Friday, 16th May 2025

IND vs AUS: ‘ದಯವಿಟ್ಟು ವಿದಾಯ ಹೇಳಿ’-ರೋಹಿತ್‌ ಶರ್ಮಾಗೆ ಫ್ಯಾನ್ಸ್‌ ಆಗ್ರಹ!

'Rohit Sharma, please retire'-Fans hurt after India captain fails in MCG Test

ಮೆಲ್ಬರ್ನ್‌: ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ (IND vs AUS) ಭಾರತ ತಂಡದ ನಾಯಕ ರೋಹಿತ್‌ ಶರ್ಮಾರ ಬ್ಯಾಟಿಂಗ್‌ ವೈಫಲ್ಯ ಮುಂದುವರಿದಿದೆ. ಇಲ್ಲಿನ ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಓಪನಿಂಗ್‌ಗೆ ಬಂದ ರೋಹಿತ್‌ ಶರ್ಮಾ, ಕೇವಲ ಮೂರು ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಈ ಸರಣಿಯಲ್ಲಿ ಮತ್ತೊಮ್ಮೆ ಹಿಟ್‌ಮ್ಯಾನ್‌ ತಮ್ಮ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.

ಪಂದ್ಯದ ಎರಡನೇ ದಿನವಾದ ಶುಕ್ರವಾರ ತಮ್ಮ ಐದನೇ ಎಸೆತದಲ್ಲಿ ಪ್ಯಾಟ್‌ ಕಮಿನ್ಸ್‌ ಎಸೆದ ಶಾರ್ಟ್‌ ಬಾಲ್‌ ಅನ್ನು ಹಾಫ್‌ ಪುಲ್‌ ಮಾಡಿದರು. ಆದರೆ, ಮಿಡ್‌ ವಿಕೆಟ್‌ನಲ್ಲಿ ನಿಂತಿದ್ದ ಸ್ಕಾಟ್‌ ಬೋಲೆಂಡ್‌ ಅವರು ಕ್ಯಾಚ್‌ ಪಡೆಯುವಲ್ಲಿ ಯಶಸ್ವಿಯಾದರು. ಆ ಮೂಲಕ ಟೀಮ್‌ ಇಂಡಿಯಾ ನಾಯಕ ಓಪನಿಂಗ್‌ಗೆ ತಮ್ಮ ಬ್ಯಾಟಿಂಗ್‌ ಕ್ರಮಾಂಕವನ್ನು ಬದಲಿಸಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ರೋಹಿತ್‌ ಶರ್ಮಾ ವಿರುದ್ಧ ಅಭಿಮಾನಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ದಯವಿಟ್ಟು ನಿವೃತ್ತಿಯನ್ನು ಪಡೆದುಕೊಳ್ಳಿ ಎಂದು ಆಗ್ರಹಿಸಿದ್ದಾರೆ.

ಎರಡನೇ ಮಗುವಿನ ಜನನ ಕಾರಣ ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದ ರೋಹಿತ್‌ ಶರ್ಮಾ, ಪಿಂಕ್‌ ಬಾಲ್‌ ಟೆಸ್ಟ್‌ ಮೂಲಕ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯನ್ನು ಆರಂಭಿಸಿದ್ದರು. ಈ ಸರಣಿಯಲ್ಲಿ ಆಡಿದ ನಾಲ್ಕು ಇನಿಂಗ್ಸ್‌ಗಳಿಂದ ರೋಹಿತ್‌ ಶರ್ಮಾ ಕ್ರಮವಾಗಿ 3, 6, 10 ಹಾಗೂ 3 ಸೇರಿ ಕೇವಲ 22 ರನ್‌ಗಳನ್ನು ಗಳಿಸಿ ನಿರಾಶೆ ಮೂಡಿಸಿದ್ದಾರೆ.

Clown kohli: ವಿರಾಟ್‌ ಕೊಹ್ಲಿಯನ್ನು ಅವಮಾನಿಸಿದ ಆಸ್ಟ್ರೇಲಿಯಾ ಪತ್ರಿಕೆ!

ಅಡಿಲೇಡ್‌ ಹಾಗೂ ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದ ರೋಹಿತ್‌ ಶರ್ಮಾ, ಕೆಎಲ್‌ ರಾಹುಲ್‌ಗೆ ಇನಿಂಗ್ಸ್‌ ಆರಂಭಿಸಲು ಅವಕಾಶ ನೀಡಿದ್ದರು. ಆದರೆ, ಅವರು ಮಧ್ಯಮ ಕ್ರಮಾಂಕದಲ್ಲಿ ಕನಿಷ್ಠ ಎರಡಂಕಿ ವೈಯಕ್ತಿಕ ಮೊತ್ತವನ್ನು ದಾಖಲಿಸಲು ಸಾಧ್ಯವಾಗಿರಲಿಲ್ಲ. ಆದರೆ, ನಾಲ್ಕನೇ ಟೆಸ್ಟ್‌ಗೂ ಮುನ್ನ ಶುಭಮನ್‌ ಗಿಲ್‌ ಗಾಯಕ್ಕೆ ತುತ್ತಾದ ಕಾರಣ, ರೋಹಿತ್‌ ಶರ್ಮಾ ಅಗ್ರ ಕ್ರಮಾಂಕಕ್ಕೆ ಮರಳುವ ಮೂಲಕ ಕೆಎಲ್‌ ರಾಹುಲ್‌ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಲು ಅನುವು ಮಾಡಿಕೊಟ್ಟರು. ಆದರೂ ಟೀಮ್‌ ಇಂಡಿಯಾ ನಾಯಕನ ಬ್ಯಾಟಿಂಗ್‌ ಫಾರ್ಮ್‌ನಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ.

ರೋಹಿತ್‌ ಶರ್ಮಾ ವಿರುದ್ಧ ಅಭಿಮಾನಿಗಳು ಆಕ್ರೋಶ

ರೋಹಿತ್‌ ಶರ್ಮಾ ಔಟ್‌ ಆಗಿದ್ದ ವಿಡಿಯೋವನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ಶೇರ್‌ ಮಾಡಿದೆ. ಇದಕ್ಕೆ ಅಭಿಮಾನಿಯೊಬ್ಬರು ಕಾಮೆಂಟ್‌ ಹಾಕಿದ್ದಾರೆ. “ನಿಮ್ಮಲ್ಲಿ ಯಾವುದೇ ಅವಮಾನ ಉಳಿದಿಲ್ಲವಾದರೆ, ದಯವಿಟ್ಟು ತಂಡವನ್ನು ತೊರೆಯಿರಿ. ನೀವು ತಂಡಕ್ಕೆ ಬಂದ ಬಳಿಕ, ಗೆಲುವಿನ ಪ್ಲೇಯಿಂಗ್‌ XI ಅನ್ನು ಬದಲಿಸಿದಿರಿ. ನೀವು ಓಪನಿಂಗ್‌ ಕಾಂಬಿನೇಷನ್‌ ಅನ್ನು ಬದಲಿಸಿದಿರಿ. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಗೆಲ್ಲದ ತಂಡವನ್ನು ಕಟ್ಟಿದ್ದೀರಿ. ನೀವು ತಂಡಕ್ಕೆ ಹೊರೆಯಾಗಿದ್ದೀರಿ,” ಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.

ರೋಹಿತ್‌ ಶರ್ಮಾ ನಾಯಕತ್ವವನ್ನು ಟೀಕಿಸಿದ ರವಿ ಶಾಸ್ತ್ರಿ

“ಆಸ್ಟ್ರೇಲಿಯಾ ಎಲ್ಲಾ ಹಾದಿಯಲ್ಲಿ ಉತ್ತಮವಾಗಿದೆ. ಆದರೆ ಭಾರತ ತಂಡ ತನ್ನ ಉಪಾಯದಲ್ಲಿ ಎಡವುತ್ತಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆರಂಭಿಕ 45 ನಿಮಿಷಗಳಲ್ಲಿ ಯಾವುದೇ ವಿಕೆಟ್‌ ನೀಡದೆ, 50-60 ರನ್‌ ಕಲೆ ಹಾಕುವ ಗೇಮ್‌ಪ್ಲ್ಯಾನ್‌ನೊಂದಿಗೆ ಆಸ್ಟ್ರೇಲಿಯಾ ಮೈದಾನಕ್ಕಿಳಿದಿತ್ತು.ಒಂದು ಹಂತದಲ್ಲಿ ಆಸ್ಟ್ರೇಲಿಯಾ ಒಂದು ಹಂತದಲ್ಲಿ 311 ಕ್ಕೆ 6 ವಿಕೆಟ್‌ ಕಳೆದುಕೊಂಡಿತ್ತು. ನಂತರ ಅವರ ಮೊದಲ ಗುರಿ 350 ರನ್‌ಗಳನ್ನು ಕಲೆ ಹಾಕುವುದಾಗಿತ್ತು. ಒಮ್ಮೆ ಅವರು ಅಂದುಕೊಂಡಿದ್ದ ರನ್‌ಗಳನ್ನು ಕಲೆ ಹಾಕಿದ ಬಳಿಕ ಅವರ ಕೆಲಸ ಸುಲಭವಾಗಿತ್ತು,” ಎಂದು ರವಿ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ರೋಹಿತ್‌ ಶರ್ಮಾ ವೈಫಲ್ಯಕ್ಕೆ ಕಾರಣ ತಿಳಿಸಿದ ಸುನೀಲ್‌ ಗವಾಸ್ಕರ್‌!