Wednesday, 14th May 2025

ಪ್ರೀಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ನೆಹ್ವಾಲ್‌

ಟೋಕಿಯೊ: ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್‌ ಪ್ರೀಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ದರು.

ಮಂಗಳವಾರದ ಮೊದಲ ಸುತ್ತಿನ ಪಂದ್ಯದಲ್ಲಿ 21-19, 21-9 ರಲ್ಲಿ ಹಾಂಗ್‌ಕಾಂಗ್‌ನ ಚುಂಗ್ ಎಂಗನ್ ಯಿ ಅವರನ್ನು ಪರಾಭವ ಗೊಳಿಸಿದರು. ಸೈನಾ ಎರಡನೇ ಸುತ್ತಿನಲ್ಲಿ ಜಪಾನ್‌ನ ನೊಜೊಮಿ ಒಕುಹರ ಅವರನ್ನು ಎದುರಿಸಬೇಕಿತ್ತು. ಆದರೆ ಗಾಯದ ಕಾರಣ ನೊಜೊಮಿ ಹಿಂದೆ ಸರಿದರು. ‘ಬೈ’ ಪಡೆದ ಸೈನಾ ಪ್ರೀಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟರು.

ಚುಂಗ್‌ ವಿರುದ್ಧದ ಪಂದ್ಯದ ಮೊದಲ ಗೇಮ್‌ನಲ್ಲಿ 4-7 ರಲ್ಲಿ ಹಿನ್ನಡೆಯಲ್ಲಿದ್ದ ಸೈನಾ, ಮರುಹೋರಾಟ ನಡೆಸಿ 12-11 ರಲ್ಲಿ ಮುನ್ನಡೆ ಪಡೆದರು. ಆ ಬಳಿಕ ಇಬ್ಬರ ನಡುವೆ ತುರುಸಿನ ಪೈಪೋಟಿ ನಡೆಯಿತು. 19-19 ರಲ್ಲಿ ಸಮಬಲ ಕಂಡುಬಂತು. ಈ ವೇಳೆ ಶಿಸ್ತಿನ ಆಟವಾಡಿದ ಸೈನಾ ಎರಡು ಪಾಯಿಂಟ್ಸ್‌ ಕಲೆ ಹಾಕಿ ಗೇಮ್‌ ಗೆದ್ದುಕೊಂಡರು.

ಎರಡನೇ ಗೇಮ್‌ನಲ್ಲಿ ಭಾರತದ ಆಟಗಾರ್ತಿ ಸೊಗಸಾದ ಆಟವಾಡಿದರು. ಆರಂಭದಲ್ಲೇ 11-6 ರಲ್ಲಿ ಮುನ್ನಡೆ ಪಡೆದು, ಅದೇ ಮೇಲುಗೈಯನ್ನು ಕಾಪಾಡಿಕೊಂಡು ಪಂದ್ಯ ಜಯಿಸಿದರು.