ನವದೆಹಲಿ: (T20 World cup 2026) ಮುಂಬರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಹೈಬ್ರಿಡ್ ಮಾಡೆಲ್ನಲ್ಲಿ ಆಯೋಜಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಡಳಿ (ಬಿಸಿಸಿಐ) ಜತೆ ಒಪ್ಪಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಮಾಜಿ ಆಟಗಾರ ಬಸಿತ್ ಅಲಿ ಟೀಕಿಸಿದ್ದಾರೆ. ಐಸಿಸಿ ಹಾಗೂ ಬಿಸಿಸಿಐ ಎರಡೂ ಬೋರ್ಡ್ಗಳು ಪಿಸಿಬಿಗೆ ಲಾಲಿಪಪ್ ನೀಡಿವೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಲಿದೆ. ಮೊದಲಿಗೆ ಪಿಸಿಬಿ, ಭಾರತ ತಂಡ ಟೂರ್ನಿಯನ್ನು ಆಡಲು ಪಾಕಿಸ್ತಾನಕ್ಕೆ ಬರಬೇಕೆಂದು ಆಗ್ರಹಿಸಿತ್ತು. ಆದರೆ, ಐಸಿಸಿ ಹಲವು ಬಾರಿ ಮೀಟಿಂಗ್ ಮಾಡಿ ಪಿಸಿಬಿಯನ್ನು ಹೈಬ್ರಿಡ್ ಮಾಡೆಲ್ಗೆ ಒಪ್ಪಿಸಿದೆ ಹಾಗೂ ಪಿಸಿಬಿಗೆ 2027ರಲ್ಲಿ ಐಸಿಸಿ ಮಹಿಳಾ ಟೂರ್ನಿಗಳ ಆತಿಥ್ಯದ ಹಕ್ಕುಗಳನ್ನು ನೀಡಿದೆ.
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿರುವ ಬಸಿತ್ ಅಲಿ, 2027 ಅಥವಾ 2028ರ ಮಹಿಳಾ ವಿಶ್ವಕಪ್ ಟೂರ್ನಿಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸುವುದದಿಂದ ಪಿಸಿಬಿಗೆ ಯಾವುದೇ ಲಾಭವಿಲ್ಲ. 2026ರ ಐಸಿಸಿ ಟಿ20 ವಿಶ್ವಕಪ್ ಆಡಲು ಪಾಕಿಸ್ತಾನ ತಂಡ, ಭಾರತಕ್ಕೆ ಆಗಮಿಸಲಿದೆ. ಆ ಮೂಲಕ ಮುಂದಿನ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕರೆಸಿಕೊಳ್ಳಲಿದೆ ಎಂದು ದೂರಿದ್ದಾರೆ.
ಪಾಕಿಸ್ತಾನಕ್ಕೆ ಯಾವುದೇ ಲಾಭವಿಲ್ಲ
“2027 ಅಥವಾ 2028ರ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಗಳನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ. ಪ್ರತಿಯೊಬ್ಬರೂ ಇದನ್ನು ಅದ್ಭುತ ಎಂದು ಹೊಗಳುತ್ತಿದ್ದಾರೆ ಆದರೆ, ಇದು ಪಾಕಿಸ್ತಾನಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಇದರ ಅರ್ಥವೇನು? 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಆಡಲು ಭಾರತಕ್ಕೆ ಪಾಕಿಸ್ತಾನ ತಂಡ ಪ್ರಯಾಣ ಬೆಳೆಸಲಿದೆ ಹಾಗೂ ಮಹಿಳಾ ಟಿ20 ವಿಶ್ವಕಪ್ ಆಡಲು ಭಾರತ ತಂಡ ಕೂಡ ಪಾಕಿಸ್ತಾನಕ್ಕೆ ಬರಲಿದೆ. ಇದರಿಂದ ಬ್ರಾಡ್ಕಾಸ್ಟರ್ಗಳಿಗೆ ಯಾವುದೇ ನಷ್ಟವಾಗುವುದಿಲ್ಲ,” ಎಂದು ಬಸಿತ್ ಅಲಿ ತಿಳಿಸಿದ್ದಾರೆ.
ಪಿಸಿಬಿಗೆ ಲಾಲಿಪಪ್ ನೀಡಿದ ಐಸಿಸಿ
ಇದೇ ವಿಡಿಯೊದಲ್ಲಿ ಮಾತು ಮುಂದುವರಿಸಿದ ಬಸಿತ್ ಅಲಿ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹೈಬ್ರಿಡ್ ಮಾಡೆಲ್ ಅನ್ನು ಒಪ್ಪಿಕೊಂಡರೆ, ನಿಮಗೆ ಭವಿಷ್ಯದಲ್ಲಿ ಐಸಿಸಿ ಟೂರ್ನಿಗಳ ಆತಿಥ್ಯವನ್ನು ನೀಡಲಾಗುವುದು ಎಂದು ಐಸಿಸಿ, ಪಿಸಿಬಿಗೆ ಲಾಲಿಪಪ್ ನೀಡಿದೆ ಎಂದು ವ್ಯಂಗ್ಯವಾಡಿದ್ದಾರೆ.
“ಲಾಲಿಪಪ್ ಎಂದರೇನು ಗೊತ್ತಾ? ಪಿಸಿಬಿಗೆ ಐಸಿಸಿ ಲಾಲಿಪಪ್ ಅನ್ನು ನೀಡಿದೆ. ನೀವು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹೈಬ್ರಿಡ್ ಮಾಡೆಲ್ ಒಪ್ಪಿಕೊಂಡರೆ, ನೀವು ಬರವಣಿಗೆಯಲ್ಲಿ ಏನೂ ಕೇಳಬೇಡಿ ಹಾಗೂ ನಾವು ನಿಮಗೆ ಐಸಿಸಿ ಟೂರ್ನಿಯ ಆತಿಥ್ಯವನ್ನು ನೀಡುತ್ತೇವೆ. ಇದು ಪಾಕಿಸ್ತಾನಕ್ಕೆ ಯವುದೇ ಲಾಭವಾಗುವುದಿಲ್ಲ. ಇದರ ಬದಲು ಅವರು ಮುಂದಿನ ಏಷ್ಯಾ ಕಪ್ ಟೂರ್ನಿಗೆ ಬಿಡ್ ಮಾಡಬಹುದಿತ್ತು. ಮಹಿಳಾ ವಿಶ್ವಕಪ್ ಅಥವಾ ಅಂಡರ್ 19 ವಿಶ್ವಕಪ್ ಆತಿಥ್ಯ ವಹಿಸಿಕೊಂಡರೆ ಪಾಕಿಸ್ತಾನಕ್ಕೆ ಯಾವುದೇ ಲಾಭವಿಲ್ಲ. ಪಿಸಿಬಿ ಲಾಲಿಪಪ್ ಅನ್ನು ಸ್ವೀಕರಿಸಿದರೆ, ಅವರು ಸೋತವರು ಎಂದರ್ಥ,” ಎಂದು ಬಸಿತ್ ಅಲಿ ದೂರಿದ್ದಾರೆ.
ಈ ಸುದ್ದಿಯನ್ನು ಓದಿ: ICC Champions Trophy: ಹೈಬ್ರಿಡ್ ಮಾಡೆಲ್ಗೆ ಐಸಿಸಿ ಗ್ರೀನ್ ಸಿಗ್ನಲ್, 2026ರಲ್ಲಿ ಭಾರತಕ್ಕೆ ಪಾಕ್ ಬರಲ್ಲ!