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಇತಿಹಾಸದಲ್ಲಿಯೇ ಅತ್ಯಂತ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಜಂಟಿ ದಾಖಲೆಯನ್ನು ಊರ್ವಿಲ್ ಪಟೇಲ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಎಡಗೈ ಬ್ಯಾಟ್ಸ್‌ಮನ್ ತಮ್ಮ ಸ್ಪೋಟಕ ಶತಕದಲ್ಲಿ ಬೌಂಡರಿಗಳು ಹಾಗೂ ಸಿಕ್ಸರ್‌ಗಳ ಮೂಲಕ ಮೂರಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಿದ್ದು ವಿಶೇಷವಾಗಿದೆ. ಪ್ರಸಕ್ತ ವರ್ಷ ಅಭಿಷೇಕ್ ಶರ್ಮಾ ಅವರ ಪಾಲಿಗೆ ಅದ್ಭುತವಾಗಿದೆ.ಅವರ ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ಬಳಿಕ ಜಿಂಬಾಬ್ವೆ ವಿರುದ್ದ ಭಾರತ ತಂಡದ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಹಾಗೂ ಚೊಚ್ಚಲ ಶತಕವನ್ನು ಸಿಡಿಸಿದ್ದರು.
ಇಲ್ಲಿಯವರೆಗೆ ಭಾರತ ತಂಡದ ಪರ ಆಡಿದ 12 ಟಿ20ಐ ಪಂದ್ಯಗಳಲ್ಲಿ ಬೌಲಿಂಗ್ ಜೊತೆಗೆ ಅಭಿಷೇಕ್ ಶರ್ಮಾ ಅವರು 171.81ರ ಸ್ಟ್ರೈಕ್ ರೇಟ್‌ನಲ್ಲಿ 256 ರೆನ್‌ಗಳನ್ನು ದಾಖಲಿಸಿದ್ದಾರೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅವರು 63 ಪಂದ್ಯಗಳಿಂದ 155.13ರ ಸ್ಟ್ರೈಕ್ ರೇಟ್‌ನಲ್ಲಿ 1376 ರನ್‌ಗಳನ್ನು ಸಿಡಿಸಿದ್ದಾರೆ.
ತ್ರಿಪುರ ವಿರುದ್ದ ಸ್ಪೋಟಕ ಶತಕ ಸಿಡಿಸಿದ್ದ ಊರ್ವಿಲ್ ಪಟೇಲ್
ಗುಜರಾತ್ ತಂಡದ ಊರ್ವಿಲ್ ಪಟೇಲ್ ಅವರ ನವೆಂಬರ್ 27 ರಂದು ತ್ರಿಪುರ ವಿರುದ್ದ ಕೇವಲ 27 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು. ಆ ಮೂಲಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಇತಿಹಾಸದಲ್ಲಿ ಅತಿ ವೇಗದ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಆ ಮೂಲಕ 2018ರಲ್ಲಿ 32 ಎಸೆತಗಳಲ್ಲಿ ಶತಕ ಸಿಡಿಸಿದ್ದ ರಿಷಭ್ ಪಂತ್ ಅವರ ದಾಖಲೆಯನ್ನು ಗುಜರಾತ್ ಬ್ಯಾಟ್ಸ್‌ಮನ್ ಮುರಿದಿದ್ದರು. ಈ ಪಂದ್ಯದಲ್ಲಿ ಒಟ್ಟು 35 ಎಸೆತಗಳನ್ನು ಆಡಿದ್ದ ಊರ್ವಿಲ್ ಪಟೇಲ್ 12 ಸಿಕ್ಸರ್ 7 ಬೌಂಡರಿಗಳೊಂದಿಗೆ 113 ರನ್‌ಗಳನ್ನು ಸಿಡಿಸಿದ್ದರು.
ಈ ಸುದ್ದಿಯನ್ನು ಓದಿ: Urvil Patel: 36 ಎಸೆತಗಳಲ್ಲಿ ಮತ್ತೊಂದು ಸ್ಪೋಟಕ ಶತಕ ಸಿಡಿಸಿದ ಊರ್ವಿಲ್ ಪಟೇಲ್!