Tuesday, 13th May 2025

ನಿಧಾನಗತಿ ಬೌಲಿಂಗ್​: ರಾಣಾಗೆ 24 ಲಕ್ಷ ರೂಪಾಯಿ ದಂಡ

ಚೆನ್ನೈ: ನಿಧಾನಗತಿ ಬೌಲಿಂಗ್​ನಿಂದಾಗಿ ಕೆಕೆಆರ್​ ತಂಡ ದಂಡದ ಶಿಕ್ಷೆಗೆ ಒಳಗಾಗಿದೆ. ಮತ್ತೊಮ್ಮೆ ತಪ್ಪು ಮಾಡಿದಲ್ಲಿ ನಾಯಕ ನಿತೀಶ್ ರಾಣಾ ಒಂದು ಪಂದ್ಯಕ್ಕೆ ನಿಷೇಧ ಗೊಳ್ಳುವ ಭೀತಿಯಲ್ಲಿದ್ದಾರೆ.

ನಿಧಾನಗತಿ ಬೌಲಿಂಗ್​ ಮಾಡಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ನಿತೀಶ್ ರಾಣಾ ಮತ್ತು ತಂಡಕ್ಕೆ ದಂಡ ವಿಧಿಸಲಾಗಿದೆ.

ಎರಡನೇ ಬಾರಿಗೆ ತಪ್ಪು ಎಸಗಿದ ಕಾರಣ ನಾಯಕನಿಗೆ 24 ಲಕ್ಷ ರೂಪಾಯಿ, ಇಂಪ್ಯಾಕ್ಟ್​ ಪ್ಲೇಯರ್​ ಸೇರಿದಂತೆ ಆಡಿದ ಹನ್ನೊಂದರ ಬಳಗಕ್ಕೆ 6 ಲಕ್ಷ ರೂಪಾಯಿ ದಂಡ ಬಿದ್ದಿದೆ. ಇದೇ ತಪ್ಪು ಮರುಕಳಿಸಿದಲ್ಲಿ ರಾಣಾ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಲಿದ್ದಾರೆ.

ಭಾನುವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ನಿತೀಶ್​ ರಾಣಾ ಮತ್ತು ರಿಂಕು ಸಿಂಗ್​ ಅವರ ಭರ್ಜರಿ ಅರ್ಧಶತಕ ಬಲದಿಂದ 6 ವಿಕೆಟ್​ಗಳ ಗೆಲುವು ಸಾಧಿಸಿತು. ಟಾಸ್​ ಗೆದ್ದ ಸಿಎಸ್​ಕೆ ಬ್ಯಾಟಿಂಗ್​ ಆಯ್ದುಕೊಂಡಿತು. ಕೆಕೆಆರ್​ ತಂಡದ ಬಿಗಿ ಬೌಲಿಂಗ್​ ದಾಳಿಗೆ ಸಿಲುಕಿ 144 ರನ್​ಗಳ ಅಲ್ಪ ಮೊತ್ತ ದಾಖಲಿಸಿತು.

ಸ್ಪಿನ್​ ಮಾಂತ್ರಿಕರಾದ ವರುಣ್​ ಚಕ್ರವರ್ತಿ ಮತ್ತು ಸುನೀಲ್​ ನರೈನ್​ ತಲಾ 2 ವಿಕೆಟ್​ ಪಡೆದು ತಂಡವನ್ನು ಕಟ್ಟಿ ಹಾಕಿದರು. ಇದಲ್ಲದೇ ಉಳಿದ ಬೌಲರ್​ಗಳು ಕೂಡ ರನ್​ ಬಿಟ್ಟುಕೊಡದೇ ಕಾಡಿದರು.

ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಕೆಕೆಆರ್​ ನಿಧಾನಗತಿ ಬೌಲಿಂಗ್ ಮಾಡಿತು. ನಿಗದಿತ ಅವಧಿಗಿಂತಲೂ 2 ಓವರ್​ ಹಿಂದಿದ್ದ ಕಾರಣ ಶಿಕ್ಷೆಗೆ ಒಳಗಾಯಿತು. ಇದರಿಂದ ನಾಯಕ ರಾಣಾಗೆ ಶೇಕಡಾ 50 ರಷ್ಟು, ಬದಲಿ ಆಟಗಾರ ಸೇರಿ ಉಳಿದೆಲ್ಲಾ ಆಟಗಾರರಿಗೆ 6 ಲಕ್ಷ ಅಥವಾ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದೆ.

ಇದಕ್ಕೂ ಮೊದಲು ಅಂದರೆ, ಮೇ 8 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿತೀಶ್ ರಾಣಾ ನೇತೃತ್ವದ ತಂಡ ನಿಧಾನಗತಿಯ ಓವರ್ ರೇಟ್‌ಗಾಗಿ ದಂಡನೆಗೆ ಒಳಗಾಗಿತ್ತು. ಮೊದಲ ತಪ್ಪಿಗಾಗಿ ರಾಣಾಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಇದೀಗ ಮತ್ತೊಮ್ಮೆ ತಂಡ ತಪ್ಪು ಮರುಕಳಿಸಿದ್ದು, ಇನ್ನೊಂದು ಬಾರಿ ನಿಧಾನಗತಿ ಬೌಲಿಂಗ್​ ಮಾಡಿದಲ್ಲಿ ನಾಯಕ ರಾಣಾ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾರೆ.