Sunday, 11th May 2025

ಚೆನ್ನೈಗೆ ಸೋಲುಣಿಸಿದ ಕಿಂಗ್ಸ್ ಪಂಜಾಬ್

ದುಬೈ: ನಾಯಕನ ಆಟವಾಡಿದ ಕೆ.ಎಲ್. ರಾಹುಲ್ (98*) ಬಿರುಸಿನ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಗುರುವಾರ ದುಬೈಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಫಾಫ್ ಡು ಪ್ಲೆಸಿ ಅರ್ಧಶತಕದ (76) ಹೊರತಾಗಿಯೂ ಆರು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಗುರಿ ಬೆನ್ನತ್ತಿದ ಪಂಜಾಬ್ ಕೇವಲ 13 ಓವರ್‌ಗಳಲ್ಲೇ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 42 ಎಸೆತಗಳನ್ನು ಎದುರಿಸಿದ ರಾಹುಲ್ 98 ರನ್ ಗಳಿಸಿ ಔಟಾಗದೆ ಉಳಿದರು.

ಆರು ಗೆಲುವಿನೊಂದಿಗೆ ಒಟ್ಟು 12 ಅಂಕಗಳನ್ನು ಸಂಪಾದಿಸಿರುವ ರಾಹುಲ್ ಪಡೆ ಐದನೇ ಸ್ಥಾನಕ್ಕೇರಿದೆ. ಅಷ್ಟೇ ಪಂದ್ಯಗಳಲ್ಲಿ 18 ಅಂಕ ಸಂಪಾದಿಸಿರುವ ಸಿಎಸ್‌ಕೆ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಪಂಜಾಬ್ ತಂಡಕ್ಕೆ ಆರಂಭಿಕರಾದ ರಾಹುಲ್ ಹಾಗೂ ಮಯಂಕ್ ಅಗರವಾಲ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 4.3 ಓವರ್‌ಗಳಲ್ಲಿ 46 ರನ್‌ಗಳ ಜೊತೆಯಾಟ ನೀಡಿದರು. ಶಾರ್ದೂಲ್ ಠಾಕೂರ್, ಮಯಂಕ್ ಅಗರವಾಲ್ (12) ಜೊತೆಗೆ ಸರ್ಫರಾಜ್ ಖಾನ್ (0) ಅವರನ್ನು ಹೊರದಬ್ಬಿದರು.

ರಾಹುಲ್ ಕೇವಲ 25 ಎಸೆತಗಳಲ್ಲಿ ಫಿಫ್ಟಿ ಬಾರಿಸಿ ಗಮನ ಸೆಳೆದರು. ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ನಿಧಾನಗತಿಯ ಬ್ಯಾಟಿಂಗ್‌ಗಾಗಿ ಟೀಕೆಗೊಳಗಾಗಿದ್ದ ರಾಹುಲ್, ತಮ್ಮ ಬ್ಯಾಟ್ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ.

ಚೆನ್ನೈ ಬೌಲರ್‌ಗಳನ್ನು ಸಮರ್ಥವಾಗಿ ನಿಭಾಯಿಸಿದ ರಾಹುಲ್ 42 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಎಂಟು ಅಮೋಘ ಸಿಕ್ಸರ್ ನೆರವಿನಿಂದ 98 ರನ್ ಗಳಿಸಿ ಅಜೇಯರಾಗುಳಿದರು. ಋತುರಾಜ್ ಗಾಯಕವಾಡ್ (12), ಮೊಯಿನ್ ಅಲಿ (0), ರಾಬಿನ್ ಉತ್ತಪ್ಪ (4), ಅಂಬಟಿ ರಾಯುಡು (4) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ (12) ನಿರಾಸೆ ಮೂಡಿಸಿದರು.

 

Leave a Reply

Your email address will not be published. Required fields are marked *