ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ (IND vs AUS) ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ನಿರ್ಧಾರದ ಬಗ್ಗೆ ಆಸೀಸ್ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಮ್ಯಾಥ್ಯೂ ಹೇಡನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಟಾಸ್ ಬಳಿಕ ಮಾತನಾಡಿದ್ದ ರೋಹಿತ್ ಶರ್ಮಾ, ಓವರ್ಕಾಸ್ಟ್ ಕಂಡೀಷನ್ಸ್ನಲ್ಲಿ ನಮ್ಮ ಬೌಲರ್ಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದೇನೆಂದು ಸ್ಪಷ್ಟನೆ ನೀಡಿದ್ದರು.
ಆದರೆ, ಮೊದಲನೇ ದಿನದ ಆರಂಭಿಕ ಸೆಷನ್ನಲ್ಲಿ ಪಿಚ್ ಫಾಸ್ಟ್ ಬೌಲರ್ಗಳಿಗೆ ನೆರವು ನೀಡಲಿಲ್ಲ ಹಾಗೂ ಚೆಂಡು ಅಷ್ಟೊಂದು ಚಲನೆಯನ್ನು ಹೊಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ನಿರ್ಧಾರವನ್ನು ಎಲ್ಲರೂ ಪ್ರಶ್ನೆ ಮಾಡಿದರು. ಅದೇ ರೀತಿ ಆಸ್ಟ್ರೇಲಿಯಾ ದಿಗ್ಗಜ ಮ್ಯಾಥ್ಯೂ ಹೇಡನ್ ಅವರು ಕೂಡ ಪ್ರಶ್ನೆ ಮಾಡಿದ್ದಾರೆ.
ಅಚ್ಚರಿ ವ್ಯಕ್ತಪಡಿಸಿದ ಮ್ಯಾಥ್ಯೂ ಹೇಡನ್
“ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿರುವ ನಿರ್ಧಾರದಿಂದ ನನಗೆ ಅಚ್ಚರಿ ಉಂಟಾಗಿದೆ. ಬಹುಶಃ ಅವರು ಇದಕ್ಕೆ ತಯಾರಿ ನಡೆಸಿದ್ದಾರೆಂದು ಭಾವಿಸುತ್ತೇನೆ. ಇಲ್ಲಿನ ಹವಾಮಾನ ನೋಡಿಕೊಂಡು ಅವರು ಈ ನಿರ್ಧಾರ ತೆಗೆದುಕೊಂಡಿರಬಹುದು. ಕಳೆದ ಎರಡು ವಾರಗಳಿಂದ ಇಲ್ಲಿ 12 ಇಂಚು ಮಳೆಯಾಗಿದೆ. ಈಗಲೂ ತುಂಬಾ ಮಳೆಯಾಗುತ್ತಿದೆ. ಗ್ರೌಂಡ್ಸ್ಮ್ಯಾನ್ ಕೂಡ ಇದನ್ನು ಗಮನಿಸಿಕೊಂಡು ಪಿಚ್ ಅನ್ನು ಸಿದ್ದಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಪಿಚ್ ಬ್ಯಾಟಿಂಗ್ಗೆ ನೆರವಾಗಲಿದೆ. ಆದರೆ, ರೋಹಿತ್ ಶರ್ಮಾ ಅವರ ಬೌಲಿಂಗ್ ನಿರ್ಧಾರ ನನಗೆ ಅಚ್ಚರಿಯನ್ನು ತಂದಿದೆ,” ಎಂದು ಮ್ಯಾಥ್ಯೂ ಹೇಡನ್ ತಿಳಿಸಿದ್ದಾರೆ.
“ಈ ಅಂಗಣದಲ್ಲಿ ವಿಶ್ವದಾದ್ಯಂತ ಸ್ಪಿನ್ನರ್ಗಳು ಉತ್ತಮ ಪ್ರದರ್ಶನ ತೋರಿರುವುದನ್ನು ನಾವು ನೋಡಿದ್ದೇವೆ. ಇಲ್ಲಿ ಸಾಮಾನ್ಯ ಹವಾಮಾನ ಇದ್ದರೆ, ಪಿಚ್ನಲ್ಲಿ ಬಿರುಗಳಿದ್ದರೆ, ಸ್ಪಿನ್ನರ್ಗಳು ಮೇಲುಗೈ ಸಾಧಿಸಬಹುದು. ಏಕೆಂದರೆ ಇಲ್ಲಿ ಕಳೆದ ಒಂದು ತಿಂಗಳಿಂದ ಮಳೆಯಾಗುತ್ತಿದೆ. ಆರಂಭದಲ್ಲಿ ವಿಕೆಟ್ ನಿಧಾನಗತಿಯಿಂದ ಕೂಡಿತ್ತು. ಕ್ವೀನ್ಸ್ಲ್ಯಾಂಡ್ನಲ್ಲಿ ನಾವು ವಿಶಿಷ್ಠವಾದ ಹವಾಮಾನವನ್ನು ನೋಡುತ್ತೇವೆ. ಹಾಗಾಗಿ, ಪಂದ್ಯದ ಆರಂಭಿಕ ಎರಡು ದಿನಗಳುನ ಪಿಚ್ ಬ್ಯಾಟ್ಸ್ಮನ್ಗಳಿಗೆ ನೆರವು ನೀಡಲಿದೆ,” ಎಂದು ಆಸೀಸ್ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಹೇಳಿದ್ದಾರೆ.
ಆಸ್ಟ್ರೇಲಿಯಾ: 28-0
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಆಸ್ಟ್ರೇಲಿಯಾ ತಂಡ ಮಳೆ ಬರುವ ಹೊತ್ತಿಗೆ ವಿಕೆಟ್ ನಷ್ಟವಿಲ್ಲದೆ 28 ರನ್ಗಳನ್ನು ಗಳಿಸಿದೆ. ಈ ಪಿಚ್ನಲ್ಲಿ ತಮ್ಮ ಲೈನ್ ಅಂಡ್ ಲೆನ್ತ್ ಅನ್ನು ಕಂಡುಕೊಳ್ಳಲು ಜಸ್ಪ್ರೀತ್ ಬುಮ್ರಾ ಸ್ವಲ್ಪ ಸಮಯವನ್ನು ತೆಗೆದುಕೊಂಡರು. ಮೊಹಮ್ಮದ್ ಸಿರಾಜ್, ಉಸ್ಮಾನ್ ಖವಾಜ ಅವರಿಗೆ ಪರಿಣಾಮಕಾರಿಯಾಗಿ ಬೌಲ್ ಮಾಡಿದ್ದರು. ಅಂದ ಹಾಗೆ ಮಳೆಯ ವಿರಾಮದ ಬಳಿಕ ಭಾರತ ತಂಡದ ಬೌಲರ್ಗಳು ತಮ್ಮ ಲಯವನ್ನು ಕಳೆದುಕೊಂಡಿದ್ದರು.
ಮೊದಲನೇ ದಿನದಾಟ ಸಂಪೂರ್ಣ ಮಳೆ ಬಲಿಯಾಯಿತು. ಆಸ್ಟ್ರೇಲಿಯಾ ತಂಡ 13.2 ಓವರ್ಗಳಿಗೆ ವಿಕೆಟ್ ನಷ್ಟವಿಲ್ಲದೆ 28 ರನ್ಗಳನ್ನು ಗಳಿಸಿತು. ನೇಥನ್ ಮೆಕ್ಸ್ವೀನಿ (4) ಹಾಗೂ ಉಸ್ಮಾನ್ ಖವಾಜ (19) ಅವರು ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಈ ಸುದ್ದಿಯನ್ನು ಓದಿ: IND vs AUS: ಆಸೀಸ್ ವಿರುದ್ಧ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ