ಬೆಂಗಳೂರು: ಭಾನುವಾರ ನಡೆದಿದ್ದ ಅಂಡರ್-19 ಮಹಿಳಾ(U-19 cricket) ಏಕದಿನ ಕ್ರಿಕೆಟ್ನಲ್ಲಿ ಮುಂಬೈನ 14 ವರ್ಷದ ಇರಾ ಜಾಧವ್(Ira Jadhav) 157 ಎಸೆತಗಳಲ್ಲಿ 346 ರನ್ ಸಿಡಿಸಿ ಇದೀಗ ಕ್ರಿಕೆಟ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ. ಬೆಂಗಳೂರು ಹೊರವಲಯದ ಆಲೂರು ಕ್ರೀಡಾಂಗಣದಲ್ಲಿ ನಡೆದಿದ್ದ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಐರಾ ಜಾಧವ್ ತ್ರಿಶತಕ ಸಿಡಿಸಿದ ಮೊದಲ ಭಾರತೀಯ ಭಾರತೀಯ ಆಟಗಾರ್ತಿ ಎನಿಸಿಕೊಂಡರು.
ತ್ರಿಶತಕ ಬಾರಿಸುವ ಮೂಲಕ ಐರಾ ಜಾಧವ್ ಟೀಮ್ ಇಂಡಿಯಾದ ಸ್ಮೃತಿ ಮಂಧನಾ(Smriti Mandhana) ದಾಖಲೆಯನ್ನು ಮುರಿದರು. ಸ್ಮೃತಿ ಮಂಧನಾ ಈ ಹಿಂದೆ 19 ವಯೋಮಿತಿ ಕ್ರಿಕೆಟ್ನಲ್ಲಿ ವೈಯಕ್ತಿಕ ಗರಿಷ್ಠ ಅಜೇಯ 224 ರನ್ ಬಾರಿಸಿದ್ದರು. ಇದು ಈ ವರೆಗಿನ ದಾಖಲೆಯಾಗಿತ್ತು. ಇದೀಗ ಐರಾ ಜಾಧವ್ ತಾನೆದುರಿಸಿದ 157 ಎಸೆತಗಳಲ್ಲಿ 42 ಬೌಂಡರಿ, 16 ಸಿಕ್ಸರ್ ಸಹಿತ ಅಜೇಯ 346 ರನ್ ಸಿಡಿಸಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಪಂದ್ಯದಲ್ಲಿ ಮುಂಬೈ ತಂಡ 3 ವಿಕೆಟ್ಗೆ 563 ರನ್ಗಳಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮೇಘಾಲಯ 25.4 ಓವರ್ಗಳಲ್ಲಿ ಕೇವಲ 19 ರನ್ಗಳಿಗೆ ಸರ್ವಪತನ ಕಂಡು 544 ರನ್ ಹೀನಾಯ ಸೋಲನುಭವಿಸಿತು.
ಏಕದಿನ ಸರಣಿ ಗೆದ್ದ ಭಾರತದ ಮಹಿಳೆಯರು
ಐರ್ಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯವನ್ನು 116 ರನ್ನುಗಳಿಂದ ಭರ್ಜರಿಯಾಗಿ ಗೆದ್ದ ಭಾರತ ಮಹಿಳಾ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು 2-0 ಮುನ್ನಡೆಯೊಂದಿಗೆ ಗೆದ್ದು ಬೀಗಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಅವರ ಮೊದಲ ಅಂತಾರಾಷ್ಟ್ರೀಯ ಶತಕ ಈ ಪಂದ್ಯದ ವಿಶೇಷವಾಗಿತ್ತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 5 ವಿಕೆಟಿಗೆ 370 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಐರ್ಲೆಂಡ್ 7 ವಿಕೆಟಿಗೆ 254 ರನ್ ಗಳಿಸಿ ಶರಣಾಯಿತು. ಒಟ್ಟು 91 ಎಸೆತ ಎದುರಿಸಿದ ಜೆಮಿಮಾ 12 ಬೌಂಡರಿ ನೆರವಿನಿಂದ 102 ರನ್ ಬಾರಿಸಿ ಸಂಭ್ರಮಿಸಿದರು. ಈ ವೇಳೆ ಏಕದಿನದಲ್ಲಿ ಸಾವಿರ ರನ್ ಪೂರ್ತಿಗೊಳಿಸಿದ ಹಿರಿಮೆಗೂ ಪಾತ್ರರಾದರು.