ಹ್ಯಾಮಿಲ್ಟನ್: ರಚಿನ್ ರವೀಂದ್ರ (79 ರನ್) ಅರ್ಧಶತಕ ಹಾಗೂ ವಿಲಿಯಮ್ ರೌರ್ಕಿ (31ಕ್ಕೆ 3) ಅವರ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ನ್ಯೂಜಿಲೆಂಡ್ ತಂಡ ಎರಡನೇ ಏಕದಿನ ಪಂದ್ಯದಲ್ಲಿ (NZ vs SL) ಶ್ರೀಲಂಕಾ ಎದುರು 113 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಕಿವೀಸ್ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಇಲ್ಲಿನ ಸೆಡಾನ್ ಪಾರ್ಕ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಈ ಹಿನ್ನೆಲೆಯಲ್ಲಿ ಪಂದ್ಯವನ್ನು 37 ಓವರ್‌ಗಳಿಗೆ ಇಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ತಂಡ 37 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 255 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಶ್ರೀಲಂಕಾ ತಂಡ 30.2 ಓವರ್‌ಗಳಿಗೆ ಕೇವಲ 142 ರನ್‌ಗಳಿಗೆ ಆಲ್‌ಔಟ್ ಆಯಿತು. ಇದರೊಂದಿಗೆ ಸತತ ಎರಡನೇ ಪಂದ್ಯದಲ್ಲಿಯೂ ಸೋತು ಪ್ರವಾಸಿ ಶ್ರೀಲಂಕಾ ತಂಡ ಏಕದಿನ ಸರಣಿಯನ್ನು ಕಳೆದುಕೊಂಡಿತು.
ಕಮಿಂದು ಮೆಂಡಿಸ್ ಏಕಾಂಗಿ ಹೋರಾಟ
ಕಿವೀಸ್ ನೀಡಿದ್ದ ಗುರಿಯನ್ನು ಹಿಂಬಾಲಿಸಿದ್ದ ಶ್ರೀಲಂಕಾ ತಂಡದ ಪರ ಗಮನ ಸೆಳೆದಿದ್ದು ಕಮಿಂದು ಮೆಂಡಿಸ್ ಬ್ಯಾಟಿಂಗ್. ಪಥುಮ್ ನಿಸಾಂಕ, ಆವಿಷ್ಕಾ ಫೆರ್ನಾಂಡೊ, ಕುಸಾಲ್ ಮೆಂಡಿಸ್ ಹಾಗೂ ನಾಯಕ ಚರಿತ ಅಸಲಂಕ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಕಮಿಂದು ಮೆಂಡಿಸ್ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದರು. ಇವರು ಆಡಿದ 66 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 64 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಶ್ರೀಲಂಕಾ ತಂಡದ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಆದರೆ, ಇವರೊಬ್ಬರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ ದೀರ್ಘಾವಧಿ ಕ್ರೀಸ್‌ನಲ್ಲಿ ಉಳಿಯುವಲ್ಲಿ ವಿಫಲರಾದರು.
ಕಿವೀಸ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ವಿಲಿಯಮ್ ರೌರ್ಕಿ 6.2 ಓವರ್‌ಗಳಿಗೆ ಕೇವಲ 31 ರನ್ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದರೆ, ಜಾಕೋಬ್ ಡಫಿ 30 ರನ್ ನೀಡಿ ಎರಡು ವಿಕೆಟ್ ಪಡೆದರು.
ರಚಿನ್ ರವೀಂದ್ರ ಅರ್ಧಶತಕ
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ತಂಡದ ಪರ ರಚಿನ್ ರವೀಂದ್ರ ಹಾಗೂ ಮಾರ್ಕ್ ಚಾಂಪ್ಮನ್ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ರಚಿನ್ ರವೀಂದ್ರ ಅವರು ಆಡಿದ್ದ 63 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 79 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಕಿವೀಸ್ ತಂಡ 250ಕ್ಕೂ ಅಧಿಕ ರನ್ ಕಲೆ ಹಾಕುವಲ್ಲಿ ಅವರು ನೆರವು ನೀಡಿದ್ದರು. ಇವರ ಜೊತೆಗೆ ಎರಡನೇ ವಿಕೆಟ್‌ಗೆ 100ಕ್ಕೂ ಅಧಿಕ ರನ್ ಜೊತೆಯಾಟವನ್ನು ಆಡಿದ್ದ ಮಾರ್ಕ್ ಚಾಂಪ್ಮನ್ ಅವರು 52 ಎಸೆತಗಳಲ್ಲಿ 62 ರನ್‌ಗಳನ್ನು ಕಲೆ ಹಾಕಿದ್ದರು. ಡ್ಯಾರಿಲ್ ಮಿಚೆಲ್ ಉಪಯುಕ್ತ 38 ರನ್ ಕಲೆ ಹಾಕಿದ್ದರೆ, ಗ್ಲೆನ್ ಫಿಲಿಪ್ಸ್ ಹಾಗೂ ಮಿಚೆಲ್ ಸ್ಯಾಂಟ್ನರ್ ಕ್ರಮವಾಗಿ 22 ಮತ್ತು 20 ರನ್‌ಗಳನ್ನು ಗಳಿಸಿದ್ದರು.
ಈ ಸುದ್ದಿಯನ್ನು ಓದಿ: NZ vs SL: ಹ್ಯಾಟ್ರಿಕ್ ವಿಕೆಟ್ ಪಡೆದು ಮಾಲಿಂಗ ಒಳಗೊಂಡ ಎಲೈಟ್ ಲಿಸ್ಟ್ ಸೇರಿದ ಮಹೇಶ್ ತೀಕ್ಷಣ!