Sunday, 18th May 2025

IND vs AUS: ʻನಮ್ಮ ಬ್ಯಾಟಿಂಗ್‌ ಉತ್ತಮವಾಗಿಲ್ಲʼ-ಪಿಂಕ್‌ ಬಾಲ್‌ ಟೆಸ್ಟ್‌ ಸೋಲಲು ಕಾರಣ ತಿಳಿಸಿದ ರೋಹಿತ್‌ ಶರ್ಮಾ!

We didn't bat well, they batted well-That was the difference', says Rohit Sharma after pink ball Test loss

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ದದ ಎರಡನೇ ಹಾಗೂ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ (IND vs AUS) ಭಾರತ ತಂಡ 10 ವಿಕೆಟ್‌ಗಳ ಸೋಲು ಅನುಭವಿಸಿದೆ. ಆ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಪಂದ್ಯದ ಸೋಲಿನ ಬಳಿಕ ಮಾತನಾಡಿದ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ, ಬ್ಯಾಟಿಂಗ್‌ ವೈಫಲ್ಯದಿಂದಲೇ ನಾವು ಸೋತಿದ್ದೇವೆಂದು ತಿಳಿಸಿದ್ದಾರೆ.

ಪರ್ತ್‌ ಟೆಸ್ಟ್‌ನಲ್ಲಿ 295 ರನ್‌ಗಳ ಗೆಲುವು ಪಡೆದಿದ್ದ ಭಾರತ ತಂಡ, ಇಲ್ಲಿನ ಅಡಿಲೇಡ್‌ ಓವಲ್‌ ಕ್ರೀಡಾಂಣಗಣದಲ್ಲಿ ಕೇವಲ ಮೂರೇ ದಿನಗಳಲ್ಲಿ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸೋಲು ಅನುಭವಿಸಿತು. ಭಾರತ ತಂಡ, ಪ್ರಥಮ ಹಾಗೂ ದ್ವಿತೀಯ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 180 ರನ್‌ಗಳು ಹಾಗೂ 175 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಕೆಎಲ್‌ ರಾಹುಲ್‌, ರಿಷಭ್‌ ಪಂತ್‌ ಸೇರಿದಂತೆ ಸ್ಟಾರ್‌ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಇದರ ಫಲವಾಗಿ ಟೀಮ್‌ ಇಂಡಿಯಾ ಸೋಲು ಅನುಭವಿಸಬೇಕಾಯಿತು.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್‌ ಶರ್ಮಾ, ಈ ವಾರ ನಮಗೆ ನಿರಾಶಾದಾಯಕವಾಗಿತ್ತು. ಗೆಲುವಿಗೆ ಅಗತ್ಯವಾದಂತೆ ನಾವು ಆಡಲಿಲ್ಲ. ಆಸ್ಟ್ರೇಲಿಯಾ ನಮಗಿಂತ ಉತ್ತಮ ಪ್ರದರ್ಶನ ತೋರಿದೆ. ಪಂದ್ಯದ ವೇಳೆ ನಮಗೆ ಹಲವು ಅವಕಾಶಗಳಿದ್ದವು, ಆದರೆ ಅವುಗಳನ್ನು ನಾವು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ರೋಹಿತ್‌ ಶರ್ಮಾ ಹೇಳಿಕೆ

“ನಾವು ಪರ್ತ್‌ನಲ್ಲಿ ತೋರಿದ್ದ ಪ್ರದರ್ಶನ ವಿಶೇಷವಾಗಿತ್ತು. ನಾವು ಇಲ್ಲಿ ಅದನ್ನೇ ಪುನರಾವರ್ತಿಸಲು ಬಯಸಿದ್ದೆವು. ಆದರೆ ಪ್ರತಿ ಟೆಸ್ಟ್ ಪಂದ್ಯವು ವಿಭಿನ್ನ ಸವಾಲನ್ನು ತರುತ್ತದೆ. ಪಿಂಕ್ ಬಾಲ್‌ನಿಂದ ಈ ಪಂದ್ಯ ಕಷ್ಟಕರ ಎಂದು ನಮಗೆ ತಿಳಿದಿತ್ತು. ಆದರೆ ನಾನು ಹೇಳಿದಂತೆ ಆಸ್ಟ್ರೇಲಿಯಾ ಉತ್ತಮವಾಗಿ ಆಡಿದೆ. ಐದು ಪಂದ್ಯಗಳ ಸರಣಿ ಇದೀಗ 1-1ರಲ್ಲಿ ಸಮಬಲಗೊಂಡಿದೆ. ಡಿಸೆಂಬರ್ 14 ರಿಂದ ಪ್ರಾರಂಭವಾಗುವ ಗಬ್ಬಾ ಟೆಸ್ಟ್‌ಗೆ ತಂಡ ಸಿದ್ಧವಾಗಿದೆ,” ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.

“ಮುಂದಿನ ಪಂದ್ಯಕ್ಕೆ ಹೆಚ್ಚು ಸಮಯವಿಲ್ಲ. ಪರ್ತ್‌ನಲ್ಲಿ ನಾವು ತೋರಿದ್ದ ಉತ್ತಮ ಪ್ರದರ್ಶನ ಮತ್ತು ಕೊನೆಯ ಬಾರಿ ಗಬ್ಬಾದಲ್ಲಿ ನಾವು ತೋರಿದ್ದ ಪ್ರದರ್ಶನವನ್ನು ನಾವು ನೆನಪಿಸಿಕೊಳ್ಳಬೇಕು. ಗಬ್ಬಾದಲ್ಲಿ ನಾವು ಉತ್ತಮ ನೆನಪುಗಳನ್ನು ಹೊಂದಿದ್ದೇವೆ. ಪ್ರತಿಯೊಂದು ಟೆಸ್ಟ್ ಪಂದ್ಯದ ಸವಾಲನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ಉತ್ತಮ ಆರಂಭವನ್ನು ಪಡೆಯಬೇಕಾಗಿದೆ,” ಎಂದು ಟೀಮ್‌ ಇಂಡಿಯಾ ನಾಯಕ ಹೇಳಿದ್ದಾರೆ.

ಆಸೀಸ್‌ ನಾಯಕ ಪ್ಯಾಟ್‌ ಕಮಿನ್ಸ್‌ ಹೇಳಿದ್ದೇನು?

ಪಂದ್ಯದ ಬಳಿಕ ಮಾತನಾಡಿದ ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌, “ಇದು ನಮಗೆ ಉತ್ತಮ ವಾರವಾಗಿದೆ. ಪರ್ತ್ ಟೆಸ್ಟ್ ನಂತರ ನಾವು ಉತ್ತಮ ಪ್ರದರ್ಶನ ತೋರಬಹುದೆಂದು ನಮಗೆ ತಿಳಿದಿತ್ತು. ಈ ಪಂದ್ಯದಲ್ಲಿ ನಾವು ನಮ್ಮ ಲಯಕ್ಕೆ ಮರಳಿದ್ದೇವೆ. ಈ ಗೆಲುವು ಸಾಕಷ್ಟು ತೃಪ್ತಿ ತಂದಿದೆ. ಮಿಚೆಲ್‌ ಸ್ಟಾರ್ಕ್ ಮೊದಲ ದಿನದಲ್ಲಿಯೇ 6 ವಿಕೆಟ್ ಪಡೆಯುವ ಮೂಲಕ ಗೆಲುವಿಗೆ ಅಡಿಪಾಯ ಹಾಕಿದ್ದರು. ಅವರು ಮತ್ತೆ ಮತ್ತೆ ಇದೇ ಪ್ರದರ್ಶನವನ್ನು ತೋರುತ್ತಾರೆ. ಅವರು ನಮ್ಮ ತಂಡದಲ್ಲಿ ಇರುವುದು ನಮ್ಮ ಅದೃಷ್ಟ. ಸ್ಕಾಟ್ ಬೋಲೆಂಡ್‌ ಕೂಡ ಅದ್ಭುತವಾಗಿ ಬೌಲ್‌ ಮಾಡಿದ್ದಾರೆ. ಆಶಾದಾಯಕವಾಗಿ, ಮುಂದಿನ ಪಂದ್ಯದಲ್ಲಿ ಜಾಶ್‌ ಹೇಝಲ್‌ವುಡ್ ಕೂಡ ಮರಳುತ್ತಾರೆ,” ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ಆಸ್ಟ್ರೇಲಿಯಾಗೆ ತೆರಳಲು ವೇಗಿ ಮೊಹಮ್ಮದ್‌ ಶಮಿ ಸಜ್ಜು! ವರದಿ