Tuesday, 13th May 2025

‌KL Rahul: ಆರ್‌ಸಿಬಿ ಸೇರುವ ಬಗ್ಗೆ ತುಟಿ ಬಿಚ್ಚಿದ ರಾಹುಲ್‌; ವಿಡಿಯೊ ವೈರಲ್

KL Rahul

ಬೆಂಗಳೂರು: ಟೀಮ್​ ಇಂಡಿಯಾದ ಬ್ಯಾಟರ್​, ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಮತ್ತೆ ತವರು ತಂಡವಾದ ಆರ್​ಸಿಬಿ(RCB)ಗೆ ಸೇರಲಿದ್ದಾರಾ ಎಂಬ ಚರ್ಚೆ ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿದೆ. ರಾಹುಲ್​ ಕೂಡ ಆರ್​ಸಿಬಿ ಪರ ಆಡುವ ಬಯಕೆಯನ್ನು 17ನೇ ಆವೃತ್ತಿಯ ವೇಳೆ ವ್ಯಕ್ತಪಡಿಸಿದ್ದರು. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ಕೂಡ ರಾಹುಲ್‌ ತವರು ತಂಡಕ್ಕೆ ಆಗಮಿಸುತ್ತಾರೆ ಎಂದು ಬಲವಾಗಿ ನಂಬಿದ್ದರು. ಇದೀಗ ರಾಹುಲ್‌ ಆರ್‌ಸಿಬಿ ಸೇರುವ ವಿಚಾರದಲ್ಲಿ ಸುಳಿವೊಂದನ್ನು ಬಿಟ್ಟುಕೊಟ್ಟಿದ್ದಾರೆ. ಈ ವಿಡಿಯೊ ವೈರಲ್‌(viral video) ಆಗಿದೆ.

ಆರ್‌ಸಿಬಿಯ ಅಪ್ಪಟ ಅಭಿಮಾನಿಯೊಬ್ಬ ತನ್ನ ಸಾಮಾಜಿಕ ಜಾಲತಾಣದಲ್ಲಿ ರಾಹುಲ್‌ ಜತೆ ಮಾತನಾಡಿರುವ ವಿಡಿಯೊವೊಂದು ವೈರಲ್‌ ಆಗಿದೆ. ಅಭಿಮಾನಿ ರಾಹುಲ್‌ ಜತೆ ನಾನು ಆರ್‌ಸಿಬಿಯ ಅಭಿಮಾನಿ. ನೀವು ಕೂಡ ಈ ಹಿಂದೆ ಆರ್‌ಸಿಬಿ ಪರ ಆಡಿದ್ದೀರಿ. ಬಳಿಕ ಬೇರೆ ಫ್ರಾಂಚೈಸಿ ಪಾಲಾದಿರಿ. ನೀವು ಮತ್ತೆ ಆರ್‌ಸಿಬಿ ಪರ ಆಡುವುದನ್ನು ನೋಡಲು ಕನ್ನಡಿಗರು ಬಯಸುತ್ತಿದ್ದಾರೆ ಎಂದಾಗ ರಾಹುಲ್‌ ಬಹಳ ಸಂತೋಷದಿಂದ ನಗುತ್ತಲೇ ನಾನು ಕೂಡ ಅದನ್ನೇ ಭಾವಿಸುತ್ತೇನೆ ಎಂದಿದ್ದಾರೆ. ರಾಹುಲ್‌ ಅವರ ಈ ಮಾತು ಕೇಳುತ್ತಿದ್ದಂತೆ ಅಭಿಮಾನಿಯ ಖುಷಿಗೆ ಪಾರವೇ ಇಲ್ಲದಂತಾಯಿತು.

ಇದೇ ವರ್ಷ ನಡೆದಿದ್ದ ಐಪಿಎಲ್​ ವೇಳೆ ಆರ್.ಅಶ್ವಿನ್ ಜತೆಗಿನ ಕುಟ್ಟಿ ಸ್ಟೋರೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೆಎಲ್ ರಾಹುಲ್, 2013ರಲ್ಲಿ ವಿರಾಟ್ ಕೊಹ್ಲಿ ಅವರು ತನ್ನನ್ನು ಆರ್​ಸಿಬಿ ತಂಡಕ್ಕೆ ಸೇರಿಸಿಕೊಂಡರು. ನಾನು ಬೆಂಗಳೂರು ತಂಡದಲ್ಲಿ ಆಡಲು ಇಷ್ಟಪಡುತ್ತೇನೆ. ನಾನು ಅಲ್ಲಿದಂದಲೇ ಈ ಪಯಣ ಆರಂಭಿಸಿದೆ. ಅಲ್ಲಿಯೇ ಇದನ್ನು ಅಂತ್ಯಗೊಳಿಸಲು ಬಯುಸುತ್ತೇನೆ. ಅದು ತನ್ನ ತಲೆಯಲ್ಲಿದೆ ಎಂದು ಹೇಳಿದ್ದರು. ಒಟ್ಟಾರೆ ರಾಹುಲ್‌ ಆರ್‌ಸಿಬಿ ಸೇರುವುದು ಬಹುತೇಖ ಖಚಿತ ಎನ್ನುವಂತಿದೆ.

ಇದನ್ನೂ ಓದಿ KL Rahul : ಆರ್‌ಸಿಬಿ ಕ್ಯಾಪ್ಟನ್‌; ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ಕೆ.ಎಲ್ ರಾಹುಲ್‌ಗೆ ಸ್ವಾಗತ ನೀಡಿದ ಅಭಿಮಾನಿಗಳು

ರಾಹುಲ್​ ಆರ್​ಸಿಬಿ ಸೇರಲಿದ್ದಾರೆ ಎಂಬ ಸುದ್ದಿ ಕೇಳಿದ್ದೇ ತಡ ಕನ್ನಡಿಗರು ಮತ್ತು ಆರ್​ಸಿಬಿ ಅಭಿಮಾನಿಗಳು ಆರ್​ಸಿಬಿ ಜೆರ್ಸಿಯಲ್ಲಿ ರಾಹುಲ್​ ಅವರ ಫೋಟೊ ಎಡಿಟ್​ ಮಾಡಿ ತವರಿಗೆ ಸ್ವಾಗತ ಎನ್ನುವ ಪೋಸ್ಟರ್​ ಶೇರ್​ ಮಾಡಲಾರಂಭಿಸಿದ್ದಾರೆ. ಈ ಪೋಸ್ಟರ್​ಗಳು ವೈರಲ್​ ಆಗುತ್ತಿವೆ.

ಇನ್ನೊಂದೆಡೆ ಲಕ್ನೋ ಫ್ರಾಂಚೈಸಿಗೆ ಹತ್ತಿರವಿರುವ ಮೂಲಗಳು ರಾಹುಲ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗುವುದು ಎಂದು ಹೇಳುತ್ತಿವೆ. ಇತ್ತೀಚೆಗೆ ರಾಹುಲ್ ಅವರು ಗೋಯೆಂಕಾ ಅವರನ್ನು ಕೋಲ್ಕತ್ತಾದ ಅಲಿಪುರದಲ್ಲಿರುವ ಅವರ ಕಚೇರಿಯಲ್ಲಿ ಭೇಟಿಯಾಗಿದ್ದರು. ಇಬ್ಬರೂ ಸುಮಾರು ನಾಲ್ಕು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದರು. ಒಟ್ಟಾರೆ ಟೀಮ್​ ಇಂಡಿಯಾ ಪರ ಕೂಡ ಫಾರ್ಮ್​ ಕಳೆದುಕೊಂಡಿರುವ ರಾಹುಲ್​ ಈ ಬಾರಿ ಯಾವ ತಂಡದ ಪಾಲಾಗಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *