Saturday, 10th May 2025

Karun Nair: ಸತತ 4 ಶತಕ ಬಾರಿಸಿ ದಾಖಲೆ ಬರೆದ ಕರುಣ್ ನಾಯರ್

ವಡೋದರ: ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಸಿಡಿಸಿದ ಕೇವಲ ಎರಡನೇ ಭಾರತೀಯ ಆಟಗಾರ ಎಂಬ ಖ್ಯಾತಿಯ ಕರುಣ್ ನಾಯರ್‌(Karun Nair) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ವಿಜಯ್ ಹಜಾರೆ(Vijay Hazare) ಟ್ರೋಫಿ ದೇಶೀಯ ಏಕದಿನ ಟೂರ್ನಿಯಲ್ಲಿ ಪ್ರಚಂಡ ಬ್ಯಾಟಿಂಗ್‌ ನಡೆಸುವ ಮೂಲಕ ಮತ್ತೆ ಭಾರತ ತಂಡ ಸೇರುವ ನಿರೀಕ್ಷೆಯಲ್ಲಿದ್ದಾರೆ. ಭಾನುವಾರ ನಡೆದಿದ್ದ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸತತ 4 ಶತಕ ಸಿಡಿಸಿದ ಮೂರನೇ ಭಾರತೀಯ ಮತ್ತು ಒಟ್ಟಾರೆ ವಿಶ್ವದ 5ನೇ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

2016ರ ಡಿಸೆಂಬರ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಅಜೇಯ ತ್ರಿಶತಕ ಬಾರಿಸಿದ್ದರು. ಈ ಮೂಲಕ ವೀರೆಂದ್ರ ಸೆಹವಾಗ್ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಬಾರಿಸಿದ ಏಕೈಕ ಭಾರತೀಯ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಆದರೆ ಇದಾದ ಬಳಿಕ ಕರುಣ್ ನಾಯರ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಅವರಿಗೆ ತಂಡದಲ್ಲಿ ಅವಕಾಶವೇ ಸಿಗಲಿಲ್ಲ. ಆದರೂ ದೇಶೀಯ ಕ್ರಿಕೆಟ್‌ನಲ್ಲಿ ನಾಯರ್‌ ತಮ್ಮ ಆಟ ಮುಂದುವರಿಸಿದ್ದರು.

ವಿಜಯ್ ಹಜಾರೆ ಟ್ರೋಫಿ ಆವೃತಿಯೊಂದರಲ್ಲಿ ಗರಿಷ್ಠ ಶತಕ ಸಿಡಿಸಿದ ಎನ್.ಜಗದೀಶನ್ (5) ದಾಖಲೆ ಕೂಡ ಸರಿಗಟ್ಟಿದ್ದಾರೆ. 2020-21ರಲ್ಲಿ ತಮಿಳುನಾಡಿನ ಜಗದೀಶನ್ ಸತತ 5 ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ ಸತತ 4 ಶತಕ ಸಿಡಿಸಿದ್ದರು. ಸದ್ಯ ಕರುಣ್ ಟೂರ್ನಿಯ 6 ಇನಿಂಗ್ಸ್‌ಗಳಲ್ಲಿ ಇದುವರೆಗೆ ಕ್ರಮವಾಗಿ 112, 44, 163, 111, 112, 122* ರನ್ ಸಿಡಿಸಿದ್ದಾರೆ.

2022ರಲ್ಲಿ ಕರುಣ್‌ ನಾಯರ್‌ ‘ಪ್ರೀತಿಯ ಕ್ರಿಕೆಟ್, ನನಗೆ ಇನ್ನೂ ಒಂದು ಅವಕಾಶ ನೀಡಿ’ ಎಂದು ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಬಾರಿ ವೈರಲ್‌ ಕೂಡ ಆಗಿತ್ತು. ಕರ್ನಾಟಕ ತಂಡದ ಅವಿಭಾಜ್ಯ ಭಾಗವಾಗಿದ್ದ ಕರುಣ್‌ಗೆ ಆ ಬಳಿಕ ರಾಜ್ಯ ತಂಡದಲ್ಲಿಯೂ ಸರಿಯಾದ ಅವಕಾಶ ಸಿಗಲಿಲ್ಲ. ಇದೇ ಬೇಸರದಲ್ಲಿ ಅವರು ಕರ್ನಾಟಕ ತಂಡ ತೊರೆದು ವಿದರ್ಭ ತಂಡ ಸೇರಿದ್ದರು. ಇದೀಗ ವಿದರ್ಭ ತಂಡದ ನಾಯಕನಾಗಿ ತಂಡವನ್ನು ವಿಜಯ್ ಹಜಾರೆ ಕೂಟದಲ್ಲಿ ಸೆಮಿಫೈನಲ್‌ ತಲುಪಿಸಿದ್ದಾರೆ. ಗುರುವಾರ ನಡೆಯುವ ಸೆಮಿ ಪಂದ್ಯದಲ್ಲಿ ವಿದರ್ಭ ತಂಡ ಮಹಾರಾಷ್ಟ್ರದ ವಿರುದ್ಧ ಆಡಲಿದೆ.

Leave a Reply

Your email address will not be published. Required fields are marked *