ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ (IND vs AUS) ಕೊನೆಯ ಎರಡು ಪಂದ್ಯಗಳಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಎರಡು ಶತಕಗಳನ್ನು ಸಿಡಿಸಲಿದ್ದಾರೆಂದು ಭಾರತೀಯ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಸೆಲೆಕ್ಟರ್ ಚೇತನ್ ಶರ್ಮಾ ಭವಿಷ್ಯ ನುಡಿದಿದ್ದಾರೆ. ಈ ಟೆಸ್ಟ್ ಸರಣಿಯ ಪರ್ತ್ ಟೆಸ್ಟ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ 16 ತಿಂಗಳ ಬಳಿಕ ಮಾಜಿ ನಾಯಕ ಮೂರಂಕಿ ವೈಯಕ್ತಿಕ ಮೊತ್ತವನ್ನು ಪೂರ್ಣಗೊಳಿಸಿದ್ದರು. ಆದರೆ, ಇದೇ ಲಯವನ್ನು ಮುಂದಿನ ಮೂರು ಇನಿಂಗ್ಸ್‌ಗಳಲ್ಲಿ ಮುಂದುವರಿಸುವಲ್ಲಿ ವಿರಾಟ್ ಕೊಹ್ಲಿ ವಿಫಲರಾಗಿದ್ದಾರೆ.
ಎಎನ್‌ಐ ಜೊತೆ ಮಾತನಾಡಿದ ಚೇತನ್ ಶರ್ಮಾ, “ಅವರು ನಮಗಾಗಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಈ ಕಾರಣದಿಂದ ಅವರ ಮೇಲೆ ನಮಗೆ ನಿರೀಕ್ಷೆಗಳು ಜಾಸ್ತಿ ಇವೆ. ಅವರು ಮುಂದಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಲಿದ್ದಾರೆಂಬ ವಿಶ್ವಾಸ ನನಗಿದೆ. ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಅವರು ಎರಡು ಶತಕಗಳನ್ನು ಸಿಡಿಸುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಒಟ್ಟು ಮೂರು ಶತಕಗಳನ್ನು ಸಿಡಿಸಲಿದ್ದಾರೆಂದು ನಾನು ಈ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಭವಿಷ್ಯ ನುಡಿದಿದ್ದೆ,” ಎಂದು ತಿಳಿಸಿದ್ದಾರೆ.
2020ರಿಂದ ವಿರಾಟ್ ಕೊಹ್ಲಿ ಫಾರ್ಮ್ ಕಳಪೆ
ವಿರಾಟ್ ಕೊಹ್ಲಿ ಪರ್ತ್‌ನಲ್ಲಿ ಶತಕ ಸಿಡಿಸಿದ ಬಳಿಕ ಆಡಿದ ಮೂರು ಇನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 21 ರನ್‌ಗಳು ಮಾತ್ರ. 2020ರಿಂದ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಪ್ರದರ್ಶನದಲ್ಲಿ ಕುಸಿತವನ್ನು ಕಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ 36ರ ವಯಸ್ಸಿ ಬ್ಯಾಟ್ಸ್‌ಮನ್ ಕೇವಲ ಮೂರು ಶತಕಗಳನ್ನು ಮಾತ್ರ ಸಿಡಿಸಿದ್ದಾರೆ. ಅಂದಿನಿಂದ ಇಲ್ಲಿಯವರೆಗೂ ಅವರು ಆಡಿದ 65 ಟೆಸ್ಟ್ ಇನಿಂಗ್ಸ್‌ಗಳಿಂದ 31.67ರ ಸರಾಸರಿಯಲ್ಲಿ 1964 ರನ್‌ಗಳನ್ನು ಗಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ವಿರಾಟ್ ಕೊಹ್ಲಿ ಸಾಕಷ್ಟು ಹಿನ್ನಡೆಯನ್ನು ಅನುಭವಿಸಿದ್ದಾರೆ ಹಾಗೂ ಅವರ ಟೆಸ್ಟ್ ರನ್‌ಗಳ ಸರಾಸರಿಯು 40ಕ್ಕೆ ಕುಸಿದಿದೆ. ಹಲವು ಮಾಜಿ ಕ್ರಿಕೆಟಿಗರು ಕೂಡ ವಿರಾಟ್ ಕೊಹ್ಲಿ ಅವರು ತಮ್ಮ ಕಳಪೆ ಫಾರ್ಮ್‌ನಿಂದ ಹೊರಬರಬೇಕೆಂದು ಸಲಹೆಯನ್ನು ನೀಡಿದ್ದಾರೆ. ಅದರಂತೆ ವಿರಾಟ್ ಕೊಹ್ಲಿ ಕೂಡ ತರಬೇತಿ ಸೆಷನ್‌ನಲ್ಲಿ ಸಾಕಷ್ಟು ಕಠಿಣ ಪರಿಶ್ರಮವನ್ನು ಪಡುತ್ತಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ವಿರಾಟ್ ಕೊಹ್ಲಿ, ಆಫ್ ಸ್ಟಂಪ್ ಹೊರಗಡೆಯ ಎಸೆತಗಳಲು ಆಡಲು ಹೋಗಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಇದು ಇವರ ವೀಕ್ನೆಸ್ ಆಗಿದ್ದು, ಆಸೀಸ್ ಬೌಲರ್‌ಗಳು ಸುಲಭವಾಗಿ ಔಟ್ ಮಾಡುತ್ತಿದ್ದಾರೆ.
ಡಿಸೆಂಬರ್ 26 ರಂದು ಮೂರನೇ ಟೆಸ್ಟ್
ಡಿಸೆಂಬರ್ 26 ರಂದು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ. ಮೂರನೇ ಆವೃತಿಯ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಭಾರತ ತಂಡ ಅರ್ಹತೆ ಪಡೆಯಬೇಕೆಂದರೆ ಇನ್ನುಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ.
ಈ ಸುದ್ದಿಯನ್ನು ಓದಿ: IND vs AUS: ಆಸ್ಟ್ರೇಲಿಯಾದಲ್ಲಿ ತಾವು ಸಿಡಿಸಿದ್ದ ನೆಚ್ಚಿನ ಶತಕವನ್ನು ರಿವೀಲ್ ಮಾಡಿದ ವಿರಾಟ್ ಕೊಹ್ಲಿ!