Sunday, 11th May 2025

IND vs NZ: ಕಿವೀಸ್‌ ವಿರುದ್ಧ ದಾಖಲೆ ಬರೆದ ರಿಷಭ್‌ ಪಂತ್‌

ಮುಂಬಯಿ: ನ್ಯೂಜಿಲ್ಯಾಂಡ್‌(IND vs NZ) ವಿರುದ್ಧ ಸಾಗುತ್ತಿರುವ ಅಂತಿಮ ಟೆಸ್ಟ್‌(IND vs NZ 3rd Test) ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬಿರುಸಿನ ಬ್ಯಾಟಿಂಗ್‌ ಮೂಲಕ ಅರ್ಧಶತಕ ಬಾರಿಸಿದ ಟೀಮ್‌ ಇಂಡಿಯಾದ ಎಡಗೈ ಬ್ಯಾಟರ್‌& ಕೀಪರ್‌ ರಿಷಭ್‌ ಪಂತ್‌(Rishabh Pant) ದಾಖಲೆಯೊಂದನ್ನು ಬರೆದಿದ್ದಾರೆ.

ಒಂದು ರನ್‌ ಗಳಿಸಿದ್ದಲ್ಲಿಂದ ಶನಿವಾರ ಬ್ಯಾಟಿಂಗ್‌ ಆರಂಭಿಸಿದ ರಿಷಭ್‌ ಪಂತ್‌ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಒತ್ತು ನೀಡಿದರು. ಮುನ್ನುಗ್ಗಿ ಬ್ಯಾಟ್‌ ಬೀಸಿದ ಪಂತ್‌ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಟೆಸ್ಟ್‌ನಲ್ಲಿ ನ್ಯೂಜಿಲ್ಯಾಂಡ್‌ ಪರ ಅತಿ ಕಡಿಮೆ ಎಸೆತಗಳಿಂದ ಅರ್ಧಶತ ಬಾರಿಸಿದ ಮೊದಲ ಭಾರತೀಯ ಬ್ಯಾಟರ್‌ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌(41 ಎಸೆತ) ಹೆಸರಿನಲ್ಲಿತ್ತು.

ಅತಿ ವೇಗವಾಗಿ ಟೆಸ್ಟ್‌ನಲ್ಲಿ ಅರ್ಧಶತಕ ಬಾರಿಸಿದ ಭಾರತೀಯ ದಾಖಲೆ ಕೂಡ ಪಂತ್‌ ಹೆಸರಿನಲ್ಲಿದೆ. 2022 ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನಲ್ಲಿ ಪಂತ್‌ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.

ಕಿವೀಸ್‌ ವಿರುದ್ಧದ ಪಂದ್ಯದಲ್ಲಿ ಪಂತ್‌ 59 ಎಸೆತ ಎದುರಿಸಿ 8 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 60 ರನ್‌ ಚಚ್ಚಿದರು. ಈ ವೇಳೆ ಒಂದು ಜೀವದಾನ ಕೂಡ ಲಭಿಸಿತ್ತು. 5ನೇ ವಿಕೆಟ್‌ಗೆ ಶುಭಮನ್‌ ಗಿಲ್‌ ಜತೆ ಸೇರಿಕೊಂಡು ಪಂತ್‌ 96 ರನ್‌ಗಳ ಜತೆಯಾಟ ನಿಭಾಯಿಸಿದರು. ಸದ್ಯ ಭಾರತ ಭೋಜನ ವಿರಾಮದ ಅಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 195 ರನ್‌ ಬಾರಿಸಿ ಇನ್ನೂ 40 ರನ್‌ ಹಿನ್ನಡೆಯಲ್ಲಿದೆ. ಶುಭಮನ್‌ ಗಿಲ್‌(70) ಮತ್ತು ರವೀಂದ್ರ ಜಡೇಜಾ(10) ಕ್ರೀಸ್‌ನಲ್ಲಿದ್ದಾರೆ.

ಇದನ್ನೂ ಓದಿ IND vs NZ: ಮೂರನೇ ಟೆಸ್ಟ್‌ನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ

ಜಡ್ಡು ವಿಶೇಷ ದಾಖಲೆ

ರವೀಂದ್ರ ಜಡೇಜಾ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಕೀಳುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ 314 ವಿಕೆಟ್‌ಗಳನ್ನು ಪೂರೈಸಿ ಭಾರತ ಪರ ಅತ್ಯಧಿಕ ಟೆಸ್ಟ್‌ ವಿಕೆಟ್‌ ಕಿತ್ತ ಬೌಲರ್‌ಗಳ ಯಾದಿಯಲ್ಲಿ 5ನೇ ಸ್ಥಾನಕ್ಕೇರುವ ಮೂಲಕ ಮಾಜಿ ಆಟಗಾರ ಜಹೀರ್ ಖಾನ್(312) ಹಾಗೂ ಇಶಾಂತ್​ ಶರ್ಮಾ(312*) ದಾಖಲೆಯನ್ನು ಹಿಂದಿಕ್ಕಿದರು. ಇದೇ ವೇಳೆ ಭಾರತದ ನೆಲದಲ್ಲಿ ಅತ್ಯಧಿಕ ಐದು ವಿಕೆಟ್‌ ಗೊಂಚಲು ಪಡೆದ ಮಾಜಿ ಆಟಗಾರ ಕಪಿಲ್‌ ದೇವ್‌ ದಾಖಲೆಯನ್ನೂ ಜಡೇಜಾ ಹಿಂದಿಕ್ಕಿದ್ದಾರೆ. ಕಪಿಲ್‌ ತವರಿನಲ್ಲಿ 11 ಬಾರಿ ಐದು ವಿಕೆಟ್ ಪಡೆದಿದ್ದರೆ, ಜಡೇಜಾ 12 ಬಾರಿ ಈ ಸಾಧನೆ ಮಾಡಿದ್ದಾರೆ. ಒಟ್ಟಾರೆಯಾಗಿ ಕಪಿಲ್‌ ದೇವ್‌ 23 ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.