ನವದೆಹಲಿ: ಕುಸಾಲ್ ಪೆರೆರಾ ಅವರ ಟಿ20ಐ ಶತಕದ ಬಲದಿಂದ ಶ್ರೀಲಂಕಾ ತಂಡ ಮೂರನೇ ಹಾಗೂ ಟಿ20ಐ (SL vs NZ) ಸರಣಿಯ ಕೊನೆಯ ಪಂದ್ಯದಲ್ಲಿ 7 ರನ್‌ಗಳ ಗೆಲುವು ಪಡೆದಿದೆ. ಆ ಮೂಲಕ 2006ರ ಬಳಿಕ ಅಂದರೆ 17 ವರ್ಷಗಳ ನಂತರ ಇದೇ ಮೊದಲ ಬಾರಿ ನ್ಯೂಜಿಲೆಂಡ್‌ನಲ್ಲಿ ಶ್ರೀಲಂಕಾ ತಂಡ ಟಿ20ಐ ಪಂದ್ಯವನ್ನು ಗೆದ್ದಿದೆ. ಈ ಪಂದ್ಯದ ಸೋಲಿನ ಹೊರತಾಗಿಯೂ ಕಿವೀಸ್ ಟಿ20ಐ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಶ್ರೀಲಂಕಾ ತಂಡ ಪವರ್‌ಪ್ಲೇನಲ್ಲಿ ತನ್ನ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ಕುಸಾಲ್ ಪೆರೆರಾ ಅವರು ಸ್ಪೋಟಕ ಬ್ಯಾಟ್ ಮಾಡಿ ಭರ್ಜರಿ ಶತಕವನ್ನು ಸಿಡಿಸಿದ್ದರು.ಇವರು ಎದುರಿಸಿದ ಕೇವಲ 44 ಎಸೆತಗಳಲ್ಲಿ ಸೆಂಚುರಿ ಬಾರಿಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಪೋಟಕ ಬ್ಯಾಟ್ ಮಾಡಿದ ಶ್ರೀಲಂಕಾ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಪೆರೆರಾ ಅವರ ಸ್ಪೋಟಕ ಇನಿಂಗ್ಸ್‌ನಲ್ಲಿ 4 ಸಿಕ್ಸರ್ ಹಾಗೂ 13 ಬೌಂಡರಿಗಳಿವೆ.
ಇವರಿಗೆ ಸಾಥ್ ನೀಡಿದ್ದ ಚರಿತಾ ಅಸಲಂಕ 46 ರನ್‌ಗಳನ್ನು ಕಲೆ ಹಾಕಿದರು. ಅಂತಿಮವಾಗಿ ಶ್ರೀಲಂಕಾ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 218 ರನ್‌ಗಳನ್ನು ಕಲೆ ಹಾಕಿತ್ತು. ಇದು ಶ್ರೀಲಂಕಾ ತಂಡದ ಎರಡನೇ ಗರಿಷ್ಠ ಮೊತ್ತವಾಗಿದೆ. ಸ್ಪೋಟಕ ಶತಕ ಸಿಡಿಸಿ ಬ್ಯಾಟ್ ಮಾಡುತ್ತಿದ್ದ ಪೆರೆರಾ ಅವರನ್ನು 19ನೇ ಓವರ್‌ನಲ್ಲಿ ಡ್ಯಾರಿಲ್ ಮಿಚೆಲ್ ಔಟ್ ಮಾಡಿದ್ದರು.
Sri Lanka hold on in a high-scoring Nelson encounter 🙌#NZvSL 📝 https://t.co/s2MXFyZ9cl pic.twitter.com/kr1uKMHpjJ
— ICC (@ICC) January 2, 2025
ಬಳಿಕ ಶ್ರೀಲಂಕಾ ನೀಡಿದ್ದ 219 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ನ್ಯೂಜಿಲೆಂಡ್ ತಂಡ ಸ್ಪೋಟಕ ಆರಂಭವನ್ನು ಪಡೆದಿತ್ತು. ಓಪನರ್ ಟಾಮ್ ರಾಬಿನ್ಸನ್ (37 ರನ್) ಹಾಗೂ ರಚಿನ್ ರವೀಂದ್ರ (69 ರನ್) ಪವರ್‌ಪ್ಲೇನಲ್ಲಿ 81 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಈ ಇಬ್ಬರೂ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಶ್ರೀಲಂಕಾ ಬೌಲರ್‌ಗಳು ಒತ್ತಡಕ್ಕೆ ಒಳಗಾಗಿದ್ದರು. ಈ ಹಂತದಲ್ಲಿ ಕಿವೀಸ್ ಸುಲಭವಾಗಿ ಈ ಗುರಿಯನ್ನು ತಲುಪಬಹುದೆಂದು ನಿರೀಕ್ಷಿಸಲಾಗಿತ್ತು.
ಆದರೆ, ಶ್ರೀಲಂಕಾ ತಂಡದ ಬೌಲರ್‌ಗಳು ನಿರ್ಣಾಯಕ ಸಮಯದಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು.ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಚರಿತ ಅಸಲಂಕಾ ಅವರು 50 ರನ್ ನೀಡಿದರೂ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಕಿವೀಸ್ ತಂಡವನ್ನು ಕಡಿವಾಣ ಹಾಕುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಒಂದು ಹಂತದಲ್ಲಿ ಡ್ಯಾರಿಲ್ ಮಿಚೆಲ್ 35 ರನ್ ಗಳಿಸಿ ನ್ಯೂಜಿಲೆಂಡ್‌ಗೆ ಗೆಲುವು ಭರವಸೆಯನ್ನು ಮೂಡಿಸಿದ್ದರು. ಆದರೆ, ಅಂತಿಮವಾಗಿ ಶ್ರೀಲಂಕಾ ತಂಡ 7 ರನ್‌ಗಳಿಂದ ಗೆಲುವು ಪಡೆಯುವಲ್ಲಿ ಸಫಲವಾಯಿತು.
ಕುಸಾಲ್ ಪೆರೆರಾ ಹೇಳಿಕೆ
“100 ರನ್‌ಗಳನ್ನು ಹೊಡೆಯುವುದು ಯಾವಾಗಲೂ ಸಂತೋಷವಾಗಿರುತ್ತದೆ. ಇಂದು (ಗುರುವಾರ) ಮೊದಲನೇ ಎಸೆತವನ್ನು ಎದುರಿಸುವ ವೇಳೆ ನನಗೆ ಎಚ್ಚರಿಕೆಯ ಕರೆಯಾಗಿತ್ತು. ಇಲ್ಲಿನ ಕಂಡೀಷನ್ಸ್‌ನಲ್ಲಿ ಚೆಂಡು ಹೆಚ್ಚುವರಿ ಬೌನ್ಸ್ ಆಗುತ್ತಿತ್ತು ಹಾಗೂ ಇದಕ್ಕೆ ಹೊಂದಿಕೊಳ್ಳುವುದು ಮುಖ್ಯವಾಗಿತ್ತು. ಈ ವೇಳೆ ನನ್ನ ಸ್ವಾಭವಿಕ ಆಟವನ್ನು ಆಡಲು ನಾನು ಪ್ರೇರೇಪಿಸುತ್ತಿದ್ದೆ. ಇಲ್ಲಿನ ಕಂಡೀಷನ್ಸ್ ಸೀಮರ್‌ಗಳಿಗೆ ನೆರವು ನೀಡುತ್ತದೆ. ಕಳೆದ ಎರಡು ಪಂದ್ಯಗಳಲ್ಲಿ ನನಗೆ ಒಳ್ಳೆಯ ಆರಂಭ ಸಿಕ್ಕಿರಲಿಲ್ಲ. ಇದೀಗ ಸಿಕ್ಕ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಂಡಿದ್ದೇನೆ,” ಎಂದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಕುಸಾಲ್ ಪೆರೆರಾ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: ಟೆಸ್ಟ್ ಕ್ರಿಕೆಟ್‌ನಲ್ಲಿ 9 ಸಾವಿರ ರನ್ ಪೂರೈಸಿದ ಸ್ಟೀವ್ ಸ್ಮಿತ್