Sunday, 18th May 2025

IND vs AUS: ಅಡಿಲೇಡ್‌ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XIನಲ್ಲಿ 3 ಬದಲಾವಣೆ ಸಾಧ್ಯತೆ!

IND vs AUS: Three changes India might make for Second Test against Australia at Adelaide Oval

ಅಡಿಲೇಡ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಹಾಗೂ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ (IND vs AUS) ಡಿಸೆಂಬರ್‌ 6 ರಂದು ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೆ ಉಭಯ ತಂಡಗಳು ಕಠಿಣ ತಾಲೀಮು ನಡೆಸುತ್ತಿವೆ. ಅಡಿಲೇಡ್‌ ಟೆಸ್ಟ್‌ಗೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಏಕೆಂದರೆ ನಾಯಕ ರೋಹಿತ್‌ ಶರ್ಮಾ ಅವರು ಪರ್ತ್‌ ಟೆಸ್ಟ್‌ಗೆ ಅಲಭ್ಯರಾಗಿದ್ದರು. ಅವರು ಇದೀಗ ಎರಡನೇ ಟೆಸ್ಟ್‌ಗೆ ಮರಳಿದ್ದಾರೆ ಹಾಗೂ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

2021ರ ಪ್ರವಾಸದಲ್ಲಿ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ದ ಇದೇ ಮೈದಾನದಲ್ಲಿ ಪಿಂಕ್‌ ಬಾಲ್‌ ಟೆಸ್ಟ್‌ ಆಡಿತ್ತು ಹಾಗೂ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಪಿಂಕ್‌ ಬಾಲ್‌ ಚೆಂಡನ್ನು ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಬ್ಯಾಟಿಂಗ್‌ಗೆ ಕಠಿಣವಾಗಲಿದೆ. ಅಲ್ಲದೆ ಲೈಟ್ಸ್‌ ನಡುವೆ ಚೆಂಡು ಬೌನ್ಸ್‌ ಆಗಲಿದೆ. ಈ ಹಿನ್ನೆಲೆಯಲ್ಲಿ ಹೊಸ ಚೆಂಡಿನಲ್ಲಿ ಬ್ಯಾಟ್‌ ಮಾಡುವುದು ಸವಾಲಿನಿಂದ ಕೂಡಿರುತ್ತದೆ.

ಮೊದಲನೇ ಟೆಸ್ಟ್‌ ಗೆದ್ದಿದ್ದ ಭಾರತ ತಂಡ

ಪರ್ತ್‌ನ ಆಪ್ಟಸ್‌ ಸ್ಟೇಡಿಯಂನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ 295 ರನ್‌ಗಳಿಂದ ಗೆಲುವು ಪಡೆದಿತ್ತು. ಆ ಮೂಲಕ ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಟೀಮ್‌ ಇಂಡಿಯಾ 1-0 ಮುನ್ನಡೆಯನ್ನು ಪಡೆದಿದೆ. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಹಾಗೂ ವಿರಾಟ್‌ ಕೊಹ್ಲಿ ಶತಕವನ್ನು ಸಿಡಿಸಿದ್ದರು. ಜಸ್‌ಪ್ರೀತ್‌ ಬುಮ್ರಾ ಅವರು ಬೌಲಿಂಗ್‌ನಲ್ಲಿ ಮಿಂಚಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

  1. ಧ್ರುವ್‌ ಜುರೆಲ್‌ಗೆ ಸ್ಥಾನಕ್ಕೆ ರೋಹಿತ್‌ ಶರ್ಮಾ

ಎರಡನೇ ಮಗುವಿನ ಕಾರಣ ರೋಹಿತ್‌ ಶರ್ಮಾ ಅವರು ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಉಪ ನಾಯಕ ಜಸ್‌ಪ್ರೀತ್‌ ಬುಮ್ರಾ ಭಾರತ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ಹೆಚ್ಚಿನ ಬ್ಯಾಟಿಂಗ್‌ ಆಯ್ಕೆಯ ನಿಮಿತ್ತ ಧ್ರುವ್‌ ಜುರೆಲ್‌ ಅವರನ್ನು ಆಡಿಸಲಾಗಿತ್ತು. ಈ ಪಂದ್ಯದಲ್ಲಿ ಧ್ರುವ್‌ ಜುರೆಲ್‌ ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 11 ಮತ್ತು 1 ರನ್‌ ಗಳಿಸಿದ್ದರು. ಅಂದ ಹಾಗೆ ಪರ್ತ್‌ ಟೆಸ್ಟ್‌ನಲ್ಲಿ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್‌ ರಾಹುಲ್‌ ಇನಿಂಗ್ಸ್‌ ಆರಂಭಿಸಿದ್ದರು ಹಾಗೂ ಪ್ರಥಮ ಇನಿಂಗ್ಸ್‌ನಲ್ಲಿ ವೈಫಲ್ಯ ಅನುಭವಿಸಿದರೂ ದ್ವಿತೀಯ ಇನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ್ದರು. ಆದರೆ, ಎರಡನೇ ಟೆಸ್ಟ್‌ನಲ್ಲಿ ಕೆಎಲ್‌ ರಾಹುಲ್‌ ಇನಿಂಗ್ಸ್‌ ಆರಂಭಿಸಲಿದ್ದಾರೆಯೇ? ಅಥವಾ ತಮ್ಮ ಸ್ಥಾನವನ್ನು ರೋಹಿತ್‌ ಶರ್ಮಾಗೆ ಬಿಟ್ಟು ಕೊಟ್ಟು ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆಯೇ ಎಂದು ಕಾದುನೊಡಬೇಕಾಗಿದೆ.

  1. ದೇವದತ್‌ ಪಡಿಕ್ಕಲ್‌ ಸ್ಥಾನಕ್ಕೆ ಶುಭಮನ್‌ ಗಿಲ್‌

ಗಾಯದ ಕಾರಣ ಶುಭಮನ್‌ ಗಿಲ್‌ ಪರ್ತ್‌ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಎ ತಂಡದ ಪರ ಆಡಿದ್ದ ದೇವದತ್‌ ಪಡಿಕ್ಕಲ್‌ ಅವರಿಗೆ ಮೊದಲನೇ ಟೆಸ್ಟ್‌ ಪಂದ್ಯದ ಮೂರನೇ ಕ್ರಮಾಂಕದಲ್ಲಿ ಆಡಲು ಅವಕಾಶ ನೀಡಲಾಗಿತ್ತು. ಆದರೆ, ಈ ಎರಡೂ ಇನಿಂಗ್ಸ್‌ನಲ್ಲಿ ಕನ್ನಡಿಗ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದರು ನಂತರ ದ್ವಿತೀಯ ಇನಿಂಗ್ಸ್‌ನಲ್ಲಿ 25 ರನ್‌ಗಳನ್ನು ಕಲೆ ಹಾಕಿದ್ದರು. ಇದೀಗ ಗಿಲ್‌ ಸಂಪೂರ್ಣ ಫಿಟ್‌ ಇದ್ದಾರೆ. ಅಲ್ಲದೆ ಅವರು ಪ್ರೈಮನ್‌ ಮಿನಿಸ್ಟರ್‌ ವಿರುದ್ದದ ಪಂದ್ಯದಲ್ಲಿ 62 ಎಸೆತಗಳಲ್ಲಿ 50 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ತಾವು ಸಂಪೂರ್ಣ ಫಿಟ್‌ ಆಗಿರುವುದಾಗಿ ಸಾಬೀತುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಡಿಲೇಡ್‌ ಟಸ್ಟ್‌ನಲ್ಲಿ ದೇವದತ್‌ ಪಡಿಕ್ಕಲ್‌ ಅವರ ಸ್ಥಾನವನ್ನು ಗಿಲ್‌ ತುಂಬಲಿದ್ದಾರೆ.

  1. ವಾಷಿಂಗ್ಟನ್‌ ಸುಂದರ್‌ ಸ್ಥಾನಕ್ಕೆ ಆರ್‌ ಅಶ್ವಿನ್‌

ಪಿಂಕ್‌ ಬಾಲ್‌ ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗಿಂತ ವೇಗದ ಬೌಲರ್‌ಗಳಿಗೆ ನೆರವು ನೀಡಲಿದೆ. ಆದರೆ, 2021ರ ಪ್ರವಾಸದ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಭಾರತ ತಂಡಕ್ಕೆ ಆರ್‌ ಅಶ್ವಿನ್‌ ಪ್ರಮುಖ ಅಸ್ತ್ರವಾಗಿದ್ದರು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 191 ರನ್‌ಗಳಿಗೆ ನಿಯಂತ್ರಿಸಲು ಆರ್‌ ಅಶ್ವಿನ್‌ ನೆರವು ನೀಡಿದ್ದರು. ಪ್ರಥಮ ಇನಿಂಗ್ಸ್‌ನಲ್ಲಿ ಅಶ್ವಿನ್‌ ನಾಲ್ಕು ವಿಕೆಟ್‌ ಕಿತ್ತಿದ್ದರೆ, ಎರಡನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡದ ಒಂದೇ ಒಂದು ವಿಕೆಟ್‌ ಅನ್ನು ಭಾರತ ಪಡೆದಿತ್ತು. ಈ ಏಕೈಕ ವಿಕೆಟ್‌ ಪಡೆದಿದ್ದು ಕೂಡ ಆರ್‌ ಅಶ್ವಿನ್‌. ಈ ಹಿನ್ನೆಲೆಯಲ್ಲಿ ಡೇ ನೈಟ್‌ ಟೆಸ್ಟ್‌ಗೆ ಆರ್‌ ಅಶ್ವಿನ್‌ ಅವರನ್ನು ವಾಷಿಂಗ್ಟನ್‌ ಸುಂದರ್‌ ಸ್ಥಾನಕ್ಕೆ ಟೀಮ್‌ ಮ್ಯಾನೇಜ್‌ಮೆಂಟ್‌ ಆಯ್ಕೆ ಮಾಡಬಹುದು. ಬೌಲಿಂಗ್‌ ಜೊತೆಗೆ ಆರ್‌ ಅಶ್ವಿನ್‌ಗೆ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ನೆರವು ನೀಡಬಲ್ಲರು.

ಈ ಸುದ್ದಿಯನ್ನು ಓದಿ: IND vs AUS: ಅಡಿಲೇಡ್‌ ಟೆಸ್ಟ್‌ಗೂ ಮುನ್ನ ಆಸ್ಟ್ರೇಲಿಯಾಗೆ ಆಘಾತ! ಜಾಶ್‌ ಹೇಝಲ್‌ವುಡ್‌ ಔಟ್‌!