Friday, 16th May 2025

INDW vs WIW: ರೇಣುಕಾ ಸಿಂಗ್‌ ಮಾರಕ ದಾಳಿಗೆ ವಿಂಡೀಸ್‌ ತತ್ತರ, ತವರಿನಲ್ಲಿ ಭಾರತಕ್ಕೆ ದಾಖಲೆಯ ಜಯ!

INDW vs WIW: Smriti Mandhana, Renuka power India to biggest ODI win at home against west Indies

ವಡೋಧರ: ಸ್ಮೃತಿ ಮಂಧಾನ (91 ರನ್‌) ಬ್ಯಾಟಿಂಗ್‌ ಹಾಗೂ ರೇಣುಕಾ ಸಿಂಗ್‌ (29ಕ್ಕೆ 5) ಅವರ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಭಾರತ ತಂಡ ಮೊದಲನೇ ಮಹಿಳಾ ಏಕದಿನ ಪಂದ್ಯದಲ್ಲಿ (INDW vs WIW) ವೆಸ್ಟ್‌ ಇಂಡೀಸ್‌ ವಿರುದ್ಧ 211 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಇದು ತವರಿನಲ್ಲಿ ಭಾರತ ಮಹಿಳಾ ತಂಡ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ದೊಡ್ಡ ಜಯ ಇದಾಗಿದೆ. ಆ ಮೂಲಕ ಏಕದಿನ ಸರಣಿಯಲ್ಲಿ ಟೀಮ್‌ ಇಂಡಿಯಾ 1-0 ಮುನ್ನಡೆ ಪಡೆದಿದೆ.

ಭಾನುವಾರ ಇಲ್ಲಿನ ಕೊಟಿಂಬಿ ಸ್ಟೇಡಿಯಂನಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 315 ರನ್‌ಗಳ ಬೃಹತ್‌ ಮೊತ್ತದ ಗುರಿಯನ್ನು ಹಿಂಬಾಲಿಸಿದ್ದ ವೆಸ್ಟ್‌ ವಿಂಡೀಸ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಅದರಲ್ಲಿಯೂ ರೇಣುಕಾ ಸಿಂಗ್‌ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ವಿಂಡೀಸ್‌, 26.2 ಓವರ್‌ಗಳಗೆ 103 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಹೀನಾಯ ಸೋಲು ಅನುಭವಿಸಿತು.

ವೆಸ್ಟ್‌ ಇಂಡೀಸ್‌ ಪರ ನಾಯಕಿ ಶೆಮೈನ್‌ ಕ್ಯಾಂಪ್‌ಬೆಲ್‌ (21) ಹಾಗೂ ಎಫಿ ಫ್ಲಚರ್‌ (24*) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟರ್‌ಗಳು ಭಾರತೀಯ ಬೌಲಿಂಗ್‌ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದರು. ಭಾರತದ ಬೌಲಿಂಗ್‌ ದಾಳಿಯನ್ನು ಮೆಟ್ಟಿ ನಿಲ್ಲಲು ವೆಸ್ಟ್‌ ಇಂಡೀಸ್‌ನ ಯಾವುದೇ ಬ್ಯಾಟರ್‌ನಿಂದ ಸಾಧ್ಯವಾಗಲಿಲ್ಲ. ಭಾರತದ ಪರ ಮಿಂಚಿನ ಬೌಲಿಂಗ್‌ ಬೌಲಿಂಗ್‌ ದಾಳಿ ನಡೆಸಿದ ವೇಗಿ ರೇಣುಕಾ ಸಿಂಗ್‌, 10 ಓವರ್‌ಗಳಿಗೆ ಕೇವಲ 29 ರನ್‌ಗಳನ್ನು ನೀಡಿ 5 ವಿಕೆಟ್‌ ಸಾಧನೆ ಮಾಡಿದರು. ಇವರಿಗೆ ಸಾಥ್‌ ನೀಡಿದ್ದ ಪ್ರಿಯಾ ಮಿಶ್ರಾ ಎರಡು ವಿಕೆಟ್‌ ಕಿತ್ತರು.

314 ರನ್‌ಗಳನ್ನು ಕಲೆ ಹಾಕಿದ್ದ ಭಾರತ

ಇದನ್ನು ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ಮಹಿಳಾ ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 314 ರನ್‌ಗಳನ್ನು ದಾಖಲಿಸಿತ್ತು. ಆ ಮೂಲಕ ಎದುರಾಳಿ ವೆಸ್ಟ್‌ ಇಂಡೀಸ್‌ ತಂಡಕ್ಕೆ 315 ರನ್‌ಗಳ ಗುರಿಯನ್ನು ನೀಡಿತ್ತು. ಭಾರತದ ಪರ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಸ್ಮೃತಿ ಮಂಧಾನಾ ಅವರು 102 ಎಸೆತಗಳಲ್ಲಿ 91 ರನ್‌ಗಳನ್ನು ಗಳಿಸಿದರು.

ಶತಕ ವಂಚಿತರಾದ ಸ್ಮೃತಿ ಮಂಧಾನಾ

ಅತ್ಯುತ್ತಮ ಫಾರ್ಮ್‌ನಲ್ಲಿರುವ ಭಾರತದ ಆರಂಭಿಕ ಬ್ಯಾಟ್ಸ್‌ವುಮೆನ್‌ ಸ್ಮೃತಿ ಮಂಧಾನಾ ಅವರು ಕೇವಲ 9 ರನ್‌ಗಳ ಅಂತರದಲ್ಲಿ ಶತಕ ವಂಚಿತರಾದರು. ಆರಂಭದಿಂದಲು ಸೊಗಸಾಗಿ ಬ್ಯಾಟ್‌ ಮಾಡಿದ ಸ್ಮೃತಿ ಮಂಧಾನಾ, ಡುಬ್ಯೂಟೆಂಟ್‌ ಪ್ರತೀಕಾ ರಾವಲ್‌ (40) ಅವರ ಜೊತೆಗೆ ಮುರಿಯದ ಮೊದಲನೇ ವಿಕೆಟ್‌ಗೆ 110 ರನ್‌ಗಳನ್ನು ಕಲೆ ಹಾಕಿದ್ದರು. ಅಲ್ಲದೆ ತಮ್ಮ ಬ್ಯಾಟ್‌ನಿಂದ ಆಡಿದ 102 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ 91 ರನ್‌ಗಳನ್ನು ಕಲೆ ಹಾಕಿದರು. ಇನ್ನೇನು ಶತಕ ಸಿಡಿಸುವ ಸನಿಹದಲ್ಲಿ ಅವರು ಝೈದಾ ಜೇಮ್ಸ್‌ಗೆ ವಿಕೆಟ್‌ ಒಪ್ಪಿಸಿದರು.

ನಂತರದ ಕ್ರಮಾಂಕಗಳಲ್ಲಿ ಬ್ಯಾಟ್‌ ಮಾಡಿದ್ದ ಹರ್ಲೀನ್ ಡಿಯೋಲ್‌ ಹಾಗೂ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರು ಕ್ರಮವಾಗಿ 44 ರನ್‌ ಹಾಗೂ 34 ರನ್‌ಗಳನ್ನು ಕಲೆ ಹಾಕಿದ್ದರು. ತಂಡದ ಮೊತ್ತವನ್ನು 250ರ ಸನಿಹಕ್ಕೆ ತಂದು ವಿಕೆಟ್‌ ಒಪ್ಪಿಸಿದರು. ನಂತರ ರಿಚಾ ಘೋಷ್‌ 26 ರನ್‌ಗಳು ಹಾಗೂ ಜೆಮಿಮಾ ರೊಡ್ರಿಗಸ್‌ 31 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿದರು.

ಸ್ಕೋರ್‌ ವಿವರ

ಭಾರತ: 50 ಓವರ್‌ಗಳಿಗೆ 314- 9 (ಸ್ಮೃತಿ ಮಂಧಾನಾ 91 ರನ್‌, ಹರ್ಲೀನ್ ಡಿಯೋಲ್‌ 44 ರನ್‌, ಹರ್ಮನ್‌ಪ್ರೀತ್‌ ಕೌರ್‌ 34 ರನ್‌, ರಿಚಾ ಘೋಷ್‌ 26 ರನ್‌, ಜೆಮಿಮಾ ರೊಡ್ರಿಗಸ್‌ 31 ರನ್‌; ಝೈಡಾ ಜೇಮ್ಸ್‌ 45ಕ್ಕೆ 5)

ವೆಸ್ಟ್‌ ಇಂಡೀಸ್‌: 26.2 ಓವರ್‌ಗಳಲ್ಲಿ 103-10 (ಶೆಮೈನ್‌ ಕ್ಯಾಂಪ್‌ಬೆಲ್‌ 21 ರನ್‌ ಹಾಗೂ ಎಫಿ ಫ್ಲಚರ್‌ 24* ರನ್‌; ರೇಣುಕಾ ಸಿಂಗ್‌ 25 ಕ್ಕೆ 5, ಪ್ರಿಯಾ ಮಿಶ್ರಾ 222

ಪಂದ್ಯ ಶ್ರೇಷ್ಠ ಪ್ರಶಸ್ತಿ: ರೇಣುಕಾ ಸಿಂಗ್‌

ಈ ಸುದ್ದಿಯನ್ನು ಓದಿ: INDW vs WIW: ಭಾರತ ವನಿತೆಯರ ವಿರುದ್ಧ ವೆಸ್ಟ್‌ ಇಂಡೀಸ್‌ಗೆ 9 ವಿಕೆಟ್‌ ಭರ್ಜರಿ ಜಯ!