ವಡೋಧರ: ವೆಸ್ಟ್ ಇಂಡೀಸ್ ವಿರುದ್ದ ಮೊದಲನೇ ಏಕದಿನ ಪಂದ್ಯದಲ್ಲಿ(INDW vs WIW) ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ವಿಶೇಷ ದಾಖಲೆಯನ್ನು ಬರೆದಿದ್ದಾರೆ. ನಾಯಕಿಯಾಗಿ 1000ಕ್ಕೂ ಅಧಿಕ ರನ್ ಗಳಿಸಿದ ಭಾರತದ 10ನೇ ಬ್ಯಾಟರ್ ಎಂಬ ವಿಶೇಷ ಸಾಧನೆಗೆ ಹರ್ಮನ್‌ಪ್ರೀತ್ ಭಾಜನರಾಗಿದ್ದಾರೆ. ಭಾರತ ಪುರುಷರ ತಂಡದ ನಾಯಕರಾದ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಮೊಹಮ್ಮದ್ ಅಝರುದ್ದೀನ್, ಸೌರವ್ ಗಂಗೂಲಿ, ರಾಹುಲ್ ಡ್ರಾವಿಸ್, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಹಾಗೂ ಕಪಿಲ್ ದೇವ್ ಅವರು ಕೂಡ ಈ ದಾಖಲೆಯನ್ನು ಬರೆದಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ ಬಳಿಕ ಈ ಸಾಧನೆ ಮಾಡಿದ ಎರಡನೇ ನಾಯಕಿ ಹರ್ಮನ್‌ಪ್ರೀತ್ ಕೌರ್.
ಭಾನುವಾರ ಇಲ್ಲಿನ ಕೊಟಂಬಿ ಸ್ಟೇಡಿಯಂನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಈ ದಾಖಲೆಯನ್ನು ಬರೆದಿದ್ದಾರೆ. ಭಾರತ ತಂಡದ ನಾಯಕಿಯಾಗಿ ಹರ್ಮನ್‌ಪ್ರೀತ್ ಕೌರ್ ಅವರು 26 ಪಂದ್ಯಗಳಿಂದ 53. 26ರ ಸರಾಸರಿಯಲ್ಲಿ 1012 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು ಮೂರು ಶತಕಗಳು ಹಾಗೂ 5 ಅರ್ಧಶತಕಗಳನ್ನು ಬಾರಿಸಿದ್ದಾರೆ. 2022ರಲ್ಲಿ ಇಂಗ್ಲೆಂಡ್ ವಿರುದ್ದ ಗಳಿಸಿದ್ದ 1012 ರನ್‌ಗಳು ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ಭಾರತ ಏಕದಿನ ತಂಡದ ನಾಯಕನಾಗಿ/ನಾಯಕಿಯಾಗಿ ಅತಿ ಹೆಚ್ಚು ರನ್ ಗಳಿಸಿದವರು
ಎಂಎಸ್ ಧೋನಿ – 200 ಪಂದ್ಯಗಳಿಂದ 6641 ರನ್
ವಿರಾಟ್ ಕೊಹ್ಲಿ – 95 ಪಂದ್ಯಗಳಿಂದ 5449 ರನ್
ಮಿಥಾಲಿ ರಾಜ್ – 155 ಪಂದ್ಯಗಳಿಂದ 5319 ರನ್
ಮೊಹಮ್ಮದ್ ಅಜರುದ್ದೀನ್ – 174 ಪಂದ್ಯಗಳಿಂದ 5239 ರನ್
ಸೌರವ್ ಗಂಗೂಲಿ – 146 ಪಂದ್ಯಗಳಿಂದ 5082 ರನ್
ರಾಹುಲ್ ದ್ರಾವಿಡ್ – 79 ಪಂದ್ಯಗಳಿಂದ 2658 ರನ್
ಸಚಿನ್ ತೆಂಡೂಲ್ಕರ್ – 73 ಪಂದ್ಯಗಳಿಂದ 2454 ರನ್
ರೋಹಿತ್ ಶರ್ಮಾ – 48 ಪಂದ್ಯಗಳಿಂದ 2204 ರನ್
ಕಪಿಲ್ ದೇವ್ – 74 ಪಂದ್ಯಗಳಿಂದ 1564 ರನ್
ಹರ್ಮನ್‌ಪ್ರೀತ್ ಕೌರ್ – 26 ಪಂದ್ಯಗಳಿಂದ 1012 ರನ್
ಗಾಯದಿಂದ ಕಮ್‌ಬ್ಯಾಕ್ ಮಾಡಿದ ಹರ್ಮನ್‌ಪ್ರೀತ್ ಕೌರ್
ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಏಕದಿನ ಪಂದ್ಯದ ಹೊತ್ತಿಗೆ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಗಾಯದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ನವಮುಂಬೈನಲ್ಲಿ ವಿಂಡೀಸ್ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ ಬ್ಯಾಟಿಂಗ್ ನಂತರ ಅವರು ತಂಡದಿಂದ ಹೊರಗುಳಿದಿದ್ದರು. ಈ ಹಿನ್ನೆಲೆಯಲ್ಲಿ ಸ್ಮೃತಿ ಮಂಧಾನಾ ಅವರು ಕೊನೆಯ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಈ ಎರಡೂ ಪಂದ್ಯಗಳಲ್ಲಿ ಭಾರತ ತಂಡವನ್ನು ಸ್ಮೃತಿ ಮಂಧಾನಾ ಅವರು ಮುನ್ನಡೆಸಿದ್ದರು.
ಮೊದಲನೇ ಏಕದಿನ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಅವರು 23 ಎಸೆತಗಳಲ್ಲಿ 34 ರನ್‌ಗಳನ್ನು ಗಳಿಸಿದ್ದರು ಹಾಗೂ ಇದರಲ್ಲಿ ಅವರು ಮೂರು ಬೌಂಡರಿಗಳು ಹಾಗೂ ಒಂದು ಸಿಕ್ಸರ್ ಬಾರಿಸಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, ತನ್ನ ಪಾಲಿನ 50 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳದುಕೊಂಡು 314 ರನ್‌ಗಳನ್ನು ಕಲೆ ಹಾಕಿತು.
ವೆಸ್ಟ್ ಇಂಡೀಸ್ 103ಕ್ಕೆ ಆಲ್‌ಔಟ್
ಬಳಿಕ 315 ರನ್‌ಗಳ ಗುರಿ ಹಿಂಬಾಲಿಸಿದ ವೆಸ್ಟ್ ಇಂಡೀಸ್ ತಂಡವನ್ನು ರೇಣುಕಾ ಸಿಂಗ್ ತಮ್ಮ ಮಾರಕ ಬೌಲಿಂಗ್ ದಾಳಿಯಿಂದ 103 ರನ್‌ಗಳಿಗೆ ಆಲ್‌ಔಟ್ ಮಾಡುವಲ್ಲಿ ಭಾರತಕ್ಕೆ ನೆರವು ನೀಡಿದರು. 10 ಓವರ್‌ಗಳನ್ನು ಬೌಲ್ ಮಾಡಿದ ಅವರು ಕೇವಲ29 ರನ್ ನೀಡಿ ಪ್ರಮುಖ 5 ವಿಕೆಟ್ ಸಾಧನೆ ಮಾಡಿದರು.
ಈ ಸುದ್ದಿಯನ್ನು ಓದಿ: INDW vs WIW: ರೇಣುಕಾ ಸಿಂಗ್ ಮಾರಕ ದಾಳಿಗೆ ವಿಂಡೀಸ್ ತತ್ತರ, ತವರಿನಲ್ಲಿ ಭಾರತಕ್ಕೆ ದಾಖಲೆಯ ಜಯ!