ರಾಂಚಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್ ಧೋನಿ(MS Dhoni) ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ರಾಂಚಿಯಲ್ಲಿರುವ ನಿವಾಸವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡ ಆರೋಪದ ಮೇಲೆ ಜಾರ್ಖಂಡ್ ರಾಜ್ಯ ಹೌಸಿಂಗ್ ಬೋರ್ಡ್ ಕ್ರಮ ಕೈಗೊಂಡಿದೆ.
ಮಹೇಂದ್ರ ಸಿಂಗ್ ಧೋನಿ ಅವರ ಸಾಧನೆಯನ್ನು ಪರಿಗಣಿಸಿ ಜಾರ್ಖಂಡ್ ಸರ್ಕಾರ ಈ ಹಿಂದೆ ಅವರಿಗೆ ರಾಂಚಿಯಲ್ಲಿ 10 ಸಾವಿರ ಚದರ ಅಡಿ ಜಾಗ ನೀಡಿತ್ತು. ಈ ಜಾಗದಲ್ಲಿ ಧೋನಿ ಮನೆ ನಿರ್ಮಿಸಿದ್ದರು. ಆದರೆ ಧೋನಿ ತಮ್ಮ ಮನೆಯಲ್ಲಿ ಡಯಾಗ್ನೋಸ್ಟಿಕ್ ಸೆಂಟರ್ ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿದೆ. ಈ ಬಗ್ಗೆ ಹೌಸಿಂಗ್ ಬೋರ್ಡ್ಗೆ ದೂರು ದಾಖಲಿಸಲಾಗಿದೆ.
ಮಂಡಳಿಯ ಪ್ರಕಾರ, ವಸತಿ ಭೂಮಿಯನ್ನು ವಸತಿ ರಹಿತ ಉದ್ದೇಶಗಳಿಗಾಗಿ ಬಳಸುವುದು ನಿಯಮ ಉಲ್ಲಂಘನೆಯಾಗಿದೆ. ಇದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ ಎಂದು ಮಂಡಳಿಯ ಅಧ್ಯಕ್ಷ ಸಂಜಯ್ ಲಾಲ್ ಪಾಸ್ವಾನ್ ಹೇಳಿದ್ದಾರೆ.
ಆರೋಪ ಕೇಳಿ ಬಂದ ಬೆನ್ನಲ್ಲೇ ಮಂಡಳಿಯು ಮೂಲತಃ ಯಾವ ಉದ್ದೇಶಕ್ಕೆ ಧೋನಿಗೆ ನಿವೇಶನ ಮಂಜೂರು ಮಾಡಲಾಗಿದೆ ಮತ್ತು ನಿಯಮಾನುಸಾರ ಬಳಸಲಾಗುತ್ತಿದೆಯೇ ಎಂಬ ಬಗ್ಗೆ ತನಿಖೆಗೆ ಆದೇಶಿಸಿದೆ. ವಸತಿ ಭೂಮಿಯನ್ನು ವಾಣಿಜ್ಯವಾಗಿ ಬಳಸುತ್ತಿರುವುದು ದೃಢಪಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ Manu Bhaker: ಕ್ರೀಡಾ ಸಚಿವಾಲಯದ ವಿರುದ್ಧ ಗುಡುಗಿದ ಮನು ಭಾಕರ್ ತಂದೆ
ಪ್ರಸ್ತುತ ಸಿಮಾಲಿಯ ರಿಂಗ್ ರಸ್ತೆಯಲ್ಲಿರುವ ತನ್ನ ಹೊಸ ಮನೆಯಲ್ಲಿ ನೆಲೆಸಿರುವ ಧೋನಿ, ಈ ಹಿಂದೆ ಹರ್ಮು ರಸ್ತೆಯ ನಿವಾಸದಲ್ಲಿ ವಾಸವಾಗಿದ್ದರು. ಹಳೆಯ ಆಸ್ತಿಯಲ್ಲಿ ಡಯಾಗ್ನೋಸ್ಟಿಕ್ ಲ್ಯಾಬ್ ಅನ್ನು ಸ್ಥಾಪಿಸಲಾಗಿದೆ ಎಂದು ವರದಿಗಳು ಹೇಳಿದೆ. ಅರ್ಜುನ್ ಮುಂಡಾ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕ್ರಿಕೆಟ್‌ನಲ್ಲಿ ಧೋನಿ ಅಮೋಘ ಸಾಧನೆಯನ್ನು ಗುರುತಿಸಿ ಜಾರ್ಖಂಡ್ ಸರ್ಕಾರವು ಧೋನಿ ಅವರಿಗೆ ವಸತಿ ಪ್ಲಾಟ್ ಅನ್ನು ನೀಡಿತ್ತು.
ಧೋನಿ ನಿವಾಸ ಮಾತ್ರವಲ್ಲದೆ ಹರ್ಮು ರಸ್ತೆಯಲ್ಲಿರುವ ಬಿಜೆಪಿಯ ರಾಜ್ಯ ಕಚೇರಿಯ ವಿರುದ್ಧವೂ ವಸತಿ ಪ್ಲಾಟ್‌ಗಳ ದುರುಪಯೋಗದ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಗೃಹ ಮಂಡಳಿ ಈ ಹಿಂದೆಯೇ ನೋಟಿಸ್ ಜಾರಿ ಮಾಡಿತ್ತು. ಎರಡೂ ಪ್ರಕರಣಗಳ ತನಿಖೆ ಮುಂದುವರಿದಿದೆ.