Friday, 16th May 2025

PAK vs SA: ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಸೈಮ್‌ ಆಯುಬ್‌!

PAK vs SA: Saim Ayub Becomes First Player to score multiple tons against South Africa in ODI cricket

ಜೋಹನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಮ್ಮ ಅದ್ಭುತ ಲಯವನ್ನು ಮುಂದುವರಿಸಿರುವ ಪಾಕಿಸ್ತಾನ ತಂಡದ ಯುವ ಬ್ಯಾಟ್ಸ್‌ಮನ್‌ ಸೈಮ್‌ ಆಯುಬ್‌ ಅವರು ಎರಡನೇ ಶತಕ ಸಿಡಿಸಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಜೋಹನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ (PAK vs SA) ಅತ್ಯುತ್ತಮ ಬ್ಯಾಟ್‌ ಮಾಡಿದ್ದ ಸೈಮ್‌ ಆಯುಬ್‌ ತಮ್ಮ ಏಕದಿನ ವೃತ್ತಿ ಜೀವನದಲ್ಲಿ ಮೂರನೇ ಶತಕವನ್ನು ಸಿಡಿಸಿದ್ದರು.

ಈ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಮುಂದುವರಿಸಿದ ಸೈಮ್‌ ಆಯುಬ್‌, ಹರಿಣ ಪಡೆಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಎದುರಿಸಿದ 94 ಎಸೆತಗಳಲ್ಲಿ ಅವರು ಎರಡು ಸಿಕ್ಸರ್‌ ಹಾಗೂ 13 ಬೌಂಡರಿಗಳೊಂದಿಗೆ 101 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಪ್ರಸಕ್ತ ಸರಣಿಯಲ್ಲಿ ಎರಡನೇ ಶತಕವನ್ನು ಪೂರ್ಣಗೊಳಿಸಿದರು. ಇದಕ್ಕೂ ಮುನ್ನ ಅವರು ಮೊದಲನೇ ಏಕದಿನ ಪಂದ್ಯದಲ್ಲಿಯೂ ಶತಕವನ್ನು ಸಿಡಿಸಿದ್ದರು.

ಆರಂಭಿಕ ಏಕದಿನ ಪಂದ್ಯದಲ್ಲಿ 119 ಎಸೆತಗಳನ್ನು ಎದುರಿಸಿದ್ದ ಸೈಮ್‌ ಆಯುಬ್‌ ಅವರು 109 ರನ್‌ಗಳನ್ನು ಕಲೆ ಹಾಕಿದ್ದರು. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಮೂರು ವಿಕೆಟ್‌ಗಳ ಗೆಲುವನ್ನು ಪಡೆದಿತ್ತು. ಇದಕ್ಕೂ ಮುನ್ನ ಜಿಂಬಾಬ್ವೆ ಎದುರು ಹರಾರೆಯಲ್ಲಿ ಆಡಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಅವರು ಶತಕವನ್ನು ಸಿಡಿಸಿದ್ದರು.

ವಿಶೇಷ ದಾಖಲೆ ಬರೆದ ಸೈಮ್‌ ಆಯುಬ್‌

ದಕ್ಷಿಣ ಆಫ್ರಿಕಾ ವಿರುದ್ದ ಏಕದಿನ ಕ್ರಿಕೆಟ್‌ನಲ್ಲಿ ಹಲವು ಶತಕಗಳನ್ನು ಸಿಡಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ವಿಶೇಷ ದಾಖಲೆಯನ್ನು ಸೈಮ್‌ ಆಯುಬ್‌ ಬರೆದಿದ್ದಾರೆ. ಪಾಕಿಸ್ತಾನ ತಂಡದ 22ನೇ ವಯಸ್ಸಿನ ಸೈಮ್‌ ಆಯುಬ್‌ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಶತಕಗಳನ್ನು ಸಿಡಿಸಿದ್ದಾರೆ. ಇದಕ್ಕೂ ಮುನ್ನ 22ನೇ ವಯಸ್ಸಿನಲ್ಲಿ ಅಬ್ದುಲ್‌ ಶಫಿಕ್‌, ಕೇನ್‌ ವಿಲಿಯಮ್ಸನ್‌ ಹಾಗೂ ರೆಹಮಾನುಲ್ಹಾ ಗುರ್ಬಾಝ್‌ ಅವರು ದಕ್ಷಿಣ ಆಫ್ರಿಕಾ ವಿರುದ್ದ ಶತಕಗಳನ್ನು ಸಿಡಿಸಿದ್ದರು. ಆದರೆ, ಸೈಮ್‌ ಆಯುಬ್‌ ಅವರು ಎರಡು ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್‌ ಎನಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ದ ಒಡಿಐ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ

ಸೈಮ್‌ ಆಯುಬ್‌ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅತ್ಯುತ್ತಮ ಪಾರ್ಮ್‌ನಲ್ಲಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ದ ಟಿ20ಐ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. 22ನೇ ವಯಸ್ಸಿನ ಬ್ಯಾಟ್ಸ್‌ಮನ್‌ ಆಡಿದ್ದ ಎರಡು ಪಂದ್ಯಗಳಿಂದ 129 ರನ್‌ಗಳನ್ನು ಸಿಡಿಸಿದ್ದರು. ಇದರಲ್ಲಿಅವರು ಎರಡನೇ ಪಂದ್ಯದಲ್ಲಿ 98 ರನ್‌ಗಳನ್ನು ಗಳಿಸಿದ್ದರು. ಆದರೂ ಈ ಟಿ20ಐ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 2-0 ಅಂತರದಲ್ಲಿ ಗೆಲುವು ಪಡೆದುಕೊಂಡಿತ್ತು.

ಇದಾದ ಬಳಿಕ ಮೊದಲನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಸೈಮ್‌ ಆಯುಬ್‌, ದಕ್ಷಿಣ ಆಫ್ರಿಕಾ ವಿರುದ್ದ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆದಿದ್ದರು.

ಏಕದಿನ ಸರಣಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಪಾಕಿಸ್ತಾನ

ಇನ್ನು ಮೂರನೇ ಏಕದಿನ ಪಂದ್ಯದಲ್ಲಿ ಸೈಮ್‌ ಆಯುಬ್‌ ಅವರ ಶತಕದ ಬಲದಿಂದ ಪಾಕಿಸ್ತಾನ ತಂಡ, ಡಿಎಲ್‌ಎಸ್‌ ನಿಮಯದ ಪ್ರಕಾರ 36 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಪಾಕಿಸ್ತಾನ ತಂಡ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು. ಡಿಸೆಂಬರ್‌ 26 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ.

ಈ ಸುದ್ದಿಯನ್ನು ಓದಿ: PAK vs ZIM: 53 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಸೈಮ್‌ ಆಯುಬ್‌!