ತಿರುವನಂತಪುರಂ: ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ(Lionel Messi) ಸೇರಿದಂತೆ ಅರ್ಜೆಂಟೀನಾ(Argentina) ಫುಟ್‌ಬಾಲ್ ತಂಡ ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ ಇದೇ ವರ್ಷ ಅಕ್ಟೋಬರ್ 25 ಕೇರಳಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅರ್ಜೆಂಟೀನಾ ತಂಡ ಕೇರಳಕ್ಕೆ ಭೇಟಿ ನೀಡುವ ವಿಚಾರವನ್ನು ಕೇರಳ ಕ್ರೀಡಾ ಸಚಿವ ವಿ. ಅಬ್ದುರಹಿಮಾನ್(Sports Minister V. Abdurahiman) ಕಳೆದ ವರ್ಷ ನವೆಂಬರ್‌ನಲ್ಲಿ ಖಚಿತಪಡಿಸಿದ್ದರು. ಇದೀಗ ಶನಿವಾರ ರಾತ್ರಿ ಕೊಚ್ಚಿಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅಬ್ದುರಹಿಮಾನ್, ಮೆಸ್ಸಿ ಏಳು ದಿನಗಳ ಕಾಲ ಕೇರಳದಲ್ಲಿಯೇ ಇರುತ್ತಾರೆ ಎಂದು ದೃಢಪಡಿಸಿದ್ದಾರೆ.
‘ಕ್ರೀಡೆಗಳನ್ನು ಮತ್ತಷ್ಟು ಪ್ರೋತ್ಸಾಹಿಸುವ ಭಾಗವಾಗಿ, ನಾವು ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಕೇರಳಕ್ಕೆ ಆಹ್ವಾನಿಸಿದ್ದೇವೆ. ಕಳೆದ ವಾರ, ನಾನು ಸ್ಪೇನ್‌ಗೆ ಪ್ರಯಾಣ ಬೆಳೆಸಿ ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದೆ. ಅವರು 2025 ರಲ್ಲಿ ಭಾರತದಲ್ಲಿ ಸ್ನೇಹಪರ ಪಂದ್ಯವನ್ನು ಆಡಲು ಒಪ್ಪಿಕೊಂಡಿದ್ದಾರೆ’ ಎಂದು ವಿ ಅಬ್ದುರಹಿಮಾನ್ ಹೇಳಿದ್ದಾರೆ.
‘ಈ ಸೌಹಾರ್ದ ಪಂದ್ಯ ಆಯೋಜನೆ ಅಷ್ಟು ಸುಲಭವಲ್ಲ. ಆದರೆ, ಇದು ಕೇರಳದ ಫುಟ್ಬಾಲ್ ಪ್ರೇಮಿಗಳಿಗೆ ಒಂದು ಕೊಡುಗೆಯಾಗಲಿದೆ. ಕೇರಳದಲ್ಲಿ ಅರ್ಜೆಂಟೀನಾ ತಂಡಕ್ಕೆ ಅಪಾರ ಅಭಿಮಾನಿಗಳಿದ್ದಾರೆ. ನೆಚ್ಚಿನ ತಂಡ ಆಡುವುದನ್ನು ನೋಡಲು ನಮ್ಮ ಜನರು ತೋರುತ್ತಿರುವ ಉತ್ಸಾಹ ನಮ್ಮನ್ನು ಈ ನಿಟ್ಟಿನಲ್ಲಿ ಮುನ್ನಡೆಯಲು ಪ್ರೇರೇಪಿಸುತ್ತಿದೆ’ ಎಂದು ಸಚಿವರು ಹೇಳಿದ್ದಾರೆ. ಇದೇ ವೇಳೆ ಸೌಹಾರ್ದ ಪಂದ್ಯದ ಹೊರತಾಗಿ, ಮೆಸ್ಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿಯೂ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು 20 ನಿಮಿಷಗಳನ್ನು ನಿಗದಿಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ವರ್ಷವೇ ಮೆಸ್ಸಿ(Lionel Messi play in India) ಸಾರಥ್ಯದ ಅರ್ಜೆಂಟೀನಾ ತಂಡ ಕೇರಳದಲ್ಲಿ ಸೌಹಾರ್ದ ಪಂದ್ಯ ಆಡಲಿದೆ ಎಂದು ಸಿಎಂ ಪಿಣರಾಯ್ ವಿಜಯನ್(Pinarayi Vijayan) ಅವರು ಮೆಸ್ಸಿ ಅವರ ಜೆರ್ಸಿಯನ್ನು ಹಿಡಿದು ಅರ್ಜೆಂಟೀನಾ ತಂಡ ಕೇರಳಕ್ಕೆ ಬರುವ ವಿಚಾರವನ್ನು ತಿಳಿಸಿದ್ದರು.
ಮೆಸ್ಸಿ 2011 ರಲ್ಲಿ ಕೊನೆಯ ಬಾರಿಗೆ ಭಾರತದಲ್ಲಿ ಫುಟ್ಬಾಲ್ ಪಂದ್ಯವನ್ನಾಡಿದ್ದರು. ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ವೆನೆಜುವೆಲಾ ವಿರುದ್ಧದ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯ ಇದಾಗಿತ್ತು. ಈ ಪಂದ್ಯ ಗೋಲು ರಹಿತ ಡ್ರಾದಲ್ಲಿ ಕೊನೆಗೊಂಡಿತ್ತು. ಮೆಸ್ಸಿ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲೂ ಕೇರಳದಲ್ಲಿ ಅಧಿಕ.