Monday, 12th May 2025

KL Rahul: ಆರಂಭಿಕನಾಗಿ ವಿದೇಶಿ ನೆಲದಲ್ಲಿ ರಾಹುಲ್‌ ಟೆಸ್ಟ್‌ ಸಾಧನೆ ಹೇಗಿದೆ?

ಬೆಂಗಳೂರು: ರೋಹಿತ್​ ಶರ್ಮ ಮೊದಲ ಟೆಸ್ಟ್​ಗೆ ಗೈರಾದರೆ ಯಶಸ್ವಿ ಜೈಸ್ವಾಲ್​ ಜತೆಗೆ ಇನಿಂಗ್ಸ್​ ಆರಂಭಿಸಲು ಅಭಿಮನ್ಯು ಈಶ್ವರನ್​ ಮತ್ತು ಕೆಎಲ್​ ರಾಹುಲ್(KL Rahul)​ ರೇಸ್​ನಲ್ಲಿದ್ದಾರೆ. ಈ ಪೈಕಿ ಅನುಭವದ ಆಧಾರದಲ್ಲಿ ರಾಹುಲ್‌ಗೆ ಅವಕಾಶ ಸಿಗುವ ಸಾಧ್ಯತೆ ಅಧಿಕ. ಈಗಾಗಕೇ ಕೋಚ್‌ ಗಂಭೀರ್‌ ಕೂಡ​ ರಾಹುಲ್‌ರನ್ನು ಆರಂಭಿಕನಾಗಿ ಆಡಿಸುವ ಒಲವು ತೋರಿದ್ದಾರೆ.

ರಾಹುಲ್‌ ಆರಂಭಿಕನಾಗಿ ವಿದೇಶಿ ಪ್ರವಾಸದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ರಾಹುಲ್‌ ಇದುವರೆಗೆ ಆರಂಭಿನಾಗಿ ವಿದೇಶಿ ನೆಲದಲ್ಲಿ ಒಟ್ಟು 29 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 48.93 ಸ್ಟ್ರೇಕ್‌ ರೇಟ್‌ನೊಂದಿಗೆ1682 ರನ್‌ ಕಲೆ ಹಾಕಿದ್ದಾರೆ. ಓಪನರ್ ಆಗಿ ವಿದೇಶದಲ್ಲಿ 158 ರನ್ ಗಳಿಸಿದ್ದು ಅವರ ಗರಿಷ್ಠ ಸಾಧನೆ. ಇದೇ ವೇಳೆ ನಾಲ್ಕು ಬಾರಿ ಶೂನ್ಯ ಸಂಕಟಕ್ಕೂ ಸಿಲುಕಿದ್ದರು. ಬ್ಯಾಟಿಂಗ್‌ ಫಾರ್ಮ್‌ ಕಳೆದುಕೊಂಡಿರುವ ರಾಹುಲ್‌ಗೆ ಆಸೀಸ್‌ ಪ್ರವಾಸ ಒಂದು ರೀತಿಯಲ್ಲಿ ಸಾಮರ್ಥ್ಯ ಪ್ರದರ್ಶನಕ್ಕೆ ಅಗ್ನಿ ಪರೀಕ್ಷೆಯಾಗಿದೆ. ಆಸೀಸ್‌ ಎ ತಂಡದ ವಿರುದ್ಧ ರಾಹುಲ್‌ ಎರಡೂ ಇನಿಂಗ್ಸ್‌ನಲ್ಲಿ ವೈಫಲ್ಯ ಕಂಡಿದ್ದರು. ಇದೀಗ ಆಸೀಸ್‌ ಟೆಸ್ಟ್‌ನಲ್ಲಿಯೂ ವಿಫಲವಾದರೆ ರಾಹುಲ್‌ಗೆ ತಂಡದಿಂದ ಗೇಟ್‌ ಪಾಸ್‌ ಸಿಗುವುದು ಖಚಿತ. ನಿರೀಕ್ಷಿತ ಪ್ರದರ್ಶನ ತೋರಿದರೆ ತಂಡದಲ್ಲಿ ಇನ್ನೂ ಕೆಲ ಕಾಲ ಮುಂದುವರಿಯಬಹುದು.

ಇಂದಿನಿಂದ ಅಭ್ಯಾಸ

ಮೊದಲ ಬ್ಯಾಚ್‌ ಈಗಾಗಲೇ ಆಸ್ಟ್ರೇಲಿಯಾದ ಪರ್ತ್‌ಗೆ ತಲುಪಿದೆ. ದ್ವಿತೀಯ ಬ್ಯಾಚ್‌ ಇಂದು ತಲುಪಲಿದೆ. ಮೊದಲ ಬ್ಯಾಚ್‌ ಅಭ್ಯಾಸ ಕೂಡ ಆರಂಭಿಸಿದೆ. ನಾಳೆ(ಬುಧವಾರ)ಯಿಂದ ಎಲ್ಲ ಆಟಗಾರರು ಮುಂದಿನ 8 ದಿನ ಕಠಿಣ ಅಭ್ಯಾಸದಲ್ಲಿ ನಿರತರಾಗಲಿದ್ದಾರೆ. ನವೆಂಬರ್​ 22ರ ಬೆಳಗ್ಗೆಯ ವೇಳೆಗೆ ನಾವು ಮೊದಲ ಎಸೆತದಿಂದಲೇ ಸಂಪೂರ್ಣ ಸಜ್ಜಾಗುವಂತೆ ಅಭ್ಯಾಸ ನಡೆಸಲಿದ್ದೇವೆ ಎಂದು ಗಂಭೀರ್‌ ಆಸೀಸ್‌ ಪ್ರವಾಸಕ್ಕು ಮುನ್ನ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ Virat Kohli: ಆಸೀಸ್‌ನಲ್ಲಿ ಕೊಹ್ಲಿ ಕ್ರೇಜ್‌; ದಿನ ಪತ್ರಿಕೆಯ ಮುಖ ಪುಟದಲ್ಲಿ ರಾರಾಜಿಸಿದ ಪೋಸ್ಟರ್‌

ರಾಹುಲ್‌ ಲಕ್ನೋ ತೊರೆದಿದ್ದೇಕೆ?

ಕೆ.ಎಲ್‌ ರಾಹುಲ್‌ ಅವರು ಲಕ್ನೋ ಸೂಪರ್​ಜೈಂಟ್ಸ್​ ತಂಡದಿಂದ ಹೊರ ಬಂದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸ್ಟಾರ್‌ ಸ್ಪೋರ್ಟ್ಸ್‌ ಸಂದರ್ಶನವೊಂದರಲ್ಲಿ ಮಾತನಾಡಿದ ರಾಹುಲ್‌, ‘ನಾನು ಹೊಸ ಆರಂಭ ಕಾಣಲು ಮುಂದಾಗಿದ್ದೇನೆ. ನನ್ನ ಮುಂದಿರುವ ಹೊಸ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದೇನೆ. ಸ್ವತಂತ್ರವಾಗಿ ಆಡುವ ಹಂಬಲದಲ್ಲಿದ್ದೇನೆ. ತಂಡದ ವಾತಾವರಣ ತಿಳಿಯಾಗಿರುವ ಕಡೆ ಆಡಬೇಕೆಂದಿದ್ದೇನೆ’ ಎಂದು ಹೇಳಿದ್ದಾರೆ. ರಾಹುಲ್‌ರನ್ನು ತಂಡದಿಂದ ಕೈ ಬಿಟ್ಟ ವೇಳೆ ಪ್ರತಿಕ್ರಿಯೆ ನೀಡಿದ್ದ ಲಕ್ನೋ ತಂಡದ ಮಾಲೀಕ ಸಂಜೀವ್​ ಗೋಯೆಂಕಾ, ನಮಗೆ ತಂಡಕ್ಕಾಗಿ ಆಡುವ ಆಟಗಾರರಷ್ಟೇ ಬೇಕು ಎಂದಿದ್ದರು.