Sunday, 18th May 2025

IND vs AUS: ಅಡಿಲೇಡ್‌ನಲ್ಲಿ ಭಾರತದ ಬೌಲರ್‌ಗಳು ಎಸಗಿದ್ದ ತಪ್ಪನ್ನು ರಿವೀಲ್‌ ಮಾಡಿದ ಮಾಂಜ್ರೇಕರ್‌!

IND vs AUS: 'Team India bowlers need to be more relentless vs Australia', says Sanjay Manjrekar

ಅಡಿಲೇಡ್‌: ಆಸ್ಟ್ರೇಲಿಯಾ ವಿರುದ್ದ ಎರಡನೇ ಹಾಗೂ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ (IND vs AUS) ಭಾರತ ತಂಡದ ಬೌಲರ್‌ಗಳ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡ 10 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಆ ಮೂಲಕ ಎರಡು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ 1-1 ಸಮಬಲವನ್ನು ಕಾಯ್ದುಕೊಂಡಿವೆ.

ಭಾರತ ತಂಡದ ಸೋಲಿನ ಬಳಿಕ ಮಾತನಾಡಿದ್ದ ಸಂಜಯ್‌ ಮಾಂಜ್ರೇಕರ್‌, ಹೊನಲು ಬೆಳಕಿನಲ್ಲಿ ಟೀಮ್‌ ಇಂಡಿಯಾ ಬೌಲರ್‌ಗಳು ಆಸೀಸ್‌ ಬ್ಯಾಟ್ಸ್‌ಮನ್‌ಗಳ ಎದುರು ಪಟ್ಟು ಬಿಡದೆ ಬೌಲ್‌ ಮಾಡಬೇಕಾಗಿತ್ತು. ಆದರೆ, ಈ ರೀತಿಯ ಜಿದ್ದು ನಮ್ಮ ಬೌಲರ್‌ಗಳಲ್ಲಿ ಕಾಣಿಸಿಲ್ಲ ಎಂದು ದೂರಿದ್ದಾರೆ. ಆದರೆ, ನೇಥನ್‌ ಮೆಕ್‌ಸ್ವೀನಿ, ಮಾರ್ನಸ್‌ ಲಾಬುಶೇನ್‌ ಹಾಗೂ ಟ್ರಾವಿಸ್‌ ಹೆಡ್‌ ಭಾರತದ ಬೌಲರ್‌ಗಳ ಸವಾಲನ್ನು ಮೆಟ್ಟಿ ನಿಂತರು. ಈ ಹಿನ್ನೆಲೆಯಲ್ಲಿ ಆಸೀಸ್‌, ಪ್ರಥಮ ಇನಿಂಗ್ಸ್‌ನಲ್ಲಿ 157 ರನ್‌ಗಳ ಮುನ್ನಡೆಯನ್ನು ಪಡೆದಿತ್ತು. ಅಂತಿಮವಾಗಿ ಭಾರತ ತಂಡ 10 ವಿಕೆಟ್‌ಗಳಿಂದ ಸೋಲು ಒಪ್ಪಿಕೊಂಡಿತ್ತು.

ಭಾರತೀಯ ಬೌಲರ್‌ಗಳನ್ನು ದೂರಿದ ಮಾಂಜ್ರೇಕರ್‌

“ಅಡಿಲೇಡ್ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಮೂರನೇ ಹಾಗೂ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಎದುರು ಭಾರತದ ಬೌಲರ್‌ಗಳಿಗೆ ಸ್ವಿಂಗ್‌ ಮೂಲಕ ನಿಜವಾದ ಪರೀಕ್ಷೆ ಎದುರಾಗುತ್ತದೆ. ಹೌದು, ಭಾರತ ತಂಡದ ಬೌಲಿಂಗ್‌ ವಿಭಾಗದಲ್ಲಿ ಅನುಭವದ ಕೊರತೆ ಇದೆ. ಬೌಲಿಂಗ್‌ ವಿಭಾಗದಲ್ಲಿ ಮೊಹಮ್ಮದ್‌ ಸಿರಾಜ್‌ ಹಾಗೂ ಹರ್ಷಿತ್‌ ರಾಣಾ ಇದ್ದಾರೆ ಆದರೆ, ಮೊಹಮ್ಮದ್‌ ಶಮಿ ಅನುಪಸ್ಥಿತಿ ತಂಡದಲ್ಲಿ ಕಾಡುತ್ತಿದೆ. ಅಡಿಲೇಡ್‌ ಟೆಸ್ಟ್‌ ಸಂಜೆಯ ಸೆಷನ್‌ನಲ್ಲಿ ಮೊಹಮ್ಮದ್‌ ಶಮಿ ಆಡಿದ್ದರೆ, ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು,” ಎಂದು ಸಂಜಯ್‌ ಮಾಂಜ್ರೇಕರ್‌ ಇಎಸ್‌ಪಿಎನ್‌ ಕ್ರಿಕ್‌ಇನ್ಪೋಗೆ ತಿಳಿಸಿದ್ದಾರೆ.

“ಆದರೆ, ಅತ್ಯುತ್ತಮ ಬ್ಯಾಟ್‌ ಮಾಡಿದ ನೇಥನ್‌ ಮೆಕ್‌ಸ್ವೀನಿ ಹಾಗೂ ಮಾರ್ನಸ್‌ ಲಾಬುಶೇನ್‌ಗೆ ಇದರ ಶ್ರೇಯ ಸಲ್ಲಬೇಕು. ಈ ಬ್ಯಾಟ್ಸ್‌ಮನ್‌ಗಳ ಎದುರು ಭಾರತ ತಂಡದ ಬೌಲರ್‌ಗಳಲ್ಲಿ ಗುಣಮಟ್ಟದ ಬೌಲಿಂಗ್‌ ಕೊರತೆ ಎದ್ದು ಕಾಣುತ್ತಿತ್ತು ಹಾಗೂ ನಮ್ಮ ಬೌಲರ್‌ಗಳಲ್ಲಿ ಜಿದ್ದು ಕಾಣುತ್ತಿರಲಿಲ್ಲ. ಇದರ ನಡುವೆ ಟೀಮ್‌ ಇಂಡಿಯಾದ ಬೌಲಿಂಗ್‌ ದಾಳಿ ಸಾಧಾರಣವಾಗಿ ಕಂಡಿತ್ತು. ಜಸ್‌ಪ್ರೀತ್‌ ಬುಮ್ರಾ ಹಾಗೂ ಮೊಹಮ್ಮದ್‌ ಸಿರಾಜ್‌ ಸ್ವಲ್ಪ ಪರಿಂಣಾಮಕಾರಿಯಾಗಿ ಕಂಡಿದ್ದರು. ಪರ್ತ್‌ ಟೆಸ್ಟ್‌ ರೀತಿ ಪಿಚ್‌ ಇಲ್ಲ ಎಂಬುದನ್ನು ತಡವಾಗಿ ಹರ್ಷಿತ್‌ ರಾಣಾ ಅರಿತುಕೊಂಡಿದ್ದರು,” ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

ಭಾರತ ತಂಡದ ಬ್ಯಾಟಿಂಗ್‌ ವೈಫಲ್ಯ

ಬೌಲರ್‌ಗಳು ಮಾತ್ರವಲ್ಲ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಕೂಡ ದೀರ್ಘಾವಧಿ ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಎರಡನೇ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಭಾರತದ ಬ್ಯಾಟಿಂಗ್‌ ವಿಭಾಗ ಕನಿಷ್ಠ 90 ಓವರ್‌ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಪ್ರಥಮ ಇನಿಂಗ್ಸ್‌ನಲ್ಲಿ ಟೀಮ್‌ ಇಂಡಿಯಾ 180 ರನ್‌ಗಳಿಗೆ ಆಲ್‌ಔಟ್‌ ಆಗಿದ್ದರೆ, ದ್ವಿತೀಯ ಇನಿಂಗ್ಸ್‌ನಲ್ಲಿ 175 ರನ್‌ಗಳಿಗೆ ಕುಸಿದಿತ್ತು. ಮಿಚೆಲ್‌ ಸ್ಟಾರ್ಕ್‌ ಮತ್ತು ಪ್ಯಾಟ್‌ ಕಮಿನ್ಸ್‌ ಕ್ರಮವಾಗಿ ಎರಡೂ ಇನಿಂಗ್ಸ್‌ಗಳಲ್ಲಿ ಭಾರತಕ್ಕೆ ಕಾಡಿದ್ದರು.

ಈ ಸುದ್ದಿಯನ್ನು ಓದಿ: IND vs AUS: ಆಸ್ಟ್ರೇಲಿಯಾಗೆ ತೆರಳಲು ವೇಗಿ ಮೊಹಮ್ಮದ್‌ ಶಮಿ ಸಜ್ಜು! ವರದಿ