Tuesday, 13th May 2025

ಮಿ.360 ಬೊಂಬಾಟ್ ಆಟ: ವಿರಾಟ್ ಪಡೆಗೆ ಗೆಲುವಿನ ಕಿರೀಟ

ದುಬೈ: ಸ್ಟಾರ್ ಬ್ಯಾಟ್ಸ್‌ಮನ್ ಎಬಿಡಿವಿಲಿಯರ್ಸ್ ಮತ್ತು ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನೆರವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಲ್ಲಿ ನಡೆದ ಐಪಿಎಲ್‌ನ 33ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಳು ವಿಕೆಟ್ ‌ಗಳ ಭರ್ಜರಿ ಜಯ ಗಳಿಸಿದೆ.

ಗೆಲುವಿಗೆ 178 ರನ್ ಗಳಿಸಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ನೂ ಎರಡು ಎಸೆತಗಳು ಬಾಕಿ ಉಳಿದಿರು ವಾಗಲೇ 3 ವಿಕೆಟ್ ನಷ್ಟದಲ್ಲಿ 179 ರನ್ ಗಳಿಸಿತು.

ಎಬಿ ಡಿವಿಲಿಯರ್ಸ್ 19.4ನೇ ಓವರ್‌ನಲ್ಲಿ ಜೋಫ್ರಾ ಆರ್ಚರ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅರ್ಧ ಶತಕ ಗಳಿಸಿದರು ಮತ್ತು ತಂಡವನ್ನು ಗೆಲುವಿನ ದಡ ಸೇರಿಸಿದರು. ಎಬಿ ಡಿವಿಲಿಯರ್ಸ್ ಔಟಾಗದೆ 55 ರನ್(22ಎ, 1ಬೌ,6ಸಿ) ಗಳಿಸಿದರು. ನಾಯಕ ವಿರಾಟ್ ಕೊಹ್ಲಿ 43 ರನ್(32ಎ, 1ಬೌ, 2ಸಿ) ಗಳಿಸಿದರು. ದೇವದತ್ತ ಪಡಿಕ್ಕಲ್ 35 ರನ್, ಆಯರೊನ್ ಫಿಂಚ್ 14 ರನ್, ಗುರು ಕೀರತ್ ಸಿಂಗ್ ಔಟಾಗದೆ 19 ರನ್ ಸೇರಿಸಿದರು.

ಆರ್‌ಸಿಬಿ ಪರ ಬ್ಯಾಟಿಂಗ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ಡಿವಿಲಿಯರ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಆರ್‌ಸಿಬಿ ಇದರೊಂದಿಗೆ ಆಡಿರುವ ಒಟ್ಟು 8 ಪಂದ್ಯಗಳ ಪೈಕಿ 6ರಲ್ಲಿ ಜಯ ಗಳಿಸಿ ಮೂರನೇ ಸ್ಥಾನ ಗಳಿಸಿದೆ.

ರಾಜಸ್ಥಾನ್ ರಾಯಲ್ಸ್ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿತ್ತು. ಎಚ್ಚರಿಕೆಯಿಂದಲೇ ಇನಿಂಗ್ಸ್ ಆರಂಭಿಸಿದ ರಾಬಿನ್ ಉತ್ತಪ್ಪ (41) ಮತ್ತು ಬೆನ್ ಸ್ಟೋಕ್ಸ್ (15) ಮೊದಲ ವಿಕೆಟ್‌ಗೆ 50 ರನ್ ಗಳಿಸಿದರು. ಬೆನ್ ಸ್ಟೋಕ್ಸ್ ಅವರಿಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಇವರ ಜೊತೆಯಾಟವನ್ನು ಕ್ರಿಸ್ ಮೊರೀಸ್ ಮುರಿದರು.

8ನೇ ಓವರ್‌ನಲ್ಲಿ ಯಜುವೇಂದ್ರ ಚಹಲ್ ಅವರು ಬೆನ್ನು ಬೆನ್ನಿಗೆ ಎರಡು ವಿಕೆಟ್ ಪಡೆಯುವ ಮೂಲಕ ರಾಜಸ್ಥಾನ್ ರಾಯಲ್ಸ್‌ಗೆ ಆಘಾತ ನೀಡಿದರು. 7.4ನೇ ಓವರ್‌ನಲ್ಲಿ ರಾಬಿನ್ ಉತ್ತಪ್ಪ ಅವರು ಚಹಲ್ ಎಸೆತದಲ್ಲಿ ಫಿಂಚ್‌ಗೆ ಕ್ಯಾಚ್ ನೀಡಿದರು. 7.5ನೇ ಎಸೆತದಲ್ಲಿ ಅಪಾಯಕಾರಿ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್(9) ಅವರಿಗೆ ಚಹಲ್ ಪೆವಿಲಿಯನ್ ದಾರಿ ತೋರಿಸಿದರು.

ನಾಯಕ ಸ್ಟೀವ್ ಸ್ಮಿತ್ ಫಾರ್ಮ್ ಕಂಡುಕೊಂಡು ಸೊಗಸಾದ ಅರ್ಧಶತಕ ದಾಖಲಿಸಿದರು. ಅವರು 57 ರನ್(36ಎ, 6ಬೌ,1ಸಿ) ಗಳಿಸಿ ತಂಡದ ಸ್ಕೋರ್‌ನ್ನು 170ರ ಗಡಿ ದಾಟಿಸಲು ನೆರವಾದರು. ಜೋಸ್ ಬಟ್ಲರ್ 24 ರನ್ ಮತ್ತು ಜೋಫ್ರಾ ಆರ್ಚರ್ 2 ರನ್ ಗಳಿಸಿ ಔಟಾದರು. ರಾಹುಲ್ ತಿವಾಟಿಯಾ ಔಟಾಗದೆ 19 ರನ್ ಗಳಿಸಿದರು.

ಆರ್‌ಸಿಬಿ ತಂಡದ ಕ್ರಿಸ್ ಮೋರಿಸ್ 26ಕ್ಕೆ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು, ಯುಜುವೇಂದ್ರ ಚಹಲ್ 34ಕ್ಕೆ 2 ವಿಕೆಟ್ ಪಡೆದರು.

Leave a Reply

Your email address will not be published. Required fields are marked *