Monday, 12th May 2025

ಕೋಲ್ಕತ್ತಾಗೆ ಮಣಿದ ಸನ್‌ರೈಸರ್ ಹೈದರಾಬಾದ್‌

ದುಬಾೖ: ಸನ್‌ರೈಸರ್ ಹೈದರಾಬಾದ್‌ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಕೋಲ್ಕತಾ ನೈಟ್‌ರೈಡರ್ ಪ್ಲೇ ಆಫ್‌ ಸನಿಹ ಬಂದು ನಿಂತಿದೆ.

ಭಾನುವಾರದ ಎರಡನೇ ಪಂದ್ಯದಲ್ಲಿ ಹೈದರಾಬಾದ್‌ 8 ವಿಕೆಟ್‌ ನಷ್ಟಕ್ಕೆ ಕೇವಲ 115 ರನ್‌ ಮಾಡಿದರೆ, ಕೆಕೆಆರ್‌ 19.4 ಓವರ್‌ಗಳಲ್ಲಿ 4 ವಿಕೆಟಿಗೆ 119 ರನ್‌ ಬಾರಿಸಿ ತನ್ನ 6ನೇ ಗೆಲುವು ದಾಖಲಿಸಿತು. ಚೇಸಿಂಗ್‌ ವೇಳೆ ಶುಭಮನ್‌ ಗಿಲ್‌ 57 ರನ್‌ ಬಾರಿಸಿ ಅಗ್ರ ಕ್ರಮಾಂಕವನ್ನು ಆಧರಿಸಿ ನಿಂತರು. ನಿತೀಶ್‌ ರಾಣಾ 25 ರನ್‌ ಮಾಡಿದರು.

ವೃದ್ಧಿಮಾನ್‌ ಸಾಹಾ ಅವರನ್ನು ದ್ವಿತೀಯ ಎಸೆತದಲ್ಲೇ ಕೆಡವಿದ ಟಿಮ್‌ ಸೌಥಿ ಹೈದರಾಬಾದ್‌ ಕುಸಿತಕ್ಕೆ ಚಾಲನೆ ನೀಡಿದರು. ಜಾಸನ್‌ ರಾಯ್‌ (10) ಸಿಡಿಯಲು ವಿಫ‌ಲರಾದರು. ನಾಯಕ ಕೇನ್‌ ವಿಲಿಯಮ್ಸನ್‌ ಬಿರುಸಿನ ಆಟಕ್ಕಿಳಿದರೂ 26 ರನ್‌ ಮಾಡುವಷ್ಟರಲ್ಲಿ ರನೌಟ್‌ ಆಗಿ ನಿರ್ಗಮಿಸಿದರು.

ಡೆತ್‌ ಓವರ್‌ಗಳಲ್ಲಿ ಹಿಟ್ಟರ್‌ಗಳಾದ ಜಾಸನ್‌ ಹೋಲ್ಡರ್‌ ಮತ್ತು ಅಬ್ದುಲ್‌ ಸಮದ್‌ ಕ್ರೀಸಿನಲ್ಲಿದ್ದರು. ಆದರೆ ಈ ಜೋಡಿಯನ್ನು ವರುಣ್‌ ಚಕ್ರವರ್ತಿ ಬೇಗನೇ ಬೇರ್ಪಡಿಸಿದರು. ಹೋಲ್ಡರ್‌ 2 ರನ್‌ ಮಾಡಿ ನಿರ್ಗಮಿಸಿದರು. ಅದೇ ಓವರ್‌ನಲ್ಲಿ 2 ಸಿಕ್ಸರ್‌ ಬಾರಿಸಿದ ಸಮದ್‌ ಸಿಡಿದು ನಿಂತರೂ ಹೆಚ್ಚು ಹೊತ್ತು ಉಳಿಯಲಿಲ್ಲ. ಸೌಥಿ ಮುಂದಿನ ಓವರ್‌ನಲ್ಲೇ ಈ ಅಪಾಯಕಾರಿ ಆಟಗಾರನ ವಿಕೆಟ್‌ ಹಾರಿಸಿದರು. ಸಮದ್‌ ಗಳಿಕೆ 18 ಎಸೆತಗಳಿಂದ 25 ರನ್‌. ಇದು 3 ಸಿಕ್ಸರ್‌ಗಳನ್ನು ಒಳ ಗೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌: ಹೈದರಾಬಾದ್‌-8 ವಿಕೆಟಿಗೆ 115

ಕೆಕೆಆರ್‌-19.4 ಓವರ್‌ಗಳಲ್ಲಿ 4 ವಿಕೆಟಿಗೆ 119.

Leave a Reply

Your email address will not be published. Required fields are marked *