Saturday, 10th May 2025

ರಾಹುಲ್‌, ಜಡೇಜಾ ಔಟ್‌! Champions Trophyಗೆ ಭಾರತ ತಂಡವನ್ನು ಆರಿಸಿದ ಹರ್ಭಜನ್‌ ಸಿಂಗ್‌!

Sanju Samson, Yuzvendra Chahal In: Harbhajan Singh Names India's 2025 Champions Trophy Squad

ನವದೆಹಲಿ: ಮುಂಬರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy) ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಸ್ಪಿನ್‌ ದಿಗ್ಗಜ ಹರ್ಭಜನ್‌ ಸಿಂಗ್‌ ಆಯ್ಕೆ ಮಾಡಿದ್ದಾರೆ. ಆದರೆ, ಕೆಎಲ್‌ ರಾಹುಲ್‌ ಹಾಗೂ ರವೀಂದ್ರ ಜಡೇಜಾ ಅವರಂಥ ಸ್ಟಾರ್‌ ಆಟಗಾರರನ್ನು ಅವರು ಕೈ ಬಿಟ್ಟಿದ್ದಾರೆ.
ಪಾಕಿಸ್ತಾನದ ಆತಿಥ್ಯದಲ್ಲಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಿಂದ ಮಾರ್ಚ್‌ 9ರವರೆಗೆ ನಡೆಯಲಿದೆ. ಈಗಾಗಲೇ ಈ ಟೂರ್ನಿಯಲ್ಲಿ ಭಾಗವಹಿಸುವ 6 ತಂಡಗಳನ್ನು ಪ್ರಕಟಿಸಲಾಗಿದೆ. ಆದರೆ, ಭಾರತ ತಂಡವನ್ನು ಬಿಸಿಸಿಐ ಇನ್ನೂ ಅಂತಿಮಗೊಳಿಸಿಲ್ಲ.

ಭಾರತ ತಂಡದಲ್ಲಿ ವಿಕೆಟ್‌ ಕೀಪರ್‌ಗಳ ಸ್ಥಾನಕ್ಕೆ ಸಂಜು ಸ್ಯಾಮ್ಸನ್‌ ಮತ್ತು ರಿಷಭ್‌ ಪಂತ್‌ ಅವರನ್ನು ಆರಿಸುವ ಮೂಲಕ ಹರ್ಭಜನ್‌ ಸಿಂಗ್‌ ಕೆಎಲ್‌ ರಾಹುಲ್‌ ಅವರನ್ನು ಕೈ ಬಿಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಸರಣಿ ಆಡಿ ಧಣಿದಿರುವ ರಿಷಭ್‌ ಪಂತ್‌ ಅವರ ಬದಲು ಸಂಜು ಸ್ಯಾಮ್ಸನ್‌ ಅವರನ್ನು ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿ ಅವಕಾಶ ನೀಡಬೇಕೆಂದು ಭಜ್ಜಿ ಆಗ್ರಹಿಸಿದ್ದಾರೆ.

“ಸಂಜು ಸ್ಯಾಮ್ಸನ್‌ ಅಥವಾ ರಿಷಭ್‌ ಪಂತ್‌ ಅವರಲ್ಲಿ ಒಬ್ಬರನ್ನು ವಿಕೆಟ್‌ ಕೀಪರ್‌ ಆಗಿ ಆರಿಸಬೇಕು. ದಕ್ಷಿಣ ಆಫ್ರಿಕಾದಲ್ಲಿ ಆಡಿದ್ದ ಕಾರಣ ಸಂಜು ಸ್ಯಾಮ್ಸನ್‌ ಅವರನ್ನು ಪ್ಲೇಯಿಂಗ್‌ XIಗೆ ಪರಿಗಣಿಸಬೇಕು. ರಿಷಭ್‌ ಪಂತ್‌ ಅವರು ಆಸ್ಟ್ರೇಲಿಯಾ ಪ್ರವಾಸವನ್ನು ಮುಗಿಸಿದ್ದಾರೆ ಹಾಗೂ ಇದು ದೀರ್ಘಾವಧಿ ಪ್ರವಾಸವಾಗಿದ್ದು, ಅವರಿಗೆ ವಿಶ್ರಾಂತಿಯ ಅಗತ್ಯವಿದೆ,” ಎಂದು ಹೇಳಿದ್ದಾರೆ.

ರವೀಂದ್ರ ಜಡೇಜಾ ಬದಲು ಅಕ್ಷರ್‌ ಪಟೇಲ್‌

ಇನ್ನು ತಮ್ಮ ನೆಚ್ಚಿನ ಭಾರತ ತಂಡದಲ್ಲಿ ರವೀಂದ್ರ ಜಡೇಜಾ ಬದಲು ಅಕ್ಷರ್‌ ಪಟೇಲ್‌ಗೆ ಹರ್ಭಜನ್‌ ಸಿಂಗ್‌ ಸ್ಥಾನ ನೀಡಿದ್ದಾರೆ. ಅಲ್ಲದೆ ಇಬ್ಬರು ಮುಷ್ಠಿ ಸ್ಪಿನ್ನರ್‌ಗಳನ್ನು ಭಜ್ಜಿ ಆರಿಸಿದ್ದಾರೆ. ಕುಲ್ದೀಪ್‌ ಯಾದವ್‌ ಅವರನ್ನು ಮೊದಲ ಆಯ್ಕೆಯ ಸ್ಪಿನ್ನರ್‌ ಆಗಿ ಆರಿಸಿದರೆ, ಎರಡನೇ ಆಯ್ಕೆಯಾಗಿ ಯುಜ್ವೇಂದ್ರ ಚಹಲ್‌ಗೆ ಸ್ಥಾನ ನೀಡಿದ್ದಾರೆ. 2023ರಲ್ಲಿ ಚಹಲ್‌ ಕೊನೆಯ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ಹಾರ್ದಿಕ್‌-ನಿತೀಶ್‌ಗೆ ಸ್ಥಾನ ನೀಡಿದ ಭಜ್ಜಿ

ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ಗಳಾಗಿ ಹಾರ್ದಿಕ್‌ ಪಾಂಡ್ಯ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿಗೆ ಹರ್ಭಜನ್‌ ಸಿಂಗ್‌ ಸ್ಥಾನವನ್ನು ನೀಡಿದ್ದಾರೆ. ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ಶತಕಗಳನ್ನು ಸಿಡಿಸಿದ್ದ ತಿಲಕ್‌ ವರ್ಮಾ ಅವರಿಗೂ ಸ್ಪಿನ್‌ ದಿಗ್ಗಜ ಸ್ಥಾನವನ್ನು ಕಲ್ಪಿಸಿದ್ದಾರೆ. ಇನ್ನು ವೇಗದ ಬೌಲಿಂಗ್‌ ವಿಭಾಗಕ್ಕೆ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ ಹಾಗೂ ಮೊಹಮ್ಮದ್‌ ಸಿರಾಜ್‌ಗೆ ಸ್ಥಾನ ನೀಡಿದ್ದಾರೆ. ಬ್ಯಾಟಿಂಗ್‌ ವಿಭಾಗಕ್ಕೆ ರೋಹಿತ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ ಹಾಗೂ ಶ್ರೇಯಸ್‌ ಅಯ್ಯರ್‌ ಸ್ಥಾನ ನೀಡಿದ್ದಾರೆ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಹರ್ಭಜನ್‌ ಸಿಂಗ್‌ ಆಯ್ಕೆಯ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಷಭ್ ಪಂತ್/ ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಹಲ್.

ಈ ಸುದ್ದಿಯನ್ನು ಓದಿ: Harbhajan Singh: ʻರನ್‌ ಬಾರಿಸಿ ಟೀಕೆಗಳಿಗೆ ತಿರುಗೇಟು ನೀಡಿʼ-ರೋಹಿತ್, ಕೊಹ್ಲಿಗೆ ಹರ್ಭಜನ್‌ ಸಿಂಗ್‌ ಸಲಹೆ!

Leave a Reply

Your email address will not be published. Required fields are marked *